ಕಾಸರಗೋಡು: ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ ಎರಡು ವರ್ಷದ ಮಗುವೊಂದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತಪಟ್ಟ ಮಗುವನ್ನು ಕುಂಬಳೆ ಭಾಸ್ಕರ ನಗರದ ನಿವಾಸಿ ಅನ್ವರ್- ಮೆಹರೂಫಾ ದಂಪತಿ ಪುತ್ರ ಅನಸ್ ಎಂದು ಗುರುತಿಸಲಾಗಿದೆ. ಪಿಸ್ತಾವನ್ನು ತಿನ್ನುತ್ತಿದ್ದಾಗ ಅದರ ಸಿಪ್ಪೆ ಬಾಲಕನ ಗಂಟಲಲ್ಲಿ ಸಿಲುಕಿದೆ. ಇದನ್ನು ಗಮನಿಸಿದ ಮನೆಯವರು ಸಿಪ್ಪೆಯ ಒಂದು ತುಂಡನ್ನು ಹೊರತೆಗೆದಿದ್ದರು. ನಂತರ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ತಪಾಸಣೆ ನಡೆಸಿದಾಗ ಗಂಟಲಲ್ಲಿ ಯಾವುದೇ ವಸ್ತುಗಳು ಕಂಡುಬರುತ್ತಿಲ್ಲ ಎಂದು ತಿಳಿಸಿದ ನಂತರ ಮನೆಗೆ ಕರೆದುಕೊಂಡು ಬರಲಾಗಿತ್ತು ಎನ್ನಲಾಗಿದೆ.
ಆದರೆ, ಭಾನುವಾರ ಬೆಳಿಗ್ಗೆ ಬಾಲಕನಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ. ವಿದೇಶದಲ್ಲಿರುವ ಮಗುವಿನ ತಂದೆ ಅನ್ವರ್ ಅವರು ಕಳೆದ ವಾರವಷ್ಟೇ ರಜೆಯಲ್ಲಿ ಊರಿಗೆ ಬಂದಿದ್ದು, ರಜೆ ಮುಗಿದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಮತ್ತೆ ವಿದೇಶಕ್ಕೆ ತೆರಳಿದ್ದರು.