ಬೆಂಗಳೂರು :
ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಕಳೆದ ಬಾರಿಗಿಂತಲೂ ಶೇಕಡಾ 4 ಕ್ಕಿಂತಲೂ ಹೆಚ್ಚು ಮತ ಪಡೆಯುವಲ್ಲಿ ಯಶಸ್ವಿಯಾಗಿದೆ.
ಶನಿವಾರ ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ 66, ಜೆಡಿಎಸ್ 19 ಮತ್ತು ಇತರರು 4 ಸ್ಥಾನಗಳಲ್ಲಿ ಗೆದ್ದಿದ್ದಾರೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಕಾಂಗ್ರೆಸ್ನ ಮತ ಗಳಿಕೆ ಕಳೆದ ಬಾರಿಗಿಂತಲೂ ಈ ಬಾರಿ ಶೇಕಡಾ 4ಕ್ಕಿಂತಲೂ ಹೆಚ್ಚು ಜಿಗಿದಿದ್ದರೆ, ಜೆಡಿ (ಎಸ್)ನ ಮತ ಗಳಿಕೆ ಶೇಕಡಾ 5 ಕ್ಕಿಂತ ಹೆಚ್ಚು ಕುಸಿತ ಕಂಡಿದೆ.
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಶೇಕಡಾ 38.04 ಮತಗಳನ್ನು ಗಳಿಸಿತ್ತು. ಬಿಜೆಪಿ ಶೇ 36.22 ಮತ್ತು ಜೆಡಿಎಸ್ ಶೇ 18.36 ಮತಗಳನ್ನು ಗಳಿಸಿತ್ತು.
ಈ ಬಾರಿ ಕಾಂಗ್ರೆಸ್ನ ಮತಗಳ ಪ್ರಮಾಣವು ಶೇ 42.88 ಕ್ಕೆ ಏರಿದೆ. ಜೆಡಿಎಸ್ನ ಮತ ಪ್ರಮಾಣ ಶೇ 13.29ಕ್ಕೆ ಕುಸಿದಿದೆ. ಬಿಜೆಪಿಯ ಮತಗಳಿಕೆ ಶೇ. 36 ಆಗಿದೆ.
ಮತಗಳಿಕೆಯಲ್ಲಿ ಉಂಟಾದ ಬದಲಾವಣೆ ಕಾಂಗ್ರೆಸ್ನ ಸ್ಥಾನ ಗಳಿಕೆ ಮೇಲೆ ಭಾರಿ ಪರಿಣಾಮ ಬೀರಿದೆ. ಲೆಕ್ಕಾಚಾರಗಳ ಪ್ರಕಾರ ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್ 50 ರಲ್ಲಿ 33 ಸ್ಥಾನಗಳನ್ನು ಗೆದ್ದಿದೆ.
ಕಲ್ಯಾಣ ಕರ್ನಾಟಕ ಪ್ರದೇಶದ 41 ಸ್ಥಾನಗಳ ಪೈಕಿ ಕಳೆದ ಬಾರಿ 20 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಸಲ 26 ಸ್ಥಾನಗಳನ್ನು ಗೆದ್ದಿದೆ, ಆದರೆ ಈ ಪ್ರದೇಶದಲ್ಲಿ ಬಿಜೆಪಿಯ ಸಂಖ್ಯೆ 17 ರಿಂದ 10 ಕ್ಕೆ ಇಳಿದಿದೆ.
ದಕ್ಷಿಣ ಕರ್ನಾಟಕದ ಒಕ್ಕಲಿಗ ಪ್ರಾಬಲ್ಯವಿರುವ ಹಳೆ ಮೈಸೂರು ಭಾಗದಲ್ಲಿ 59 ಕ್ಷೇತ್ರಗಳ ಪೈಕಿ 37 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿದೆ. 2018ರಲ್ಲಿ ಈ ಭಾಗದಲ್ಲಿ 29 ಸ್ಥಾನ ಪಡೆದಿದ್ದ ಜೆಡಿಎಸ್ ಈ ಸಲ 14ಕ್ಕೆ ಕುಸಿದಿದೆ. ಬಿಜೆಪಿ ಗಳಿಕೆ 9ರಿಂದ 6ಕ್ಕೆ ಇಳಿದಿದೆ.