About Us

ನಮ್ಮ ಬಗ್ಗೆ 
ಬೆಳಗಾವಿಯ ಜನದನಿ ಜನಜೀವಾಳ ಬೆಳಗಾವಿಯಲ್ಲಿ ಏಳು ದಶಕಗಳ ಹಿಂದೆಯೇ ಕನ್ನಡ ಕಟ್ಟಲು ಪಣ ತೊಟ್ಟ ಬ.ಮ.ಏಳುಕೋಟಿ ಅವರ ಹೆಸರು ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದೆ.

ಕನ್ನಡದ ಬೆಳವಣಿಗೆಯ ಏಕೈಕ ಹೊಂಗನಸು ಇಟ್ಟುಕೊಂಡು ಬೆಳಗಾವಿಯನ್ನು ಕನ್ನಡನಾಡಿನ ಜೊತೆಗೆ ಸೇರಿಸಲು ಅತ್ಯಂತ ಪರಿಣಾಮಕಾರಿ ಮಾಧ್ಯಮ ಪತ್ರಿಕೆ ಎನ್ನುವುದನ್ನು ಮನಗಂಡ ಏಳುಕೋಟಿ ಅವರು "ಜನಜೀವಾಳ" ಹೆಸರಿನಲ್ಲಿ ಜನತೆಯ ಆಶೋತ್ತರಗಳನ್ನು ಈಡೇರಿಸಲು ೧೯೪೮ ರಲ್ಲಿ ಪತ್ರಿಕೆಯ ಉದಯಕ್ಕೆ ಕಾರಣರಾಗಿರುವುದು ಇತಿಹಾಸ.

ಬೆಳಗಾವಿ ಅದರಲ್ಲೂ ಕನ್ನಡದ ವಿಷಯದಲ್ಲಿ ಯಾವ ಪತ್ರಿಕೆ ಇದ್ದರೆ ಅದು "ಜನಜೀವಾಳ" ಎನ್ನುವುದನ್ನು ಮಾಡಿ ತೋರಿಸಿದ ಕೀರ್ತಿ ಏಳುಕೋಟಿಯವರದ್ದಾಗಿದೆ. ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಬರಹಕ್ಕೆ ಆಡಳಿತ ವ್ಯವಸ್ಥೆ ನಡುಗುತ್ತಿದ್ದದ್ದು ಪತ್ರಿಕೆಯ ನೇರ-ನಿಷ್ಠುರ ನಿಲುವಿಗೆ ಸಾಕ್ಷಿ.

ಬೆಳಗಾವಿ ಕನ್ನಡ ನೆಲದೊಂದಿಗೆ ಸಹಸ್ರಾರು ವರ್ಷಗಳಿಂದ ಹೊಂದಿದ್ದ ಕರುಳಬಳ್ಳಿಯ ಸಂಬಂಧವನ್ನು ರಾಜ್ಯ ಪುನರ್ ವಿಂಗಡಣೆ ಕಾಲಕ್ಕೆ ಆಗಮಿಸಿದ್ದ ವಿವಿಧ ಆಯೋಗಗಳ ಎದುರು ಸಾಬೀತುಪಡಿಸಿ ಬೆಳಗಾವಿ ಕರ್ನಾಟಕದೊಂದಿಗೆ ಉಳಿಯಲು ತನ್ನ ಅಳಿಲುಸೇವೆ ನೀಡಿದ ಹಿರಿಮೆ ಹೊಂದಿದೆ.

ವಾರಪತ್ರಿಕೆಯನ್ನು ದಿನಪತ್ರಿಕೆ ಮಾಡಬೇಕೆಂಬ "ಜನಜೀವಾಳ"ದ ಸಂಸ್ಥಾಪಕ ಬ.ಮ.ಏಳುಕೋಟಿ, ಅವರ ಸುಪುತ್ರ ಜನಜೀವಾಳ ಏಳುಕೋಟಿಯವರ ಕನಸು ನನಸಾಗಲು ಏಳು ದಶಕವೇ ಬೇಕಾಯಿತು. ಜನಜೀವಾಳ ಏಳುಕೋಟಿ ನಿಧನಾನಂತರ ಅವರ ಧರ್ಮಪತ್ನಿ ಶಾಂತಾ ಏಳುಕೋಟಿ ಅವರು ಪತ್ರಿಕೆಯ ಸಾರಥ್ಯ ವಹಿಸಿಕೊಂಡ ನಂತರ ದಿನಪತ್ರಿಕೆಯಾಗಿ ಹೊರ ಹೊಮ್ಮಿತು. ಆಧುನಿಕ ಕಾಲಮಾನಕ್ಕೆ ತಕ್ಕಂತೆ ಇದೀಗ ಅಂತರ್ಜಾಲ ಮಾಧ್ಯಮದಲ್ಲಿಯೂ "ಜನಜೀವಾಳ" ತಾಜಾ ಸುದ್ದಿಗಳನ್ನು ಕ್ಷಿಪ್ರವಾಗಿ ಬಿತ್ತರಿಸಲು ತೆರೆದುಕೊಂಡಿದೆ. ಈ ಮೂಲಕ ಹೊಸತನಕ್ಕೆ ತಕ್ಕಂತೆ ತನ್ನ ಕಿಟಕಿಯನ್ನು ತೆರೆದುಕೊಂಡು; ಮತ್ತೊಂದು ಮಗ್ಗುಲಿಗೆ ಪತ್ರಿಕೆ ತೆರೆದುಕೊಂಡಿದೆ.

