ದೆಹಲಿ :ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಈಗಲೇ ಕಚ್ಚಾಟ ನಡೆದಿದೆ. ಈ ನಡುವೆ ಪಕ್ಷದ ಇತರ ನಾಯಕರು ತಾವು ಸಹ ಮುಖ್ಯಮಂತ್ರಿಯ ಸ್ಥಾನದ ಆಕಾಂಕ್ಷಿಗಳು ಎಂದು ಪದೇ ಪದೇ ಹೇಳುತ್ತಿದ್ದಾರೆ. ಲಿಂಗಾಯತ ಕೋಟಾದಡಿ ಹಿರಿಯ ನಾಯಕ ಎಂ.ಬಿ. ಪಾಟೀಲ ತಾವು ಸಹ ಮುಖ್ಯಮಂತ್ರಿ ಆಗುವುದಾಗಿ ಹಲವು ಬಾರಿ ಹೇಳಿಕೊಂಡಿದ್ದರು. ಈಗ ಮತ್ತೊಮ್ಮೆ ಈ ವಿಚಾರವನ್ನು ಅವರು ಪುನರುಚ್ಚರಿಸಿದ್ದಾರೆ.ನಾನು ಸಹ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರು ಆಗಿರುವ ಅವರು, ಈ ಬಗ್ಗೆ ಪ್ರತಿಕ್ರಿಯೆ ನೀಡಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮಾತ್ರವಲ್ಲ. ಹಲವರು ಮುಖ್ಯಮಂತ್ರಿ ಆಗಲು ಅರ್ಹರಿದ್ದಾರೆ. ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ ಸಹ ಆರ್ಹರಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಪಕ್ಷದ ಉನ್ನತ ನಾಯಕರಾಗಿದ್ದಾರೆ. ನಾನು, ದಿನೇಶ್ ಗುಂಡೂರಾವ್, ಡಿ.ಕೆ. ಶಿವಕುಮಾರ್, ಕೃಷ್ಣ ಬೈರೇಗೌಡ ನಂತರದ ಸ್ಥಾನದಲ್ಲಿದ್ದೇವೆ. ಚುನಾವಣೆ ನಂತರ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಆನಂತರ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ ಕಾಂಗ್ರೆಸ್ ನಲ್ಲಿ ಇದು ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಈ ಸಲವು ಈ ಸಂಪ್ರದಾಯ ಮುಂದುವರಿಯಲಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವ ಮಹತ್ವಕಾಂಕ್ಷಿ ವ್ಯಕ್ತಪಡಿಸುವುದು ತಪ್ಪಲ್ಲ. ಆದರೆ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಪಕ್ಷ ಯಾರನ್ನು ಬಿಂಬಿಸಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುತ್ತದೆ. ಲಿಂಗಾಯತರು ಈ ಬಾರಿ ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ ಎಂದು ಅವರು ಹೇಳಿದರು.
ಚುನಾವಣೆಯಲ್ಲಿ ಲಿಂಗಾಯತರಿಗೆ ಪಕ್ಷ ಗರಿಷ್ಠ ಸ್ಥಾನ ನೀಡಲಿದೆ. 166 ಸ್ಥಾನಗಳ ಪೈಕಿ 43 ಕ್ಷೇತ್ರಗಳಲ್ಲಿ ಲಿಂಗಾಯತರನ್ನು ಕಣಕ್ಕಿಳಿಸಿದೆ ಎಂದು ತಿಳಿಸಿದರು.