ಬೆಂಗಳೂರು:
ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈ ಸಾಲಿನ ಮುಂಗಾರು ಮಳೆ ಸ್ವಲ್ಪ ವಿಳಂಬವಾಗಿ ಆರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾಡಿಕೆಯಂತೆ ಕೇರಳ ರಾಜ್ಯಕ್ಕೆ ಮೊದಲು ಮುಂಗಾರು ಪ್ರವೇಶವಾಗುತ್ತದೆ. ಕೇರಳಕ್ಕೆ ನಾಲ್ಕು ದಿನ ತಡವಾಗಿ ಅಂದರೆ ಜೂನ್ 4 ರಂದು ಮುಂಗಾರು ಪ್ರವೇಶಿಸಲಿದೆ. ಕರ್ನಾಟಕಕ್ಕೆ ಮುಂಗಾರು ಮಳೆ ಒಂದು ವಾರದ ಬಳಿಕ, ಅಂದರೆ ಜೂನ್ ಎರಡನೇ ವಾರದಲ್ಲಿ ಪ್ರವೇಶಿಸಲಿದೆ. ಹವಾಮಾನ ವೈಪರೀತ್ಯದಿಂದ ಮುಂಗಾರು ಪ್ರವೇಶ ವಿಳಂಬವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ವರ್ಷ ನಾಲ್ಕು ದಿನ ತಡವಾಗಿ ಮುಂಗಾರು ಮಾರುತಗಳು ಕೇರಳಕ್ಕೆ ಪ್ರವೇಶಿಸಲಿದ್ದು, ಇದರಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಂಗಾರು ಮಳೆಯ ಆರಂಭ ಒಂದು ವಾರ ತಡವಾಗಲಿದೆ. ಭಾರತದ ಬಹುತೇಕ ಭಾಗದ ಕೃಷಿ ಚಟುವಟಿಕೆಗಳಿಗೆ ನೈರುತ್ಯ ಮುಂಗಾರು ಆಧಾರವಾಗಿದೆ. ಭಾರತದ ಕೃಷಿ ಸಚಿವಾಲಯದ ಪ್ರಕಾರ, ಭಾರತದ ಕೃಷಿ ಪ್ರದೇಶದ ಶೇಕಡಾ 51 ರಷ್ಟು ಉತ್ಪಾದನೆಯ ಶೇಕಡಾ 40ರಷ್ಟು ಭಾಗ ಮಳೆ ಆಧಾರಿತವಾಗಿದೆ.
ಈ ವರ್ಷದ ಆರ್ಥಿಕ ಸಮೀಕ್ಷೆಯ ಪ್ರಕಾರ ಭಾರತದ ಜನಸಂಖ್ಯೆಯ ಶೇ.47 ರಷ್ಟು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ

            
        
        
 
        