- ವ್ಯವಸ್ಥಾಪಕ ಸಂಪಾದಕ.


ಜನಜೀವಾಳ ಒಂದು ಅವಲೋಕನ.

“ಸ್ವಾಭಿಮಾನದ ಬದುಕಿಗೆ ಕಷ್ಟಪಟ್ಟು ಕಲಿಯಾಗು” ಎಂಬ ಸಂದೇಶವನ್ನು ಯುವಜನಾಂಗಕ್ಕೆ ನೀಡಿದ ನೀತಿವಂತ ಬ.ಮ.ಏಳುಕೋಟಿ ಇಂದು ನಮ್ಮ ಜೊತೆಯಲ್ಲಿಲ್ಲ. ಅದರೆ ಅವರು ಬಿಟ್ಟ ಬೆಳಕು, ಚಿರಂತನ ಸ್ವಾಭಿಮಾನ, ಉಕ್ಕಿನಂತಹ ವ್ಯಕ್ತಿತ್ವ, ಬಡಬಗ್ಗರಿಗೆ ಬೆಲ್ಲದಚ್ಚು, ಕನ್ನಡಾಂಬೆಯ ಪಾದಪುಷ್ಪವಾಗಿದ್ದ ಜನಪ್ರಿಯ ಬ.ಮ. ಏಳುಕೋಟಿ ಅವರು ತಮ್ಮ ಜನಪರ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಜನಕಂಜಿ ನಡೆಯದೆ ಮನಕ್ಕಂಜಿ ನಡೆದ ಧೀರ ದಿಟ್ಟ ವ್ಯಕ್ತಿತ್ವ. ಬಸವ -ಮಾರ್ಕ್ಸವಾದಗಳನ್ನು ಮೆಚ್ಚಿಕೊಂಡಿದ್ದರಿಂದ ಆತ್ಮಸಾಕ್ಷಿಯಾಗಿ ನಡೆದು ಪತ್ರಿಕೋದ್ಯಮದ ಮೂಲಕ ಜನ ಜೀವಾಳಕ್ಕೆ ಮಿಡಿದವರು. ಅದನ್ನು ಸಾಕ್ಷಿಕರಿಸಲು ‘ಜನ ಜೀವಾಳ’ ಪತ್ರಿಕೆಯನ್ನು ಆರಂಭಿಸಿ, ಆ ಮೂಲಕ ಸಾಮಾಜಿಕ ವೇದಿಕೆಗೆ ನೇರವಾಗಿ ಇಳಿದವರು.

ಬೆಳಗಾವಿ ಜಿಲ್ಲೆ ಸೇರಿದಂತೆ ಕರುನಾಡೇ ಬಲ್ಲ ಪತ್ರಿಕಾರಂಗದ ಬಂಟರಾಗಿದ್ದರು ಅವರು. ಈ ಪತ್ರಿಕೆಯ ಮುಖಾಂತರ ಬೆಳಗಾವಿಯನ್ನು ಕಬಳಿಸಲು ಹೊಂಚು ಹಾಕಿದ ಪುಂಡ ಪುಢಾರಿಗಳಿಗೆಲ್ಲ ಸಿಂಹಘರ್ಜನೆ ಮಾಡಿ, ಹುಟ್ಟಡಗಿಸಿದವರು.

