ಬೆಳಗಾವಿಯ ಬುಡಾ ನಡೆಸಿರುವ ಹಗರಣದ ಬಗ್ಗೆ ಆಗಾಗ ಬೆಳಗಾವಿಯಲ್ಲಿ ಬಹಳ ದೊಡ್ಡ ಮಟ್ಟದ ಚರ್ಚೆಯಾಗುತ್ತಿತ್ತು. ಇದೀಗ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಬುಡಾದಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಸ್ವತಃ ಸಚಿವ ಸತೀಶ ಜಾರಕಿಹೊಳಿ ಆಸಕ್ತಿ ವಹಿಸಿ ಮಾತನಾಡಿರುವುದು ಇದೀಗ ತಲ್ಲಣಕ್ಕೆ ಕಾರಣವಾಗಿದೆ.
ಒಂದು ಕೋಟಿ ಬೆಲೆ ಬಾಳುವ ಆಸ್ತಿಯನ್ನು ಕೇವಲ 20 ರಿಂದ 25 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗಿದೆ. ಅಧಿಕಾರಿಗಳು ನಾವು ಕಾನೂನು ಪ್ರಕಾರ ಮಾಡಿರುವುದಾಗಿ ಹೇಳುತ್ತಾರೆ. ಆದರೆ ಅದು ಸುಳ್ಳು. ಇದರಿಂದ ಸರಕಾರಕ್ಕೆ 100 ಕೋಟಿ ನಷ್ಟವಾಗುತ್ತದೆ. ಯಾವುದೇ ಕಾರಣಕ್ಕೂ ಈ ಪ್ರಕರಣವನ್ನು ಇಲ್ಲಿಗೆ ಬಿಡುವ ಪ್ರಸಂಗ ಎದುರಾಗದು ಎಂದು ಅವರು ತಿಳಿಸಿದರು.
ಏನಿದು ಬುಡಾ ಪ್ರಕರಣ…? ಜೀವ ತುಂಬಿದ ಜಾರಕಿಹೊಳಿ…!!: ಜನ ಜೀವಾಳ ಸರ್ಚಲೈಟ್ ಬೆಳಗಾವಿ ಮಹಾನಗರ ಅಭಿವೃದ್ಧಿ ಪ್ರಾಧಿಕಾರ ತೆಗೆದುಕೊಂಡಿರುವ ನಿರ್ಣಯ ಗಮನಿಸಿದರೆ ನೈಜ ಫಲಾನುಭವಿಗಳಿಗೆ ಬಹಳ ದೊಡ್ಡ ಮಟ್ಟದಲ್ಲಿ ಅನ್ಯಾಯವಾಗಿರುವುದು ಕಂಡುಬಂದಿದೆ. ಸರಕಾರ ತಾನು ಮಾಡಿರುವ ನಿಯಮಗಳನ್ನು ಅತ್ಯಂತ ವ್ಯವಸ್ಥಿತವಾಗಿಯೇ ಇಲ್ಲಿ ಗಾಳಿಗೆ ತೂರಿರುವ ವಾಸ್ತವಾಂಶವನ್ನು ಇಲ್ಲಿ ಸೂಕ್ಷ್ಮವಾಗಿ ಗಮನಿಸಬಹುದಾಗಿದೆ. ಜನತೆಗೆ ಮನೆ ಕಟ್ಟಿಕೊಡಲು ರೈತರಿಂದ ಪಡೆದುಕೊಂಡ ಜಮೀನನ್ನು ಉಳ್ಳವರಿಗೆ ಕೊಟ್ಟರೆ ಮುಂದಿನ ದಿನಗಳಲ್ಲಿ ಯಾವೊಬ್ಬ ರೈತರು ಸಹ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಜಮೀನು ನೀಡಲು ಹಿಂದೇಟು ಹಾಕಬಹುದು. ಬೆಳಗಾವಿಯಲ್ಲಿ ನಡೆದಿರುವ ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಭಾಸವಾಗುತ್ತಿದೆ.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿಕೊಂಡು ಸರ್ಕಾರಕ್ಕೆ ನಾಮ ಹಾಕಿದ ಸ್ಟೋರಿ ಇದು. ಸ್ವ ಹಿತಾಸಕ್ತಿ, ಹಣದಾಸೆಗೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿದ್ದಾರೆ. ಇದು ನಡೆದಿರುವುದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಎನ್ನುವುದು ಗಮನಿಸಬೇಕಾದ ಅಂಶ.
ಬೆಳಗಾವಿ ಪಾಲಿಗೆ ಇದೊಂದು ಬಹುದೊಡ್ಡ ಹಗರಣ ಎನ್ನಲು ಅಡ್ಡಿಯಿಲ್ಲ. ಸರ್ಕಾರದ ಕಣ್ಣಿಗೆ ಮಣ್ಣೆರಚಿ ಮಾಡಬಾರದ ಕೆಲಸ ಮಾಡಿದ ಅಧಿಕಾರಿಗಳು ಜನರಿಗೆ ಬಹು ದೊಡ್ಡ ಟೋಪಿ ಹಾಕಿದ್ದಾರೆ. ನಿವೇಶನಗಳ ಹಂಚಿಕೆಯಲ್ಲಿ ಭಾರಿ ಗೋಲಮಾಲ್ ಎಸಗಲಾಗಿದೆ.
