ದಾವಣಗೆರೆ:
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಬೆನ್ನಲ್ಲೇ ಗೋಣಿವಾಡ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತಮಟೆ ಬಾರಿಸುತ್ತ ‘ಯಾರೂ ಇನ್ಮುಂದೆ ಕರೆಂಟ್ ಬಿಲ್ ಕಟ್ಟಂಗಿಲ್ಲ’ ಎಂಬ ಸಂದೇಶ ಸಾರಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
‘ಇವತ್ತಿನಿಂದ ಯಾರೂ ಇನ್ಮುಂದೆ ಕರೆಂಟ್ ಬಿಲ್ ಕಟ್ಟಂಗಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಆರ್ಡರ್ ಮಾಡಿ ಕಳುಹಿಸಿದ್ದಾರೆ’ ಎಂದು ವ್ಯಕ್ತಿಯೊಬ್ಬರು ಗೋಣಿವಾಡ ಗ್ರಾಮದಲ್ಲಿ ಸಂಚರಿಸಿ ತಮಟೆ ಬಾರಿಸುತ್ತ ಸಂದೇಶ ಸಾರಿದ್ದಾರೆ.
ತ್ವರಿತವಾಗಿ ‘ಗ್ಯಾರಂಟಿ’ ಯೋಜನೆಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿರುವ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ನ ನಾಯಕರು ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಕರೆ ನೀಡಿದ ಬೆನ್ನಲ್ಲೇ ವಿದ್ಯುತ್ ಬಿಲ್ ಕಟ್ಟುವುದಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿರೋಧ ವ್ಯಕ್ತವಾಗುತ್ತಿದೆ.
‘ವಿಡಿಯೊ ಹರಿದಾಡಿರುವ ವಿಷಯ ಗೊತ್ತಾಗಿದೆ. ಆದರೆ ವ್ಯಕ್ತಿ ಯಾರು, ಯಾವ ಕಾರಣಕ್ಕೆ ಎಂಬುದನ್ನು ಪರಿಶೀಲಿಸಲಾಗುವುದು’ ಎಂದು ತಹಶೀಲ್ದಾರ್ ಎಂ.ಬಿ.ಅಶ್ವತ್ಥ್ ತಿಳಿಸಿದರು.