ಆದರ್ಶವಾದಿ ಅಜ್ಜ ಬಸಪ್ಪ ಮಲ್ಲಪ್ಪ ಏಳುಕೋಟಿ ಅವರು, ಜನ ಮಾನಸದಲ್ಲಿ ಬ.ಮ.ಏಳುಕೋಟಿ ಎಂದೇ ಹೆಸರಾದವರು. ನಾಡ- ರಾಷ್ಟ್ರ ಪ್ರೇಮದ ಉತ್ತುಂಗ ಸ್ಥಿತಿಯಲ್ಲಿ ಬದುಕಿ ಬಾಳಿದ ಅಜ್ಜ ಬೆಳಗಾವಿಯ ಗಡಿನಾಡಿನಲ್ಲಿ ಕನ್ನಡಕ್ಕಾಗಿ ಟೊಂಕಕಟ್ಟಿ ನಿಂತವರು. ಕನ್ನಡಕ್ಕಾಗಿ ಗುಡುಗಿದವರು, ಕನ್ನಡಕ್ಕಾಗಿ ದುಡಿದವರು. ‘ಜನಜೀವಾಳ’ ವಾರಪತ್ರಿಕೆಯ ಮುಖಾಂತರ ನಿರಂತರ ಸಾಕ್ಷಿಕರಿಸಿದವರು.

ನ್ಯಾಯನಿಷ್ಠರರಾಗಿದ್ದ ಅಜ್ಜ ಸತ್ಯವನ್ನು ಯಥಾಸ್ಥಿತಿಯಲ್ಲಿ ಬಿಂಬಿಸಿದವರು. ಅನ್ಯಾಯಕ್ಕೆ ಕೆಂಡದಂತೆ ಉರಿಯುತ್ತ ಅಜ್ಜ, ಅನ್ಯಾಯದ ಪರವಾಗಿರುವ ಎಂಥ ದೊಡ್ಡ ಮನುಷ್ಯನಿದ್ದರೂ ಬಯಲಿಗೆಳೆದು ತರುವುದರಲ್ಲಿ ಹಿಂಜರಿಕೆ ಅನುಭವಿಸಿದವರಲ್ಲ. ಅಜ್ಜನ ಅಂದಿನ ಸಮಕಾಲೀನರೆಲ್ಲರೂ ಇಂದಿಗೂ ಇದನ್ನು ಮೆಲಕುಹಾಕುತ್ತಾರೆ. ಪತ್ರಿಕೋದ್ಯಮಕ್ಕೆ ಬೇಕಾದ ಇಂಥ ಸ್ವಭಾವಗಳನ್ನು ರಕ್ತಗತ ಮಾಡಿಕೊಂಡ ಅಜ್ಜ ಬ.ಮ. ಏಳಕೋಟಿ ಅವರು, ಅನೇಕ ಕಷ್ಟದ ಸಂದರ್ಭಗಳಲ್ಲಿ ಎದೆಗುಂದದೆ ‘ಜನ ಜೀವಾಳ’ ವನ್ನು ಮುನ್ನಡೆಸಿಕೊಂಡು ಬಂದರು. ಅಜ್ಜನ ಈ ತಾತ್ವಿಕ ಗಟ್ಟಿಯಾದ ತಳಪಾಯದಿಂದಲೇ ಮೂರನೆಯ ತಲೆಮಾರಿನ ವರೆಗೆ ಜನ ಜೀವಾಳ ತನ್ನ ಮೂಲ ಉದ್ದೇಶಕ್ಕೆ ಧಕ್ಕೆ ಬರದಂತೆ ಮುಂದುವರೆದುಕೊಂಡು ಬಂದು ಇಂದು ದಿನಪತ್ರಿಕೆಯ ಮಟ್ಟಕ್ಕೆ ಬೆಳೆದು ನಿಂತಿದೆ. 

ವಾರವೊಂದರಲ್ಲಿ ನಾಲ್ಕು ಪುಟಗಳಲ್ಲಿ `ಜನಜೀವಾಳ’ ಪ್ರಕಟಗೊಳ್ಳುತ್ತಿದ್ದ ಪತ್ರಿಕೆಯ ಪ್ರಭಾವ ಶಕ್ತಿಶಾಲಿಯಾಗಿತ್ತು. ಸ್ಪಷ್ಟ ಅಭಿಪ್ರಾಯ, ಜೀವನಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದ ಪತ್ರಿಕೆ ಬ.ಮ. ಉಸಿರಾಗಿತ್ತು. ದೀನ ದಲಿತರಿಗೆ, ಹಿಂದುಳಿದ ಸಮುದಾಯಕ್ಕೆ ನಾಡಿನ ಯಾವುದೇ ಮೂಲೆಯಲ್ಲಿ ಅನ್ಯಾಯ ನಡೆದದ್ದನ್ನು ವಾಸ್ತವ ಮನಗಂಡು ಸತ್ಯ ಬಯಲಿಗೆಳೆಯುತ್ತ, ಅನ್ಯಾಯವನ್ನು ಖಂಡಿಸುವಲ್ಲಿ ಪತ್ರಿಕೆ ಹಿಂಜರಿಕೆ ಅನುಭವಿಸಿಲ್ಲ. ಜನ ಸೇವೆ ಮಾಡುವಲ್ಲಿ ಸರಕಾರ ಮಾಡಬೇಕಾದ ಜವಾಬ್ದಾರಿಯನ್ನು ಕವಿಹಿಂಡಿ ತೋರಿಸುತ್ತ ಬಂದಿದೆ. ಅಜ್ಜನ ಕಾಲಕ್ಕೆ ಆರಂಭವಾದ ಈ ಜನಪರ ನೋಟ ಇಂದಿಗೂ ಮುಂದುವರೆದುಕೊಂಡು ಬಂದಿದೆ. 

