ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್ ಪರ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ಮತ್ತು ಅವರ ಪತ್ನಿ ಗೀತಾ ಶಿವರಾಜಕುಮಾರ ಶನಿವಾರ ಸಂಜೆ ಪ್ರಚಾರ ನಡೆಸಿದರು.
ಆರಂಭದಲ್ಲಿ ಸುಳೇಬಾವಿಯ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಶಿವರಾಜಕುಮಾರ ಅಲ್ಲಿಂದ ಶಿಂಧೋಳಿಗೆ ಆಗಮಿಸಿ ರೋಡ್ ಶೋ ನಡೆಸಿದರು. ರೋಡ್ ಶೋ ಆರಂಭಕ್ಕೆ ಮುನ್ನ ನಾನಿರುವುದು ನಿಮಗಾಗಿ, ಬೊಂಬೆ ಹೇಳುತೈತಿ ಮತ್ತು ಯಾರೇ ಕೂಗಾಡಲಿ ಹಾಡು ಹೇಳು ಮೂಲಕ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದರು.
ಸುಳೇಬಾವಿಗೆ ಶಿವರಾಜ ಕುಮಾರ ಆಗಮಿಸುತ್ತಿದ್ದಂತೆ ಸೇರಿದ್ದ ಜನಸ್ತೋಮ ಶಿವರಾಜ ಕುಮಾರ ಪರ ಹಾಗೂ ಲಕ್ಷ್ಮೀ ಹೆಬ್ಬಾಳಕರ್ ಪರ ಘೋಷಣೆಗಳನ್ನು ಕೂಗಿದರು. ಶಿವರಾಜ ಕುಮಾರ ಅವರಿಗೆ ಜಯವಾಗಲಿ, ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ, ಏಕ್ ದೋ ತೀನ್ ಚಾರ್ ಲಕ್ಷ್ಮೀ ಅಕ್ಕ ಜೈ ಜೈ ಕಾರ್ ಘೋಷಣೆ ಮೊಳಗಿತು.
ಈ ವೇಳೆ ಮಾತನಾಡಿದ ಶಿವರಾಜ ಕುಮಾರ, ದೇವರ ಆಶಿರ್ವಾದ, ನಿಮ್ಮೆಲ್ಲರ ಆಶಿರ್ವಾದದಿಂದ ಲಕ್ಷ್ಮೀ ಹೆಬ್ಬಾಳಕರ್ ಗೆಲ್ಲುವುದು ಖಚಿತ. ಅವರು ಈಗಾಗಲೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡುತ್ತಾರೆ. ಅವರಿಗೆ ನಿಮ್ಮ ಆಶಿರ್ವಾದ ಹೀಗೇ ಇರಲಿ ಎಂದು ಕೋರಿದರು.
ಇದೇ ವೇಳೆ, ನಾನಿರುವುದು ನಿಮಗಾಗಿ, ಬೊಂಬೆ ಹೇಳುತೈತೆ, ಯಾರೇ ಕೂಗಾಡಲಿ ಮೊದಲಾದ ಹಾಡುಗಳನ್ನು ಹೇಳಿದರು. ಕಿಕ್ಕಿರಿದು ಸೇರಿದ್ದ ಜನಸ್ತೋಮ ಶಿವರಾಜ ಕುಮಾರ ಅವರನ್ನು ಹತ್ತಿರದಿಂದ ನೋಡಲು ಮುಗಿಬೀಳುತ್ತಿದ್ದರು.
ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಇನ್ನು ನಾಲ್ಕೇ ದಿನದಲ್ಲಿ ಚುನಾವಣೆ ನಡೆಯಲಿದೆ. ನನಗೆ ಆಶಿರ್ವಾದ ಮಾಡಿ, ನಾವೆಲ್ಲರೂ ಸೇರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸೋಣ ಎಂದು ಹೇಳಿದರು.
ಸೇರಿದ್ದ ಗಣ್ಯರೆಲ್ಲರೂ ಸೇರಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾರಹಾಕಿ ಗೌರವಿಸಿದರು. ನಂತರ ಹೊನ್ನಿಹಾಳದಲ್ಲಿ ಸಹ ಭಾರೀ ಜನಸ್ತೋಮದ ಮಧ್ಯೆ ಶಿವರಾಜಕುಮಾರ ಅವರಿಂದ ರೋಡ್ ಶೋ ನಡೆಯಿತು. ಜನಸಾಗರ ನೋಡಿದವರು ಈ ಬಾರಿ ಕಳೆದ ಬಾರಿಗಿಂತ ಭಾರೀ ಅಂತರದಿಂದ ಲಕ್ಷ್ಮೀ ಹೆಬ್ಬಾಳಕರ್ ಗೆಲ್ಲುವುದು ನಿಶ್ಚಿತ ಎಂದು ಮಾತನಾಡಿಕೊಳ್ಳುತ್ತಿದ್ದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳಕರ್, ಶಂಕರಗೌಡ ಪಾಟೀಲ, ನಾಗೇಶ ದೇಸಾಯಿ, ಗಂಗಣ್ಣ ಕಲ್ಲೂರ, ಬಸವರಾಜ ಮ್ಯಾಗೋಟಿ, ನೀಲೇಶ ಚಂದಗಡಕರ್, ರಜತ ಉಳ್ಳಾಗಡ್ಡಿಮಠ ಮೊದಲಾದವರು ಇದ್ದರು.