ಇ-ಹರಾಜು ಪ್ರಕ್ರಿಯೆಯಲ್ಲಿ ನಿವೇಶನಗಳನ್ನು ಹರಾಜು ಮಾಡದೇ ಗೋಲ್ ಮಾಲ್ ಮಾಡಿರುವ ಈ ಪ್ರಕರಣ ಎಂಥವರನ್ನು ಸಹಾ ಬೆಚ್ಚಿ ಬೀಳಿಸುವಂತಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ನಿವೇಶನಗಳನ್ನು ಮಾರಾಟ ಮಾಡಿರುವುದು ಇದೀಗ ಬಹಿರಂಗವಾಗಿದೆ.
ಇ ಹರಾಜಿನಲ್ಲಿ ಸೈಟ್ಗಳ ಹಂಚಿಕೆ ಮಾಡಿದ ಮಾರನೇ ದಿನವೇ ಮತ್ತೊಂದು ಸುತ್ತಿನ ಸೈಟ್ ಹಂಚಿಕೆ ಮಾಡಲಾಗಿದೆ.
ಯಾವುದೇ ಪ್ರಕಟಣೆ ಹೊರಡಿಸದೇ ಮ್ಯಾನುಅಲ್ ನಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಸರ್ಕಾರದ ನಿಯಮಗಳೇ ಮ್ಯಾನುಅಲ್ ಹರಾಜು ಮಾಡದಂತೆ ಸೂಚನೆ ಇದ್ದರೂ ಇಲ್ಲಿ ಮಾತ್ರ ನಿಯಮಗಳಿಗೆ ಡೋಂಟ್ ಕೇರ್ ಮಾಡಲಾಗಿದೆ. ಬೇಕಾಬಿಟ್ಟಿ ಸೈಟ್ಗಳ ಹಂಚಿಕೆ ಮಾಡಿರುವ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಬೆಳಗಾವಿಯ ಬಡ ಹಾಗೂ ಮಧ್ಯಮ ವರ್ಗದ ಜನತೆಯನ್ನು ವಂಚಿಸಿದೆ.ಅತೀ ಕಡಿಮೆ ಬೆಲೆಗೆ ಕಾರ್ನರ್ ಸೈಟ್ ಹಾಗೂ ಬಿಡಿ ಸೈಟ್ಗಳ ಮಾರಾಟ ಮಾಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ರಾ ? ರೈತರಿಂದ ಕಡಿಮೆ ಹಣಕ್ಕೆ ಜಮೀನು ಪಡೆದು ಅಭಿವೃದ್ಧಿ ಹೆಸರಲ್ಲಿ ಬಡಾವಣೆ ನಿರ್ಮಿಸಿ ಬೇಕಾದವರಿಗೆ ಮಾರಾಟ ಮಾಡಲಾಗಿದೆ.
ಒಂದು ಕಡೆ ಸರ್ಕಾರಕ್ಕೆ ಪಂಗನಾಮ, ಇನ್ನೊಂದು ಕಡೆ ರೈತರಿಗೆ ದ್ರೋಹ. ಬುಡಾ ಗೋಲ್ ಮಾಲ್ ಕುರಿತು ಉನ್ನತ ಮಟ್ಟದ ತನಿಖೆಗೆ ಒತ್ತಾಯ ಇದೀಗ ಕೇಳಿ ಬಂದಿತ್ತು. ಈಗ ಅದಕ್ಕೆ ಜಾರಕಿಹೊಳಿ ಜೀವ ತುಂಬಿದ್ದಾರೆ.
ಬೆಳಗಾವಿ ಜಿಲ್ಲಾ ವಿಭಜನೆ ಕುರಿತು ಮಾತನಾಡಿದ ಸತೀಶ್ ಜಾರಕಿಹೊಳಿಯವರು ಬೆಳಗಾವಿ ಜಿಲ್ಲೆ ಅತ್ಯಂತ ದೊಡ್ಡ ಜಿಲ್ಲೆಯಾಗಿದೆ. ಆಡಳಿತ ದೃಷ್ಟಿಯಿಂದ ಜಿಲ್ಲೆ ವಿಭಜನೆ ಆಗಬೇಕು. ಜಿಲ್ಲಾ ವಿಭಜನೆ ಬಗ್ಗೆ ನಾನು ಈ ಹಿಂದೆ ಸಾಕಷ್ಟು ಬಾರಿ ಮಾತನಾಡಿದ್ದೆ. ಆಡಳಿತ ಅತ್ಯಂತ ಸುಗಮವಾಗಿ ನಡೆಯಲು ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಹೊಸ ಜಿಲ್ಲೆಗಳ ರಚನೆಯಾಗಬೇಕು. ಈ ಹಿನ್ನಲೆಯಲ್ಲಿ ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲೆಗಳ ರಚನೆಯಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬೈಲಹೊಂಗಲ ಕಾಂಗ್ರೆಸ್ ಶಾಸಕ ಮಹಾಂತೇಶ ಕೌಜಲಗಿ ಅವರು ಬೈಲಹೊಂಗಲವನ್ನು ಕೇಂದ್ರವಾಗಿ ಹೊಸ ಜಿಲ್ಲೆ ರಚನೆ ಮಾಡಬೇಕು ಎಂದು ಮನವಿ ಮಾಡಿಕೊಂಡರು. ಇದಕ್ಕೆ ಉತ್ತರಿಸಿದ ಸತೀಶ್ ಜಾರಕಿಹೊಳಿಯವರು ಬೇಡಿಕೆ ಎಲ್ಲರದ್ದು ಇದೆ. ಈ ಬಗ್ಗೆ ಕುಳಿತು ಚರ್ಚಿಸೋಣ. ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.