ಹೆಸರಿಗೆ ತಕ್ಕಂತೆ ಜನ ಜೀವಾಳವಾಗಿ ಮಿಡಿಯುತ್ತ ಬಂದ ಪತ್ರಿಕೆ ಅದಕ್ಕಾಗಿ ರಾಜಿ ಮಾಡಿಕೊಂಡಿಲ್ಲ. ಕಾಲ ಕಳೆದಂತೆ ಪತ್ರಿಕೆಗೆ ಆರ್ಥಿಕ ಸುಸ್ಥಿತಿ ಬಂದರೂ ಅಜ್ಜನ ಮತ್ತು ಅಪ್ಪನ ಕಾಲಮಾನದಲ್ಲಿ ಉಡುಗೆ, ತೊಡುಗೆಗಳಲ್ಲಿ ಆಡಂಬರ ವೈಭವಕ್ಕೆ ಮುಂದಾಗಿ ಜನ ಹಿತವನ್ನು ಎಂದಿಗೂ ಮರೆತಿಲ್ಲ. ಅಜ್ಜ ಸೈಕಲ್ ಹತ್ತಿಯೇ ದೂರದ ಕಚೇರಿಗೆ ಬರುತ್ತಿದ್ದರು. ಜನರಲ್ಲಿ ಒಂದಾಗಿ ಅವರ ನೋವನ್ನು ಆಲಿಸುತ್ತಿದ್ದರು, ಸಮಸ್ಯೆಗಳ ಒಳಹೊರಗನ್ನು ಸರಿಯಾಗಿ ಗಮನಿಸಿ ಸಂಬಂಧಿಸಿದವರ ಗಮನಕ್ಕೆ ತರಲು ಮುಲಾಜಿಲ್ಲದೆ ಮುಂದಾಗಿದ್ದರು. ಜನರ ಸಮಸ್ಯೆ ಎದುರಾದಾಗ ಜಿಲ್ಲಾಧಿಕಾರಿಗಳನ್ನು, ಮಂತ್ರಿಗಳನ್ನೂ ಪತ್ರಿಕಾ ಪರಿಷತ್ತುಗಳಲ್ಲಿ ಎತ್ತರಿಸಿದ ದನಿಯಲ್ಲಿ ಕೆಣಕುತ್ತಿದ್ದವರು. ಪೆನ್ನು ನಂಬಿದ ಅಜ್ಜ ಪತ್ರಿಕೆಯನ್ನು ಮುಂದುಮಾಡಿಕೊಂಡು ಮಕ್ಕಳಿಗೆ, ಮೊಮ್ಮಕ್ಕಳಿಗೆ ಆಸ್ತಿ ಮಾಡಬೇಕೆಂಬ ದುರಾಶೆಯ ದುಷ್ಟ ಹೆಜ್ಜೆಯನ್ನು ತಪ್ಪಿಯೂ ಇಡಲಿಲ್ಲ. ಒಂದು ಸಣ್ಣ ಮುದ್ರಣಾಲಯ ಮಾಡಿದ ಅವರು, ಒಂದು ಹಳೆಯ ಮನೆಯನ್ನೂ ಮಾಡಲಿಲ್ಲ. ಆದರೆ ನಿರ್ಭಯದಿಂದ ನಿಷ್ಪಕ್ಷಪಾತತನದಿಂದ ಬೆವರು ಸುರಿಸಿ ದುಡಿದು ಹುಲಿಯಂತೆ ಬದುಕಬೇಕೆಂಬ ಜನ ಸೇವೆಯ ಪತ್ರಿಕೆಯ ಅಪರೂಪದ ಆಸ್ತಿಯನ್ನು ಮುಂದಿನ ತಲೆಮಾರಿಗೆ ಹಾಗೆ ಇಟ್ಟುಹೋದರು. ತನ್ನ ವಂಶ ಜನ ಸೇವೆಯಲ್ಲಿ ಸಾರ್ಥಕತೆ ಕಾಣಲೆಂದು. 

