ಬೆಳಗಾವಿ: ಈ ಬಾರಿ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಸ್ತವಾಡದಲ್ಲಿ ಚುನಾವಣೆ ಪ್ರಚಾರ ಭಾಷಣ ಮಾಡುತ್ತಿದ್ದ ಅವರು, ಕ್ಷೇತ್ರದಲ್ಲಿ ಸಂಪೂರ್ಣ ನನ್ನ ಮತ್ತು ಕಾಂಗ್ರೆಸ್ ಪರವಾದ ಅಲೆ ಉಂಟಾಗಿದೆ. ಕಳೆದ ಬಾರಿ ನನ್ನ ಜೊತೆಗಿದ್ದ ಮುಖಂಡರು, ಕಾರ್ಯಕರ್ತರ ಜೊತೆಗೆ ಈ ಬಾರಿ ಮತ್ತಷ್ಟು ಸಂಖ್ಯೆಯಲ್ಲಿ ಸೇರಿ ನನಗೆ ಆಶಿರ್ವಾದ ಮಾಡುತ್ತಿದ್ದಾರೆ. ಎಲ್ಲಿಗೆ ಹೋದರೂ ಜನ ಸಾಗರವೇ ಸೇರಿ ನನ್ನ ಮೇಲೆ ಪ್ರೀತಿ ತೋರುತ್ತಿದ್ದಾರೆ. ನಿಮ್ಮ ಬೆಂಬಲ ನೋಡಿ ನನ್ನ ಮನಸ್ಸು, ಹೃದಯ ತುಂಬಿ ಬರುತ್ತಿದೆ. ಏನು ಮಾತನಾಡಬೇಕೆಂದೇ ತೋರುತ್ತಿಲ್ಲ. ಖಂಡಿತ ಮುಂದಿನ ದಿನಗಳಲ್ಲಿ ನಿಮ್ಮ ಋಣವನ್ನು ತೀರಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
2018ರ ಚುನಾವಣೆಯಲ್ಲಿ ನನ್ನ ಜೊತೆಗಿದ್ದ ಯಾರೊಬ್ಬರೂ ನನ್ನ ಕೈ ಬಿಟ್ಟಿಲ್ಲ. ಬದಲಾಗಿ ಇನ್ನಷ್ಟು ಮುಖಂಡರು, ಕಾರ್ಯಕರ್ತರು ನನ್ನ ಬೆಂಬಲಕ್ಕೆ ಬಂದಿದ್ದಾರೆ. ನನ್ನ ಅಭಿವೃದ್ಧಿ ಕೆಲಸಕ್ಕೆ ಮೆಚ್ಚಿದ್ದಾರೆ. ಅನ್ಯ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಅನೇಕರು ವಿವಿಧ ಕಾರಣದಿಂದ ಮುಂದೆ ಬಂದು ಬೆಂಬಲಿಸಲು ಸಾಧ್ಯವಾಗುತ್ತಿಲ್ಲ. ಆದರೆ ನಾವು ನಿಮ್ಮ ಜೊತೆಗಿದ್ದೇವೆ. ಖಂಡಿತ ನೀವು ಈ ಬಾರಿ ಭಾರೀ ಅಂತರದಿಂದ ಜಯಗಳಿಸುತ್ತೀರಿ ಎಂದು ಫೋನ್ ಮಾಡಿ ಹಾರೈಸುತ್ತಿದ್ದಾರೆ. ಇದಕ್ಕಿಂತ ಅಭಿಮಾನದ ಸಂಗತಿ ಇನ್ನೇನು ಬೇಕು. ಎಲ್ಲರೂ ಜೊತೆಯಾಗಿ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸೋಣ. ಮೇ 10ರಂದು ನನ್ನ ಗುರುತಾಗಿರುವ ಹಸ್ತದ ಚಿಹ್ನೆಯ ಮುಂದಿರುವ ಬಟನ್ ಒತ್ತುವ ಮೂಲಕ ಆಶಿರ್ವದಿಸಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಕೋರಿದರು.
ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು, ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.