ಬೆಳಗಾವಿ : ಶೇಕಡಾ ನೂರಕ್ಕೆ ನೂರರಷ್ಟು ಮತದಾನವಾಗಬೇಕು ಎಂದು ಚುನಾವಣಾ ಆಯೋಗ ಬೊಬ್ಬೆ ಹೊಡೆಯುತ್ತಿರುವಾಗ ಬೆಳಗಾವಿ ಜಿಲ್ಲೆಯ ಅನೇಕ ಕಡೆ ಅಂಚೆ ಮತದಾನ ಮಾಡುವ ಸಲುವಾಗಿ ಸರಕಾರಿ ನೌಕರರಿಗೆ ಹಾಗೂ ಪತ್ರಕರ್ತರಿಗೆ ಅಂಚೆ ಮತಪತ್ರ ಬಾರದೆ ಇರುವ ಸಂಗತಿ ಬೆಳಕಿಗೆ ಬಂದಿದೆ.
ಈ ಬಗ್ಗೆ ಅವರು ತರಬೇತಿ ನೀಡಿದ ಸ್ಥಳದಲ್ಲಿ ವಿಚಾರಿಸಿದಾಗ ನಿಮ್ಮದು ಅಂಚೆ ಮತ ಬರುತ್ತದೆ ಎಂದು ಹೇಳಿ ಸಬೂಬು ನೀಡಿ ಕಳಿಸಿರುವುದು ಕಂಡು ಬಂದಿದೆ. ಅದೇ ರೀತಿ ಎಸ್ಸೆನ್ಶಿಯಲ್ ನೌಕರರಿಗೆ ಸಹ ಇದುವರೆಗೆ ಮತದಾನಕ್ಕೆ ಬರಲು ಹೇಳದೇ ಇರುವುದು ಸಹ ದುರ್ದೈವದ ತುತ್ತತುದಿ !
ಬೆಳಗಾವಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ಹೋಗುವ ನೌಕರರಿಗೆ ಮತ್ತು ಪತ್ರಕರ್ತರಿಗೆ ಇನ್ನೂ ಅಂಚೆ ಮತದಾನ ತಲುಪದೇ ಇರುವುದು ಹಾಗೂ ಸರಿಯಾದ ಮಾಹಿತಿ ಒದಗಿಸದೆ ಇರುವುದು ಕಂಡುಬಂದಿದೆ.
ಇವರೆಲ್ಲರೂ ಅಂಚೆ ಮತದಾನಕ್ಕೆ ಸಂಬಂಧಪಟ್ಟಂತೆ 12 ಡಿ ಅರ್ಜಿಯನ್ನು ಸಲ್ಲಿಸಿ ಕೊಟ್ಟಿದ್ದರೂ ಸಹ ಅದಕ್ಕೆ ಯಾವುದೇ ಮಾನ್ಯತೆ ಇಲ್ಲವೇ ? ಎನ್ನುವುದು ಎಲ್ಲರನ್ನು ಕಾಡುತ್ತಿರುವ ಬಹುದೊಡ್ಡ ಪ್ರಶ್ನೆಯಾಗಿದೆ.
ಇಂದೇ ಅಂಚೆ ಮತದಾನ ಮಾಡಲು ಕೊನೆಯ ದಿನಾಂಕವಾಗಿದೆ. ಹೀಗಾಗಿ ಸರಕಾರಿ ನೌಕರರು ಹಾಗೂ ಪತ್ರಕರ್ತರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಚುನಾವಣಾ ಆಯೋಗ ಹೆಸರಿಗೆ ಮಾತ್ರ ಶೇಕಡಾ 100 ರಷ್ಟು ಮತದಾನ ಆಗಬೇಕು ಎಂದು ಡಂಗುರ ಸಾರುತ್ತದೆ. ಆದರೆ, ಸರಕಾರಿ ನೌಕರರು ಹಾಗೂ ಪತ್ರಕರ್ತರಿಗೆ ಮತದಾನಕ್ಕೆ ಸಮರ್ಪಕ ವ್ಯವಸ್ಥೆ ಮಾಡದೆ ಇರುವ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಚುನಾವಣಾ ಅಧಿಕಾರಿಗಳು ಗಮನಹರಿಸಿ ಆಗಿರುವ ಲೋಪ ಸರಿಪಡಿಸಬೇಕು ಎನ್ನುವುದು ಸರಕಾರಿ ನೌಕರರು ಹಾಗೂ ಪತ್ರಕರ್ತರ ಒತ್ತಾಯವಾಗಿದೆ.