`ಜನಂ ಗೆಲ್ಗೆ ನ ತು ಧನಂ’ ಎಂಬುದು ಅವರು ಜನರಿಗೂ, ತಮ್ಮ ಕುಟುಂಬದವರಿಗೂ ಬಿಟ್ಟುಹೋದ ಮಹತ್ವದ ಆಸ್ತಿ. ಎಲ್ಲ ಮಕ್ಕಳಿಗೂ ಅವರು ಕಲಿಸಿದ್ದು ಬೆವರಿಳಿಸಿ ದುಡಿಯುವ ಕಾಯಕ ನಿಷ್ಠೆ. ಗಂಡು ಮಕ್ಕಳು ಪದವೀಧರರೂ ಆದರೂ, ಪ್ರಾಧ್ಯಾಪಕರೂ ಆದರೆ `ಜನಜೀವಾಳ’ ಆತ್ಮದಂತಿದ್ದ ಕಾಯಕನಿಷ್ಠೆಯನ್ನು ಅವರಾರೂ ಮರೆಯಲಿಲ್ಲ. ಬಸಪ್ಪನವರ ಶ್ರೀಮತಿ ಯವರೂ ಸಹ ಪತಿಯ ತತ್ವನಿಷ್ಠೆ ಮೆಚ್ಚಿಕೊಂಡು ಬಸವಣ್ಣನವರಿಗೆ ನೀಲಾಂಬಿಕೆಯಂತೆ ಸಂಸಾರ ಸಾಗಿಸಿದರು. ಗಣಪತಿ ಬೀದಿಯಲ್ಲಿಯ ಲಕ್ಕಪ್ಪನ ಚಾಳದ ಒಂದು ಕೋಣೆಯ ಸುತ್ತಲೂ ವೇಶ್ಯಾವೃತ್ತಿ ನಡೆಸುತ್ತಿದ್ದ ಸೋದರಿಯರ ಸಾಮಿಪ್ಯದಲ್ಲಿ ಅಂಥ ಬಡವರ ಉದ್ದಾರಕ್ಕಾಗಿಯೇ ದುಡಿಯುತ್ತಿದ್ದ ಬಸಪ್ಪ ಏಳುಕೋಟಿಯವರು ನಾನು ಬಲ್ಲ ಪ್ರಸಿದ್ಧ ವ್ಯಕ್ತಿಗಳಲ್ಲೆಲ್ಲ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದರು. ಮಾರ್ಕ್ವಾದ ಮತ್ತು ಬಸವವಾದಗಳ ಒಂದು ಮಿಶ್ರಣದಂತಿದ್ದ ಒಂದು ರೀತಿಯ ಸಾಮ್ಯವಾದವನ್ನು ಅವರು ಪ್ರತಿಪಾದಿಸುತ್ತಿದ್ದರು. ಮರಣವೇ ಮಹಾನವಮಿ. ಇದಕಾರಂಜುವರು? ಇದಕಾರಳುಕುವರು ಎಂಬ ಬಸವ ವಚನಗಳಲ್ಲಿ ಏಳುಕೋಟಿಯವರಿಗೆ ಪರಮ ನಂಬಿಗೆ. ಸುದೀರ್ಘ ಎಂಬತ್ತು ವರ್ಷಗಳ ವರೆಗೆ ಬದುಕಿ ಅರ್ಥವತ್ತಾಗಿ ಬಾಳಿದ ಅಜ್ಜ ಏಳುಕೋಟಿ, ಅದುವರೆಗೂ ತಾವು ನಂಬಿದ ತತ್ವಗಳಂತೆ, ಸಿದ್ಧಾಂತಗಳಿಗೆ ಮೌಲ್ಯ ತಂದುಕೊಟ್ಟವರು. ಅಖಂಡ ೪೦ ವರುಷ ಯಾರಿಗೂ ಅಂಜದೆ, ಅಳುಕದೆ, ಯಾವ ಮಂತ್ರಿಗೂ, ಪುಢಾರಿಗೂ, ಗುಂಡರಿಗೂ, ಉಳ್ಳವರಿಗೂ ತಲೆ ಬಾಗದೆ ಲೇಖನಿಯನ್ನು ನಿಜವಾದ ಕರವಾಳ (ಖಡ್ಗ)ದಂತೆಯೇ ಝಳಪಿಸುತ್ತ, ಶೋಷಕರನ್ನು, ಆಷಾಢಭೂತಿಗಳನ್ನು ತೀಕ್ಷ್ಣವಾದ ಶಬ್ದಗಳಿಂದ ತಿವಿಯುತ್ತ ಅನೇಕರ ಮುನಿಸನ್ನು ಕಟ್ಟಿಕೊಂಡವರು. ತಮ್ಮ ನೇರವಾದ ದಾರಿಯಲ್ಲಿ ಮುಂದುವರಿದವರು. 

