ವಿಜಯಪುರ: ಆ್ಯಕ್ಟಿವಾ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಬಳಿಕ ಕಾರಿನ ಅಡಿ ಸಿಲುಕಿದ್ದ ಸ್ಕೂಟರ್ ಸವಾರನನ್ನು ಸುಮಾರು ಎರಡೂವರೆ ಕಿ.ಮೀ.ದೂರದವರೆಗೆ ಎಳೆದುಕೊಂಡು ಹೋಗಿರುವ ಭೀಕರ ಅಪಘಾತ ನಗರದಲ್ಲಿ ಗುರುವಾರ ಸಂಜೆ ನಡೆದಿದೆ.
ಇಂಡಿ ತಾಲ್ಲೂಕಿನ ಅಗರಖೇಡ ಗ್ರಾಮದ ನಿವಾಸಿ, ವಕೀಲ ರವಿ ಮೇಲಿನಮನಿ(37) ಅಪಘಾತದಲ್ಲಿ ಭೀಕರವಾಗಿ ಸಾವಿಗೀಡಾದ ಸ್ಕೂಟರ್ ಚಾಲಕ ಎಂದು ಗುರುತಿಸಲಾಗಿದೆ.
ವಿಜಯಪುರದ ಬಸವನಗರದ ರಸ್ತೆಯಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ಆ್ಯಕ್ಟಿವಾ ಸ್ಕೂಟರ್ ಮೇಲೆ ಕುಳಿತಿದ್ದ ಮೇಲಿನಮನಿ ಅವರ ದೇಹ ಕಾರಿನ ಅಡಿಯಲ್ಲಿ ಸಿಲುಕಿಕೊಂಡಿದೆ. ರಸ್ತೆಯಲ್ಲಿ ನಿಂತಿದ್ದ ಜನರು ಕೂಗಿದರೂ ಕಾರು ಚಾಲಕ ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ಸುಮಾರು ಎರಡು ಕಿ.ಮೀ.ದೂರದಲ್ಲಿರುವ ಜಿಲ್ಲಾ ಪಂಚಾಯ್ತಿ ಪ್ರವೇಶದ್ವಾರದ ವರೆಗೂ ಸ್ಕೂಟರ್ ಸವಾರನನ್ನು ಎಳೆದುಕೊಂಡು ಹೋಗಿದ್ದು, ಶವ ಕಾರಿನಿಂದ ಬೇರ್ಪಟ್ಟ ಬಳಿಕ ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಘಟನೆಯಲ್ಲಿ ವಕೀಲ ಮೇಲಿನಮನಿ ದೇಹ ಛಿದ್ರ, ಛಿದ್ರವಾಗಿದೆ.
ಕಾರಿಗೆ ನಂಬರ್ ಪ್ಲೇಟ್ ಇರಲಿಲ್ಲ. ಇದೊಂದು ಪೂರ್ವಯೋಜಿತ ಘಟನೆ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸಾವಿಗೀಡಾದ ರವಿ ಮೇಲಿನಮನಿ ಅವರು ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಅವರ ಸಂಬಂಧಿಕ ಎಂದು ತಿಳಿದುಬಂದಿದೆ. ಕಳೆದ ಎರಡು ವರ್ಷಗಳಿಂದ ವಿಜಯಪುರ ಜಿಲ್ಲಾ ಸೆಷನ್ಸ್ ಕೋರ್ಟ್ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಡಿವೈಎಸ್ಪಿ ಬಸವರಾಜ ಯಲಿಗಾರ ಭೇಟಿ ನೀಡಿ ಪರಿಶೀಲಿಸಿದ್ದು, ಘಟನೆ ಹಿನ್ನೆಲೆ ತನಿಖೆಯಿಂದ ಖಚಿತವಾಗಬೇಕಿದೆ.