ಖಾಸಗಿ ವೀಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಾಗಿ ನಟ ಕಿಚ್ಚ ಸುದೀಪ್ಗೆ ಬೆದರಿಕೆ ಪತ್ರ ಬರೆದಿರುವುದು ಯಾರು ಎಂಬುದನ್ನು ಅವರು ಇದೀಗ ಬಹಿರಂಗಪಡಿಸಿದ್ದಾರೆ . ಈ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೆದರಿಕೆ ಪತ್ರ ಬರೆದಿರುವುದು ರಾಜಕೀಯದವರಲ್ಲ . ಖಂಡಿತ ಇದನ್ನು ಚಿತ್ರರಂಗದವರೇ ಮಾಡಿಸಿದ್ದಾರೆ . ಯಾರು ಅಂತ ಗೊತ್ತಿದ್ದರೂ ಈಗ ಸೈಲೆಂಟಾಗಿ ಇರುತ್ತೇನೆ . ಅದಕ್ಕೆ ಹೇಗೆ ಉತ್ತರ ಕೊಡಬೇಕೆಂದು ನನಗೆ ಗೊತ್ತಿದೆ. ಇವೆಲ್ಲ ಕಾನೂನು ಪ್ರಕಾರ ಹೋದರೆ ಒಳ್ಳೆಯದು ಎಂದರು.
ಬೆಂಗಳೂರು:
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಕಾವು ಇದೀಗ ಎಲ್ಲಾ ಕಡೆ ಕಾವೇರಿದೆ ಈ ನಡುವೆ ಚಲನಚಿತ್ರ ನಟ ಸುದೀಪ್ ರಾಜಕೀಯ ಸೇರ್ಪಡೆ ಚರ್ಚೆಗೆ ಗ್ರಾಸವಾಗಿತ್ತು.
ಈ ಬಗ್ಗೆ ಕೇಳಿ ಬಂದ ವದಂತಿಗೆ ಕೊನೆಗೆ ಅವರೇ ತೆರೆ ಎಳೆದಿದ್ದಾರೆ.
ನಾನು ಯಾವ ಪಕ್ಷದಿಂದಲೂ ಸ್ಪರ್ಧೆ ಮಾಡುತ್ತಿಲ್ಲ. ನಾನು ಯಾರ ಪರವೂ ಟಿಕೆಟ್ ಕೇಳಿಲ್ಲ. ಟಿಕೆಟ್ ಕೊಡಿಸುವಷ್ಟು ಪ್ರಭಾವಿ ನಾನಲ್ಲ ಎಂದು ನಟ ಸುದೀಪ್ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ‘ಯಾರಾದರೂ ಟಿಕೆಟ್ ಕೇಳಿದರೆ ಹೊಸ ಸಿನಿಮಾ ಬಿಡುಗಡೆ ಆದಾಗ ಸಿನಿಮಾ ಟಿಕೆಟ್ ಕೊಡಿಸಬಲ್ಲೆ ಅಷ್ಟೇ. ನಾನು ಯಾರ ಪರವೂ ಅಲ್ಲ. ಆದರೆ, ಸಿನಿಮಾ ಕ್ಷೇತ್ರಕ್ಕೆ ಬಂದಾಗ ನನ್ನ ಕಷ್ಟದ ಕಾಲದಲ್ಲಿ ಕೆಲವರು ನನ್ನ ಜೊತೆ ನಿಂತಿದ್ದರು. ಆ ಕಾರಣಕ್ಕಾಗಿ ನಾನು ಕೆಲವರ ಪರ ನಿಲ್ಲಬೇಕಾಗುತ್ತದೆ. ಉಳಿದಂತೆ ನಾನೊಬ್ಬ ನಟ ಅಷ್ಟೇ. ಅವರಿಗೆ ಟಿಕೆಟ್ ಇವರಿಗೆ ಟಿಕೆಟ್ ಕೊಡಿಸುತ್ತೇನೆ ಎಂಬುದೆಲ್ಲಾ ಸುಳ್ಳು ಎಂದು ನಟ ಸುದೀಪ್ ಸ್ಪಷ್ಟಪಡಿಸಿದರು.
ಎಲ್ಲ ಪಕ್ಷಗಳಲ್ಲೂ ನನಗೆ ಆತ್ಮೀಯರಿದ್ದಾರೆ. ಆದರೆ, ಕೆಲವೊಂದು ಸಂದರ್ಭದಲ್ಲಿ ನಿಲುವುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನನಗೆ ನೆರವಾದವರಿಗೆ ಪುಟ್ಟ ಕೃತಜ್ಞತೆ ಅರ್ಪಿಸುವ ನಿಟ್ಟಿನಲ್ಲಿ ಇಂಥ ಕೆಲವು ನಿಲುವುಗಳನ್ನು ತೆಗೆದುಕೊಳ್ಳುತ್ತೇನೆ. ಅದು ಏನು ಎಂಬುದನ್ನೂ ಹೇಳುತ್ತೇನೆ ಎಂದರು.
ಈ ನಡುವೆ ಸುದೀಪ್ ಅವರಿಗೆ ಬಂದಿರುವ ಅನಾಮಧೇಯ ಬೆದರಿಕೆ ಪತ್ರದ ಬಗೆಗೂ ತನಿಖೆ ನಡೆಯುತ್ತಿದೆ. ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅದನ್ನು ಸಿಸಿಬಿಗೆ ವರ್ಗಾಯಿಸುವ ಬಗ್ಗೆ ಪೊಲೀಸರು ಚಿಂತನೆ ನಡೆಸಿದ್ದಾರೆ.
‘ಅನಾಮಧೇಯ ಬೆದರಿಕೆ ಪತ್ರ ಬಂದಿದೆ ಎಂದ ಮಾತ್ರಕ್ಕೆ ಅದನ್ನು ನಿರ್ಲಕ್ಷಿಸಲಾಗದು. ಅದಕ್ಕೆ ಯಾವ ಮಾರ್ಗದಿಂದ ಪ್ರತಿಕ್ರಿಯಿಸಬೇಕೋ ಅಲ್ಲಿಯೇ ಪ್ರತಿಕ್ರಿಯಿಸುತ್ತೇನೆ. ಕಾನೂನು ಕ್ರಮ ತೆಗೆದುಕೊಳ್ಳುವುದು ನಿಶ್ಚಿತ. ಏಕೆಂದರೆ ನನಗೆ ಈ ರೀತಿ ಮಾಡಿದವರು ನಾಳೆ ಬೇರೆಯವರಿಗೂ ಹೀಗೆ ಮಾಡಬಾರದಲ್ಲವೇ ಎಂದು ಸುದೀಪ್ ನುಡಿದರು.