ಜನಜೀವಾಳ ಸಂಸ್ಥಾಪಕರ ನಂತರದಲ್ಲಿ ಬಂದ ದಿವಂಗತ ರಾಜಹಂಸ ಹಾಗೂ ದಿವಂಗತ ಜನಜೀವಾಳ ಏಳುಕೋಟಿಯವರೂ ತಂದೆಯ ಗುಣ, ಆದರ್ಶಗಳನ್ನು ಮೈಗೂಡಿಸಿಕೊಂಡು ಮುಂದುವರೆಸಿದವರು. ಅವರೂ ಅಜ್ಜನಷ್ಟೇ ಪ್ರಖರವಾಗಿ ಕೆಂಡ ಕಾರಿದರೂ ಸರಿ ಕಂಡುದುದನ್ನು ಕಂಡಂತೆ ಬರೆದರು. ‘ಯಾರು ಮುನಿದು ನಮ್ಮನ್ನೇನು ಮಾಡುವರು? ನಮ್ಮ ಕೂಸಿಗೆ ಕುನ್ನಿ ಬೇಡ, ಆನೆಯ ಮೇಲೆ ಹೋಗುವವರ ಶ್ವಾನ ಕಚ್ಚುವದೇ’ ಎಂಬ ಮನೋಬಲದ ವ್ಯಕ್ತಿಗಳಾಗಿದ್ದರು. ಹೀಗಾಗಿ ‘ಜನಜೀವಾಳ’ ಪತ್ರಿಕೆಯಲ್ಲಿ ತತ್ವವನ್ನು ತುಳಿದು; ಭ್ರಷ್ಟಾಚಾರಕ್ಕೆ ಮಣಿದು ಜನಹಿತವನ್ನು ಕಡೆಗಣಿಸಿದ ಯಾವ ರಾಜಕೀಯ ವ್ಯಕ್ತಿಯನ್ನೂ ಕಟುವಾಗಿ ಟೀಕಿಸದೇ ಬಿಡುತ್ತಿರಲಿಲ್ಲ. ಅಜ್ಜನ ಸಾಮಾಜಿಕ ಆದರ್ಶ ಮತ್ತು ತತ್ವಗಳಿಗೆ ಇಬ್ಬರೂ ಮಕ್ಕಳು ಹೆಗಲು ಕೊಟ್ಟು ಅಷ್ಟೇ ನಿಷ್ಟೆಯಿಂದ ಮುನ್ನಡೆಸಿದರು. ಸಾಮಾಜಿಕ ಹಿತಾಸಕ್ತಿಯ ತತ್ವಗಳನ್ನು ಬದ್ಧತೆಯಿಂದ ಉಳಿಸಿ ಜೋಡಿಸಿಕೊಂಡು ಬಂದ ಪತ್ರಿಕೆ ೧೯೪೮ ರಿಂದ ೨೦೦೧ ವರೆಗೆ ಅಚ್ಚುಮೊಳೆಗಳನ್ನು ಜೋಡಣೆಯಿಂದ ಪ್ರಕಟಗೊಂಡಿತು. ೨೦೦೧ ರಲ್ಲಿ ಆಫ್‌ಸೆಟ್ ಯಂತ್ರದೊಂದಿಗೆ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಂಡಿತು. ಇಂದು ಮೊಮ್ಮಗನ ಅಂಗೈಯಲ್ಲಿ ಬಂದಿರುವ ಈ ಪತ್ರಿಕೆ ಅಜ್ಜ, ಅಪ್ಪಂದಿರ ಸಾಮಾಜಿಕ ಆದರ್ಶಗಳಿಗೆ ಚ್ಯುತಿ ಬರದಂತೆ ೪ ಪುಟಗಳ ದೊಡ್ಡ ಆಕಾರದ ದಿನಪತ್ರಿಕೆಯಾಗಿ ನಾಡಿನ ಜನತೆಯ ಕೈಸೇರುತ್ತಿದೆ. ನಿಯತ್ತಿನೊಂದಿಗೆ ಬಂದ ಇಂತಹ ಸಣ್ಣ ಪತ್ರಿಕೆಗೆ ಇದೊಂದು ದೊಡ್ಡ ಸಾಹಸ ಎನ್ನುವುದರಲ್ಲಿ ಪತ್ರಿಕೋದ್ಯಮ ಬಲ್ಲವರಿಗೆ ಮಾತ್ರ ಗೊತ್ತು. 

ಜನಜೀವಾಳವನ್ನು ೧೯೬೯ ರಲ್ಲಿಯೇ ಅಜ್ಜ ಹುಬ್ಬಳ್ಳಿ-ಧಾರವಾಡದ ಮಧ್ಯೆ ದಿನಪತ್ರಿಕೆಯನ್ನಾಗಿ ಮಾಡಬೇಕೆಂದು ಕನಸು ಕಂಡು ಪ್ರಯತ್ನಿಸಿದರೂ ಆರ್ಥಿಕನಾನುಕೂಲದಿಂದಾಗಿ ಸಾಧ್ಯವಾಗಿರಲಿಲ್ಲ. ಅಜ್ಜನ ಕನಸನ್ನು ನನಸುಗೊಳಿಸಿದ ಹೆಮ್ಮೆ, ಬದ್ಧತೆಯ ಬಿಗುಮಾನ ನನಗಿದೆ ಎಂದು ಹೇಳಿದರೆ ಅಹಂಕಾರದ ಮಾತಾಗುವುದಿಲ್ಲ. ಕಳೆದ ಎರಡು ವರ್ಷಗಳಿಂದ ಈ ಕನಸು ನನಸಾಗುವ ಎಲ್ಲ ಸಾಧ್ಯತೆಯೊಂದಿಗೆ ತಳಕು ಹಾಕುತಿತ್ತು. ಇಂದು ಅಂದರೆ ೨೦೧೭ನೆಯ ವರುಷದ ಮೊದಲ ದಿನದಿಂದ, ಎದುರಾದ ಅಡ್ಡಿ ಆತಂಕಗಳನ್ನು ನುಂಗಿಕೊಂಡು ಜನ ಹಿತಕ್ಕೆ ಹಿಂಜರೆಯುವುದಿಲ್ಲ ಎಂದು ದಿನ ಪತ್ರಿಕೆಯಾಗಿ ಬೆಳಕು ಮೂಡುವ ಮೊದಲು ನಿಮ್ಮ ಮನೆಯ ಬಾಗಿಲ ತಟ್ಟಲಿದೆ. ಇದುವರೆಗೆ ಪ್ರೀತಿಯಿಂದ ಸ್ವಾಗತಿಸಿದ ತಾವು ಇನ್ನು ಮುಂದೆಯೂ ಅದೇ ಪ್ರೀತಿಯಿಂದ ನಿಮ್ಮ ಜನ ಜೀವಾಳವನ್ನು ಸ್ವಾಗತಿಸುತ್ತಿರುವ ಎಂದು ಏಳುಕೋಟಿಯ ಮೊಮ್ಮಗನಾಗಿ ಭರವಸೆ ಇಟ್ಟಿದ್ದೇನೆ. ಅಜ್ಜನ ತತ್ವದ ಬಲ, ಜನ ಹಿತಾಸಕ್ತಿಯ ಅಗಮ್ಯ ಕಾಳಜಿ, ಮಾನವೀಯ ಕಳಕಳಿ ಈ ಮೊಮ್ಮಗ ಮುಂದುವರೆಸುವನೆಂಬ ಭರವಸೆ ನೀಡಬಲ್ಲೆ. 

ಜನಜೀವಾಳ ಕ್ಕೆ ಈಗ ೭೨ ರ ಸಂಭ್ರಮ. ಈ ಸಂದರ್ಭದಲ್ಲೇ ದಿನಪತ್ರಿಕೆಯಾಗುತ್ತಿರುವುದು ಇಮ್ಮಡಿ ಸಂತಸ ತಂದಿದೆ. ಪತ್ರಿಕೆಯ ೭೨ ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಅದೆಷ್ಟೋ ಗುಡುಗು, ಸಿಡಿಲು, ಕಾರ್ವೋಡ-ಮಿಂಚು-ಸಂಚು ನಡೆದರೂ ಅಂಜದೇ ಅಳುಕದೇ ಮುನ್ನಡೆದ ಹೆಮ್ಮೆ ಅದಕ್ಕಿದೆ. ಆರ್ಥಿಕ ಶೋಷಣೆ ವಿರುದ್ಧ ಸಿಡಿದೆದ್ದು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಗುರಿಗನ್ನಡಿಯೊಂದಿಗೆ ಪಕ್ಷಾತೀತವಾಗಿ ಮುನ್ನಡೆದಿದೆ. ಗಡಿನಾಡು ಬೆಳಗಾವಿಯಲ್ಲೂ ೭೨ ವರುಷದಿಂದ ನಿಯಮಿತವಾಗಿ ಹೊರಡುವ ಏಕಮೇವ ವಾರಪತ್ರಿಕೆ ಈಗ ದಿನಪತ್ರಿಕೆಯಾಗಿ ತನ್ನ ರೆಕ್ಕೆ ಚಾಚಿದ್ದಲ್ಲದೇ ಸದ್ಯ ಅಂತರ್ಜಾಲ ಮಾಧ್ಯಮಕ್ಕೂ ಕಾಲಿಟ್ಟಿದೆ. ಈಗ ಆ ರೆಕ್ಕೆಗಳು ಬಲಿದು ಸ್ವಚ್ಛಂದ ಬಾನಲ್ಲಿ ಬಾನಾಡಿಯಂತೆ ಹಾರಾಡಿಸುವ ಜವಾಬ್ದಾರಿ ಓದುಗರು, ಜಾಹೀರಾತುದಾರರು ಹಿತೈಷಿಗಳ ಮೇಲೆಯೇ ಅವಲಂಬಿಸಿದೆ. 

ರಾಜ್ಯ-ಜಿಲ್ಲೆ ಮಟ್ಟದ ಪತ್ರಿಕೆಗಳಿಂದಾಗದ ಕೆಲಸವನ್ನು ೭೨ ವರುಷಗಳಿಂದ ಮಾಡುತ್ತ ಜನರಿಗೆ ತನ್ನದೇ ಆದ ತಿಳುವಳಿಕೆ ನೀಡಿದೆ. ದಶಮಾನ, ಕಾಲು ಶತಮಾನ, ಅರ್ಧ ಶತಮಾನದ ಮೇಲೆ ಎರಡು ದಶಕಗಳನ್ನು ಮುಗಿಸಿದರೂ ಇತರರಂತೆ ಸಡಗರ, ಸಂಭ್ರಮ, ಸಮಾರಂಭದ ಬೆನ್ನು ಹತ್ತದೇ ಕಾಯಕದಲ್ಲಿ ಸಂತಸ ಕಾಣುತ್ತಿದೆ.

ಜನ ಜೀವಾಳದ ಸಂಸ್ಥಾಪಕರು, ಹಿಂದಿನ ಸಂಪಾದಕರುಗಳು ಮನಸ್ಸು ಮಾಡಿದ್ದರೆ ವಾಮವಾರ್ಗದಿಂದ ದುಡ್ಡು ಗಳಿಸಿ ಐಷಾರಾಮಿ ಜೀವನ ನಡೆಸಿ ಪತ್ರಿಕೆಯನ್ನೂ ಬೆಳೆಸಬಹುದಿತ್ತು. ಆದರವರು ‘ಜನಂ ಗೆಲ್ಗೆ’ ಎಂದರೆ ಹೊರತು ಧನಕ್ಕಾಗಿ ತಮ್ಮನ್ನು ಮಾರಿಕೊಳ್ಳಲಿಲ್ಲ ಎಂಬುದನ್ನು ಪರಮವೈರಿಯೂ ಒಪ್ಪುತ್ತಾನೆ. ಸಂಸ್ಥಾಪಕರು ಹಾಗೂ ಇಬ್ಬರು ಸಂಪಾದಕರನ್ನು ಕಂಡ ಪತ್ರಿಕೆ ಅವರ ಆದರ್ಶವನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂಬ ಸಂತಸ ನಮಗಿದೆ. ಆ ಶಕ್ತಿಯೇ ಈ ಸಾಹಸಕ್ಕೂ ಕೈಹಾಕುವಂತೆ ಮಾಡಿದೆ.

ಕರುನಾಡಿನ ಸಾಹಿತಿಗಳು, ಮಠಾಧೀಶರ ಶುಭಾಶೀರ್ವಾದದಿಂದ ಹಿಡಿದು ಬೆಳಗಾವಿಯ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಹಕಾರಿ, ಮಾಧ್ಯಮ ರಂಗದವರು, ಹಿರಿಯ-ಕಿರಿಯ ಹಿತೈಷಿಗಳು, ಮಾರ್ಗದರ್ಶಿಗಳು, ಅಧಿಕಾರಿಗಳು, ಗೆಳೆಯರು ಪತ್ರಿಕೆಯ ಉನ್ನತಿಗಾಗಿ ಹಾರೈಸಿದ್ದಾರೆ. ಅಂತರ್ಜಾಲ ಮಾಧ್ಯಮಕ್ಕೂ ಬೆನ್ನುತಟ್ಟಿ ಒಕ್ಕೊರಲಿನ ಬೆಂಬಲ ನೀಡುತ್ತಿರುವ ಅವರೆಲ್ಲರಿಗೂ ಅಭಿನಂದನೆಗಳು.

This is the title of the web page
This is the title of the web page