ಬೆಳಗಾವಿ: 2018ರ ಚುನಾವಣೆ ವೇಳೆ ನೀಡಿದ್ದ ಭರವಸೆಗಳಲ್ಲಿ ಶೇ 98ರಷ್ಟನ್ನು ಈಡೇರಿಸಿ ವಚನ ಪೂರ್ಣಗೊಳಿಸಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಮುಂದಿನ ಅವಧಿಯಲ್ಲಿ ತಮ್ಮ ಮುಂದಿರುವ ಯೋಜನೆಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಯೋಜನೆಗಳ ಜೊತೆಗೆ ಲಕ್ಷ್ಮೀ ಹೆಬ್ಬಾಳಕರ್ ತಮ್ಮ ಕ್ಷೇತ್ರಕ್ಕೆ ತಾವು ನೀಡುವ ಕೊಡುಗೆಗಳ ಪಟ್ಟಿ ಮಾಡಿದ್ದಾರೆ. ತನ್ಮೂಲಕ ಕ್ಷೇತ್ರವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ತಮ್ಮ ಮಹತ್ವಾಕಾಂಕ್ಷೆಯನ್ನು ಬಿಚ್ಚಿಟ್ಟಿದ್ದಾರೆ.
ಶಿಕ್ಷಣದಲ್ಲಿ ಹಿಂದುಳಿದಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಸರಕಾರಿ ಎಂಜಿನಿಯರಿಂಗ್ ಕಾಲೇಜು ತರುವುದಾಗಿ ಲಕ್ಷ್ಮೀ ಹೆಬ್ಬಾಳಕರ್ ಘೋಷಿಸಿದ್ದಾರೆ. ಅಲ್ಲದೆ ಸರಕಾರಿ ಐಟಿಐ ಕಾಲೇಜು ಮಂಜೂರು ಮಾಡಿಸುವುದಾಗಿಯೂ ಭರವಸೆ ನೀಡಿದ್ದಾರೆ. ಕ್ಷೇತ್ರಕ್ಕೆ ಮುರಾರ್ಜಿ ವಸತಿ ಶಾಲೆ, ರಾಣಿ ಚನ್ನಮ್ಮ ವಸತಿ ಶಾಲೆಗಳನ್ನು ಮಂಜೂರು ಮಾಡಿಸುವುದಾಗಿಯೂ ಘೋಷಿಸಿದ್ದಾರೆ.
ಕ್ಷೇತ್ರದಲ್ಲಿ 100 ಹಾಸಿಗೆಗಳ ತಾಯಿ – ಮಗುವಿನ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ. ಕ್ಷೇತ್ರದ ಎಲ್ಲ 112 ಕೆರೆಗಳನ್ನು ತುಂಬುವ ಯೋಜನೆ ತರುವುದಾಗಿ ಘೋಷಿಸಿದ್ದಾರೆ. ಬಾಗೇವಾಡಿ ಮತ್ತು ಉಚಗಾಂವ್ ನಲ್ಲಿ ಉತ್ತಮ ಗುಣಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಗ್ರಾಮೀಣ ಕ್ಷೇತ್ರದಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡುವುದಾಗಿ ಪ್ರಕಟಿಸಿರುವ ಅವರು, ಕ್ಷೇತ್ರದಲ್ಲಿ ಓಡಾಡುವ ಹಳೆಯ ಬಸ್ ಗಳನ್ನು ಬದಲಿಸಿ ಸಂಪೂರ್ಣ ಹೊಸ ಬಸ್ ಗಳನ್ನು ಓಡಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಕ್ಷೇತ್ರದಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣ, ಕೌಶಲ್ಯ ತರಬೇತಿ ಕೇಂದ್ರ, ಯುವತಿಯರಿಗೆ ನಾಯಕತ್ವ ತರಬೇತಿ, ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಸಂಪೂರ್ಣ ನೆರವು ನೀಡುವುದಾಗಿ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.
ಕೊಟ್ಟ ಮಾತಿನಂತೆ ನಡೆದುಕೊಂಡು ಕ್ಷೇತ್ರದ ಮನೆಮಗಳೆನಿಸಿಕೊಂಡಿರುವ ಲಕ್ಷ್ಮೀ ಹೆಬ್ಬಾಳಕರ್, ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಪಡಿಸುವ ಕನಸನ್ನು ಕಟ್ಟಿಕೊಂಡಿದ್ದು, ಅದಕ್ಕೆ ಪೂರಕವಾಗಿ ಯೋಜನೆಗಳನ್ನು ಘೋಷಿಸಿದ್ದಾರೆ. ಹಿಂದಿನ ಅವಧಿಯಲ್ಲಿ ವಚನ ಪೂರೈಸಿರುವುದರಿಂದ ಮುಂದಿನ ಅವಧಿಯಲ್ಲೂ ಅವರು ಖಂಡಿತ ಭರವಸೆಗಳನ್ನು ಈಡೇರಿಸುತ್ತಾರೆ ಎನ್ನುವ ವಿಶ್ವಾಸವನ್ನು ಮತದಾರರು ಅವರ ಮೇಲಿಟ್ಟಿದ್ದಾರೆ.
ಈ ಎಲ್ಲ ಯೋಜನೆಗಳನ್ನು ಜಾರಿಗೆ ತರಲು ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ತಮಗೆ ಮತ ನೀಡಿ ಆಶಿರ್ವದಿಸುವಂತೆ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಲಕ್ಷ್ಮೀ ಹೆಬ್ಬಾಳಕರ್ ಘೋಷಿಸಿರುವ ಯೋಜನೆಗಳ ಪಟ್ಟಿ
ಸರಕಾರಿ ಎಂಜಿನಿಯರಿಂಗ್ ಕಾಲೇಜು
ಸರಕಾರಿ ಐಟಿಐ ಕಾಲೇಜು
ಮುರಾರ್ಜಿ ದೇಸಾಯಿ ವಸತಿ ಶಾಲೆ
ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ
100 ಹಾಸಿಗೆಗಳ ತಾಯಿ -ಮಗುವಿನ ಆಸ್ಪತ್ರೆ
ಕ್ಷೇತ್ರದ ಎಲ್ಲ 112 ಕೆರೆಗಳ ಭರ್ತಿ
2 ಕಡೆ ಗುಣಮಟ್ಟದ ಆರೋಗ್ಯ ಕೇಂದ್ರ
ಜವಳಿ ಪಾರ್ಕ್ ನಿರ್ಮಾಣ
ಕ್ಷೇತ್ರಕ್ಕೆ ಸಂಪೂರ್ಣ ಹೊಸ ಬಸ್
ಇಂಡಸ್ಟ್ರಿಯಲ್ ಕಾರಿಡಾರ್, ಕೌಶಲ್ಯ ತರಬೇತಿ ಕೇಂದ್ರ ಇತ್ಯಾದಿ