ನವದೆಹಲಿ : ಲೋಕಸಭಾ ಚುನಾವಣೆಯ ನಂತರ ಮೊಬೈಲ್ ಟೆಲಿಕಾಂ ಕಂಪನಿಗಳು ಶುಲ್ಕವನ್ನು ಶೇ.25ರಷ್ಟು ಹೆಚ್ಚಿಸಲು ಯೋಜಿಸುತ್ತಿವೆ ಎಂದು ವರದಿಯಾಗಿದೆ.
ಬ್ರೋಕರೇಜ್ ಸಂಸ್ಥೆ ಆಕ್ಸಿಸ್ ಕ್ಯಾಪಿಟಲ್ನ ಇತ್ತೀಚಿನ ವರದಿಯು, ಟೆಲಿಕಾಂ ಕಂಪನಿಗಳು ಮತ್ತೊಂದು ಸುತ್ತಿನ ಶುಲ್ಕ ಹೆಚ್ಚಳಕ್ಕೆ ಯೋಜಿಸುತ್ತಿದ್ದು, ಭಾರತದಲ್ಲಿನ ಮೊಬೈಲ್ ಫೋನ್ ಬಳಕೆದಾರರು ಶೀಘ್ರದಲ್ಲೇ ತಮ್ಮ ಬಿಲ್ಗಳಲ್ಲಿ ಹೆಚ್ಚಳ ಕಾಣಬಹುದು ಎಂದು ಹೇಳಿದೆ.
ಬೆಲೆಗಳಲ್ಲಿನ ಈ ಹೆಚ್ಚಳವು ಟೆಲಿಕಾಂ ಆಪರೇಟರ್ಗಳ ಸರಾಸರಿ ಆದಾಯವನ್ನು ಪ್ರತಿ ಬಳಕೆದಾರರಿಗೆ (ARPU) ಹೆಚ್ಚಿಸುವ ನಿರೀಕ್ಷೆಯಿದೆ.
ವರದಿಯ ಪ್ರಕಾರ, ದೇಶದ ದೊಡ್ಡ ಟೆಲಿಕಾಂ ಆಪರೇಟರ್ ಕಂಪನಿಗಳು ಮುಂಬರುವ ದಿನಗಳಲ್ಲಿ ತಮ್ಮ ಸುಂಕದ ಯೋಜನೆಗಳನ್ನು ಶೇಕಡಾ 25 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಯಾಕೆಂದರೆ ಹೆಚ್ಚುತ್ತಿರುವ ಸ್ಪರ್ಧೆ ಮತ್ತು ಬೃಹತ್ 5G ಹೂಡಿಕೆಯ ನಡುವೆ ಅವು ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿವೆ.
ದೂರಸಂಪರ್ಕ ಕಂಪನಿಗಳು ಗ್ರಾಹಕರಿಗೆ 5ಜಿ ಸೇವೆ ಒದಗಿಸಲು ಅಪಾರ ಪ್ರಮಾಣದ ಹಣ ವಿನಿಯೋಗ ಮಾಡಿವೆ. ಹೀಗಾಗಿ ಈ ಹಣ ಹೂಡಿಕೆಯಿಂದ ಲಾಭ ಪಡೆಯುವ ಸಲುವಾಗಿ ಮೊಬೈಲ್ ಸೇವೆಯ ಶುಲ್ಕವನ್ನು ಹೆಚ್ಚಿಸಲಾಗುತ್ತಿದೆ ಎಂದು ವರದಿ ಹೇಳಿದೆ.
ನಗರ ಪ್ರದೇಶದ ಗ್ರಾಹರಕ ವೆಚ್ಚವು ಒಟ್ಟು ವೆಚ್ಚದ 3.2% ರಿಂದ 3.6% ಕ್ಕೆ ಏರುತ್ತದೆ. ಆದರೆ ಗ್ರಾಮೀಣ ಚಂದಾದಾರರಿಗೆ ಇದು 5.2% ರಿಂದ 5.9% ಕ್ಕೆ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಲಾಗಿದೆ.