ಬೆಳಗಾವಿ:ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇಲ್ಲಿನ ಭೂತರಾಮನಹಟ್ಟಿ ಝೂ ಹುಲಿ ‘ಶೌರ್ಯ’ನನ್ನು ಕಾಡುತ್ತಿದ್ದ ಅಪರೂಪದ ರೋಗತಳಿ ಪತ್ತೆ ಹಚ್ಚುವಲ್ಲಿ ವನ್ಯವೈದ್ಯ ಡಾ. ಮದನ್ ಯಶಸ್ವಿಯಾಗಿ ವನ್ಯವಿಜ್ಞಾನ ಲೋಕದ ಗಮನ ಸೆಳೆದಿದ್ದಾರೆ.
ಅರಣ್ಯಾಧಿಕಾರಿಗಳು ಹಾಗೂ ವನ್ಯವೈದ್ಯರ ತೀವ್ರ ಪ್ರಯತ್ನದಿಂದ ಶೌರ್ಯ ಸದ್ಯ ತನ್ನ ಆರೋಗ್ಯ ಚೇತರಿಸಿಕೊಳ್ಳುತ್ತಿದ್ದಾನೆ.
ವನ್ಯಮೃಗಗಳನ್ನು( wild beasts) ಆಹುತಿ ಪಡೆಯುತ್ತಿದ್ದ, ವನ್ಯ ವೈದ್ಯರಿಗೆ ಸಹಜವಾಗಿ ಗುರುತಿಸಲಾಗದ cytauxzoon felis
ಮತ್ತು mycoplasma ಎಂಬ ಅಪರೂಪದ ಖಾಯಿಲೆಗಳನ್ನು ಕೊನೆಗೂ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಕೊಡಲಾಗುತ್ತಿದೆ.
PCR test ಸೇರಿ ಹಲವು ಬಗೆಯ ಚಿಕಿತ್ಸಾ ಕ್ರಮಗಳನ್ನು ನಡೆಸಿ ರಾಜ್ಯದ ವನ್ಯವೈದ್ಯರೆಲ್ಲ ಸುಮ್ಮನಾಗಿ ಕೈಚೆಲ್ಲಿದ್ದ ಸಂದರ್ಭ, ರೋಗ ತಪಾಸಣೆ ಸರಿಯಾಗಿ ಕೈಗೊಳ್ಳುವಲ್ಲಿ ಶಿವಮೊಗ್ಗ ಮೂಲದ ಪ್ರಖ್ಯಾತ ವನ್ಯವೈದ್ಯ ಡಾ. ಮದನ್ ಕೋಮಪಾಲ ಯಶಸ್ವಿಯಾಗಿದ್ದಾರೆ.
ವಾಂತಿ, ಬೇದಿ, ಸುಸ್ತು ಅನುಭವಿಸುತ್ತಿದ್ದ, ಆಹಾರ ಸೇವನೆ ತ್ಯಜಿಸಿದ್ದ ಶೌರ್ಯನ ಆರೋಗ್ಯ ಸುಧಾರಿಸಲು ಅರಣ್ಯ ಅಧಿಕಾರಿಗಳು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ರಾಜ್ಯದ ಹಲವು ಲ್ಯಾಬ್ ಗಳಲ್ಲಿ ಶೌರ್ಯನಿಗೆ ಬಂದೊದಗಿರುವ ರೋಗ ತಪಾಸಣೆಗೆ ಪ್ರಯತ್ನಿಸಲಾಗಿತ್ತು. ಕೊನೆಗೆ ಡಾ. ಮದನ್ ಆಗಮಿಸಿ ವನ್ಯಮೃಗಗಳ ಸಾವಿಗೆ ಕಾರಣವಾಗುತ್ತಿರುವ ರೋಗ ಪತ್ತೆ ಮಾಡಿದ್ದಾರೆ. ಈಗಾಗಲೇ 20ವರ್ಷ ಸವೆಸಿರುವ ಶೌರ್ಯ ತನ್ನ ಆಯುಷ್ಯ ಸರಿಯಾಗಿ ಕಾಯ್ದುಕೊಂಡು ಮುನ್ನಡೆದಿದೆ.
ದೇಶದ ಹಲವು ಭಾಗಗಳಲ್ಲಿ ಇದ್ದಕ್ಕಿದ್ದಂತೆ ಹುಲಿ, ಸಿಂಹ, ಚಿರತೆಯಂತೆ ಭಯಾನಕ ಪ್ರಾಣಿಗಳು ಅನಾರೋಗ್ಯದಿಂದ ಅಸುನೀಗಿದ ಪ್ರಕರಣಗಳು ವನ್ಯವೈದ್ಯಲೋಕವನ್ನು ಕಂಗೆಡಿಸಿ ಚಿಂತೆಗೀಡು ಮಾಡಿತ್ತು.
ಬೆಳಗಾವಿ ‘ಝೂ’ದಲ್ಲಿರುವ ಶೌರ್ಯನನ್ನು ಸಹ ಇದೇ ತಿಳಿಯಲಾಗದ ರೋಗ ಕಾಡತೊಡಗಿತ್ತು. 1976ರಲ್ಲೇ ಅಮೇರಿಕಾದಲ್ಲಿ ಈ ವನ್ಯಮೃಗಗಳ ರೋಗ ಪತ್ತೆ ಮಾಡಿದ್ದರೂ ಅದನ್ನು ನಮ್ಮ ದೇಶದಲ್ಲಿ ಗುರುತಿಸಲಾಗಿರಲಿಲ್ಲ.
ಈ ಅಪರೂಪದ ರೋಗತಳಿ ಪತ್ತೆ ಹಚ್ಚಿರುವ ವನ್ಯವೈದ್ಯ ಡಾ. ಮದನ್ ಪ್ರಯತ್ನ ದೇಶಾದ್ಯಂತ ಇತರ ವನ್ಯ ಪ್ರಾಣಿಗಳ ರೋಗ ಪತ್ತೆಗೆ & ಹಠಾತ್ ಸಾಯುತ್ತಿರುವ ವನ್ಯಮೃಗಗಳ ರಕ್ಷಣೆಗೆ ಬೆಳಗಾವಿಯಿಂದ ನಾಂದಿ ಹಾಡಿದಂತಾಗಿದೆ.
ಶೌರ್ಯನ ಚೇತರಿಕೆ ನಮಗೆಲ್ಲ ಸಂತಸ ಉಂಟು ಮಾಡಿದೆ ಎಂದು ‘ಝೂ’ ನಿರ್ದೇಶಕ ಹಾಗೂ ಡಿಸಿಎಫ್ ಹರ್ಷಭಾನು ತಿಳಿಸಿದ್ದಾರೆ.
ಝೂ ವೈದ್ಯ ಡಾ. ನಾಗೇಶಹುಲಿಲಗೋಳ, ಕ್ಯೂರೇಟರ್ ಕೆಂಪನ್ನ ವನ್ನೂರ, ಡೆಪ್ಯುಟಿ ರೇಂಜ್ ಫಾರೆಸ್ಟರ್ ಪ್ರತಿಭಾ ಕೊಪ್ಪಳ ಹಾಗೂ ಸಿಬ್ಬಂಧಿ ಹರ್ಷ ವ್ಯಕ್ತಪಡಿಸಿದ್ದಾರೆ.