ಬೆಳಗಾವಿ :
ಕಾಂಗ್ರೆಸ್ ಪರ ಮತಯಾಚನೆಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆಗಮಿಸುತ್ತಿರುವುದು ಕುತೂಹಲ ಕೆರಳಿಸಿದೆ. ಅವರ ಮತ ಬೇಟೆಗೆ ಬೆಳಗಾವಿಯ ಲಿಂಗಾಯತ ಮತದಾರರು ಯಾವ ರೀತಿಯಲ್ಲಿ ಸ್ಪಂದನೆ ನೀಡಲಿದ್ದಾರೆ ಎನ್ನುವುದು ಕಾದುನೋಡಬೇಕಿದೆ.
ಇಷ್ಟೊಂದು ವರ್ಷಗಳ ಕಾಲ ಜಗದೀಶ ಶೆಟ್ಟರ್ ಅವರು ಬಿಜೆಪಿ ನಾಯಕರಾಗಿ
ಆಗಮಿಸುತ್ತಿದ್ದರು. ಆದರೆ, ಈಗ ಮಾತ್ರ ಕಾಂಗ್ರೆಸ್ ನಾಯಕರಾಗಿ ಬದಲಾಗಿದ್ದಾರೆ.
ಬಿಜೆಪಿ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಸೇರ್ಪಡೆಗೊಂಡು ಚುನಾವಣೆ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಇದೇ ಮೊದಲ ಬಾರಿಗೆ ಬೆಳಗಾವಿ ನಗರಕ್ಕೆ ಆಗಮಿಸುತ್ತಿರುವುದರಿಂದ ಯಾವ ಪ್ರಮಾಣದಲ್ಲಿ ಲಿಂಗಾಯತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ನೋಡಬೇಕಿದೆ.
ಲಿಂಗಾಯತ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಹಾಂತೇಶ ನಗರ ಮಹಾಂತ ಭವನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಇಂದು ಸಂಜೆ 5:00 ಗಂಟೆಗೆ ಜಗದೀಶ ಶೆಟ್ಟರ್ ಕಾರ್ಯಕ್ರಮ ನಡೆಯಲಿದೆ. ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಶೇಠ ಅವರ ಪರವಾಗಿ ಜಗದೀಶ ಶೆಟ್ಟರ್ ಮತಯಾಚನೆ ಮಾಡಲಿದ್ದಾರೆ.
ಒಟ್ಟಾರೆ ಶೆಟ್ಟರ್ ಬೆಳಗಾವಿಯಲ್ಲಿ ಕಾಂಗ್ರೆಸ್ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಎಷ್ಟು ಪ್ರಮಾಣದಲ್ಲಿ ಲಿಂಗಾಯತ ಮತದಾರರನ್ನು ಓಲೈಸಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.