ನಾಗ್ಪುರ:
ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ದಿವಂಗತ ವಿ.ಡಿ. ಸಾವರ್ಕರ್ ಅವರ ತ್ಯಾಗವನ್ನು ಯಾರೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಅವರ ಮೇಲಿನ ಭಿನ್ನಾಭಿಪ್ರಾಯಗಳನ್ನು ಇಂದು ರಾಷ್ಟ್ರೀಯ ವಿಷಯವನ್ನಾಗಿ ಮಾಡಲು ಸಾಧ್ಯವಿಲ್ಲ, ಏಕೆಂದರೆ ನಾವು ಅನೇಕ ಮುಖ್ಯ ವಿಷಯಗಳ ಮೇಲೆ ಕೇಂದ್ರೀಕರಿಸಬೇಕಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಶನಿವಾರ ಹೇಳಿದ್ದಾರೆ.
ಇದೇ ವೇಳೆ ವಿದೇಶಿ ನೆಲದಲ್ಲಿ ಭಾರತದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದಿಂದ ಟೀಕೆಗೆ ಗುರಿಯಾಗುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿಕೊಂಡ ಅವರು, ವಿದೇಶದಲ್ಲಿ ಭಾರತೀಯರು ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುವುದು ಇದೇ ಮೊದಲಲ್ಲ ಎಂದು ಹೇಳಿದ್ದಾರೆ.
ನಾಗ್ಪುರದ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ, ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿಯೊಂದಿಗೆ ಮಾತನಾಡಿದ್ದೀರಾ ಮತ್ತು ಸಾವರ್ಕರ್ ಅವರ ಬಗ್ಗೆ ಕಾಂಗ್ರೆಸ್ ನಾಯಕರು ತಮ್ಮ ಟೀಕೆಯನ್ನು ಕಡಿಮೆ ಮಾಡುತ್ತಾರೆಯೇ ಎಂಬ ಮಾಧ್ಯದಮವರ ಪ್ರಶ್ನೆಗೆ ಉತ್ತರಿಸಿದ ಪವಾರ್, 18-20 ರಾಜಕೀಯ ಪಕ್ಷಗಳ ನಾಯಕರು ಇತ್ತೀಚೆಗೆ ಒಟ್ಟಿಗೆ ಕುಳಿತು ದೇಶದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಅಧಿಕಾರದಲ್ಲಿರುವವರು ದೇಶವನ್ನು ಹೇಗೆ ನಡೆಸುತ್ತಿದ್ದಾರೆ ಎಂಬುದರ ಕುರಿತು ನಾವು ಉದ್ದೇಶಪೂರ್ವಕವಾಗಿ ಚರ್ಚಿಸುವ ಅವಶ್ಯಕತೆಯಿದೆ ಎಂದು ನಾನು ಸಲಹೆ ನೀಡಿದ್ದೇನೆ” ಎಂದು ಅವರು ಹೇಳಿದರು.
ಸಾವರ್ಕರ್ ಬಗ್ಗೆ ಕೆಲವು ವಿಷಯಗಳನ್ನು ಹೇಳಿದ್ದೇವೆ ಆದರೆ ಅದು ಅವರ ವೈಯಕ್ತಿಕ ವಿಷಯವಲ್ಲ, ಅದೆಲ್ಲವೂ ಹಿಂದೂ ಮಹಾಸಭಾಕ್ಕೆ ವಿರುದ್ಧವಾದ ಹೇಳಿಕೆಗಳಾಗಿವೆ, ಆದರೆ ಇದಕ್ಕೆ ಇನ್ನೊಂದು ಮುಖವಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಸಾವರ್ಕರ್ ಮಾಡಿದ ತ್ಯಾಗವನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ ಎಂದು ಪವಾರ್ ಹೇಳಿದ್ದಾರೆ.
ಸುಮಾರು 32 ವರ್ಷಗಳ ಹಿಂದೆ ತಾನು ಸಾವರ್ಕರ್ ಅವರ ಪ್ರಗತಿಪರ ಅಭಿಪ್ರಾಯಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ್ದೆ. ಸಾವರ್ಕರ್ ಅವರು ರತ್ನಗಿರಿಯಲ್ಲಿ ಮನೆಯನ್ನು ನಿರ್ಮಿಸಿದರು ಮತ್ತು ಅದರ ಮುಂದೆ ಸಣ್ಣ ದೇವಾಲಯವನ್ನು ಸಹ ನಿರ್ಮಿಸಿದರು. “ಅವರು ದೇವಸ್ಥಾನದಲ್ಲಿ ಪೂಜೆ ಮಾಡಲು ವಾಲ್ಮೀಕಿ ಸಮುದಾಯದ ವ್ಯಕ್ತಿಯನ್ನು ನಿಯೋಜಿಸಿದರು. ಇದು ಅತ್ಯಂತ ಪ್ರಗತಿಪರ ವಿಷಯ ಎಂದು ನಾನು ಭಾವಿಸುತ್ತೇನೆ” ಎಂದು ಪವಾರ್ ಹೇಳಿದರು.
ಸಾವರ್ಕರ್ ಅವರನ್ನು ರಾಷ್ಟ್ರೀಯ ನಿರೂಪಣೆಗೆ ತಳ್ಳುವ ಅಗತ್ಯವಿಲ್ಲ, ಯಾಕೆಂದರೆ ನಾವು ವಿಶೇಷವಾಗಿ ಚರ್ಚಿಸಬೇಕಾದ ಸಾಮಾನ್ಯ ಜನರಿಗೆ ಸಂಬಂಧಿಸಿದ ಹಲವಾರು ಪ್ರಮುಖ ಸಮಸ್ಯೆಗಳಿವೆ ಎಂದು ಅವರು ಹೇಳಿದರು. ಗಾಂಧಿಯವರ ಬಗ್ಗೆ ಬಿಜೆಪಿಯ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರಿಗೂ ಎಲ್ಲರಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ ಎಂದು ಹೇಳಿದರು.
ವಿದೇಶಿ ನೆಲದಲ್ಲಿ ಭಾರತಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ನಾಯಕರೊಬ್ಬರು ಮಾತನಾಡುವಯದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಮೊದಲ ಬಾರಿಗೆ ಮಾತನಾಡಿದ್ದಲ್ಲವಾದ್ದರಿಂದ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.
ಅವರ ನಾಗ್ಪುರ ಭೇಟಿಯ ಸಂದರ್ಭದಲ್ಲಿ, ಪವಾರ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮನೆಗೆ ಭೇಟಿ ನೀಡಿದರು ಮತ್ತು ಇದು ಸೌಜನ್ಯದ ಭೇಟಿ ಎಂದು ಕರೆದರು.