ನವದೆಹಲಿ:
ಜನರಿಗೆ ಕಾನೂನು ಸೇವೆ ಒದಗಿಸುವುದರಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ.
ಇಂಡಿಯಾ ಜಸ್ಟೀಸ್ 2022ರ ವರದಿಯ ಪ್ರಕಾರ ಕಾನೂನು ಸೇವೆ ಒದಗಿಸುವುದರಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, ಮೊದಲ ಐದು ಸ್ಥಾನಗಳಲ್ಲಿ ದಕ್ಷಿಣದ ರಾಜ್ಯಗಳು ಇವೆ.
ಒಂದು ಕೋಟಿಗೂ ಅಧಿಕ ಜನಸಂಖ್ಯೆ ಇರುವ ದೊಡ್ಡ ಹಾಗೂ ಮಧ್ಯಮ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನ ಪಡೆದಿದ್ದು, ತಮಿಳುನಾಡು, ತೆಲಂಗಾಣ, ಗುಜರಾತ್ ಹಾಗೂ ರಾಜಸ್ಥಾನ ಅನಂತರದ ಸ್ಥಾನದಲ್ಲಿವೆ.
1 ಕೋಟಿಗಿಂತ ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳ ಪೈಕಿ ಸಿಕ್ಕಿಂ ಮೊದಲ ಸ್ಥಾನದಲ್ಲಿದ್ದು, ಅರುಣಾಚಲ ಪ್ರದೇಶ ಹಾಗೂ ತ್ರಿಪುರ ಬಳಿಕ ಸ್ಥಾನ ಪಡೆದುಕೊಂಡಿವೆ.
ಮಂಗಳವಾರ ಈ ವರದಿ ಬಿಡುಗಡೆಯಾಗಿದ್ದು, ದೆಹಲಿ ಹಾಗೂ ಛತ್ತೀಸಗಡ ಹೊರತುಪಡಿಸಿ ಯಾವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವೂ ಕೂಡ ತನ್ನ ವಾರ್ಷಿಕ ಖರ್ಚಿನ ಶೇ 1ಕ್ಕಿಂತಹೆಚ್ಚು ನ್ಯಾಯಾಂಗಕ್ಕೆ ಖರ್ಚು ಮಾಡುತ್ತಿಲ್ಲ. ಈ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ 30 ರಷ್ಟು ನ್ಯಾಯಾಧೀಶ ಹುದ್ದೆಗಳು ಖಾಲಿ ಇದೆ ಎನ್ನುವುದು ಗಮನಾರ್ಹ.
ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ನ್ಯಾಯಾಂಗದಲ್ಲಿ ಖಾಲಿ ಹುದ್ದೆಗಳು, ಬಜೆಟ್ನಲ್ಲಿ ಹಣ ಮೀಸಲಿಡುವುದು, ಮೂಲಸೌಕರ್ಯ, ಮಾನವ ಸಂಪನ್ಮೂಲ, ಕಾನೂನು ನೆರವು, ಕಾರಾಗೃಹಗಳ ಸ್ಥಿತಿ, ಪೊಲೀಸ್ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಕಾರ್ಯನಿರ್ವಹಣೆ ಮುಂತಾದ ಮಾನದಂಡಗಳನ್ನು ಇಟ್ಟುಕೊಂಡು ಈ ವರದಿ ತಯಾರಿಸಲಾಗಿದೆ.
ವರದಿಯ ಪ್ರಕಾರ ಸದ್ಯ ಪ್ರತಿ ಹತ್ತು ಲಕ್ಷ ಮಂದಿಗೆ 19 ಮಂದಿ ನ್ಯಾಯಾಧೀಶರಿದ್ದಾರೆ.