ಮೈಸೂರು:
ಮೈಸೂರಿನ ಟಿ ನರಸಿಪುರ ಸಮೀಪ ಖಾಸಗಿ ಬಸ್ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಹತ್ತು ಜನರು ಹತ್ತು ಮಂದಿ ಮೃತಪಟ್ಟ ಘಟನೆ ವರದಿಯಾಗಿದ್ದು, ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ.
ಇನ್ನೋವಾ ಕಾರಿನಲ್ಲಿ ಒಂದೇ ಕುಟುಂಬದ ಪ್ರಯಾಣಿಕರು ಮೈಸೂರು ಪ್ರವಾಸಕ್ಕೆ ಆಗಮಿಸಿದ್ದರು. ಟಿ ನರಸಿಪುರ ಸಮೀಪದ ಕುರುಬೂರು ಗ್ರಾಮದ ಪಿಂಜರ ಪೋಳ ಎಂಬಲ್ಲಿ ಇವರಿದ್ದ ಇನ್ನೋವಾ ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ.
ಅಪಘಾತದ ಭೀಕರತೆಗೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಆರು ಮಂದಿ ಕೂಡ ಆಸ್ಪತ್ರೆ ಮಾರ್ಗ ಮಧ್ಯೆದಲ್ಲಿ ಕೊನೆಯುಸಿರೆಳೆದಿದ್ದಾರೆ. ಭೀಕರ ಅಪಘಾತದಲ್ಲಿ ಮಗು ಸೇರಿದಂತೆ ಹತ್ತುಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ.
ಗಾಯಾಳುಗಳನ್ನು ಚಾಮರಾಜನಗರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಮೃತ ಹತ್ತು ಜನರು ಬಳ್ಳಾರಿ ಮೂಲದವರು ಎನ್ನಲಾಗಿದ್ದು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಟಿ.ನರಸೀಪುರ ಮುಖ್ಯ ರಸ್ತೆಯ ಮಾರ್ಗವಾಗಿ ತೆರಳುತ್ತಿದ್ದ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಖಾಸಗಿ ಬಸ್ಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಟಿ.ನರಸೀಪುರ ಪೊಲೀಸರು ಆಗಮಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.