ಬೆಂಗಳೂರು :
ವಿಧಾನಸಭಾ ಚುನಾವಣೆ ದಿನ ದಿನವೂ ಕಾವೇರತೊಡಗಿದೆ. ಆದರೆ ಕಾಂಗ್ರೆಸ್ ಇದೀಗ ಗೆಲ್ಲುವ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿ ರಣಕಹಳೆ ಮೊಳಗಿಸಿದೆ. ಆಡಳಿತರೂಢ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿಲ್ಲ. ಇದು ಹಲವರಿಗೆ ನಿರಾಶೆ ಮೂಡಿಸಿದೆ. ಆದರೆ ಈ ಬಾರಿ ಕರ್ನಾಟಕದಲ್ಲಿ ಗೆದ್ದೇ ತೀರ ಬೇಕು ಎಂದು ಹವಣಿಸಿರುವ ಕಮಲ ಪಕ್ಷ ಇದೀಗ ಚುನಾವಣೆ ಗೆಲ್ಲಲು ರಣತಂತ್ರ ಕೂಡಿದೆ. ಇದುವರೆಗೆ ಗುಜರಾತ್ ಮಾದರಿಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕಡಿತಗೊಳಿಸಿ ಹೊಸಬರಿಗೆ ಟಿಕೆಟ್ ನೀಡಲಾಗುವುದು ಎಂಬ ವದಂತಿಗಳು ಹೊರಡಿದ್ದವು. ಆದರೆ ಇದೀಗ ಬಂದ ಮಾಹಿತಿ ಪ್ರಕಾರ ಬಿಜೆಪಿ ಕರ್ನಾಟಕ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಗುಜರಾತ್ ಬದಲಿಗೆ ಅಮೆರಿಕ ಮಾದರಿ ಚುನಾವಣೆಗೆ ಮೊರೆ ಹೋಗಿರುವುದು ಕಂಡು ಬಂದಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಭಾರಿ ಕಸರತ್ತು ನಡೆಯುತ್ತಿದೆ. ಕಾಂಗ್ರೆಸ್ ಈಗಾಗಲೇ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಸಜ್ಜಾಗಿದೆ. ಆದರೆ ಬಿಜೆಪಿ ಈ ಬಾರಿ ಅಭ್ಯರ್ಥಿಗಳ ಆಯ್ಕೆಗೆ ಹೊಸ ಮಾದರಿ ಅನುಸರಿಸಿದೆ. ಅಭ್ಯರ್ಥಿಗಳ ಆಯ್ಕೆಗೆ ಮತದಾನ ಮಾಡಿದೆ. ಈ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಹೈಕಮಾಂಡ್ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮಾದರಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಮತದಾನ ನಡೆಯುತ್ತದೆ. ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಪಕ್ಷದ ಸದಸ್ಯರು ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ. ಬಳಿಕ ಪಾರ್ಟಿ ಅಧ್ಯಕ್ಷ ಚುನಾವಣಾ ಅಭ್ಯರ್ಥಿಯನ್ನು ಘೋಷಿಸುತ್ತದೆ. ಇದೀಗ ಕರ್ನಾಟಕದಲ್ಲಿ ಬಿಜೆಪಿ ಇದೇ ಮಾದರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಚುನಾವಣೆ ನಡೆದಿದೆ. ಇಂದು ಹಾಗೂ ನಾಳೆ ಬಿಜೆಪಿ ಮಹತ್ವದ ಸಭೆ ನಡೆಸಿ ಅಂತಿಮ ಪಟ್ಟಿಯನ್ನು ಹೈಕಮಾಂಡ್ಗೆ ಕಳುಹಿಸಲಾಗುತ್ತದೆ.
ಅಮೆರಿಕದ ಪ್ರೈಮರಿ ಆಯ್ಕೆಯಲ್ಲಿ ಅನುಸರಿಸುವ ಅದೇ ಮಾದರಿಯನ್ನು ಕರ್ನಾಟಕದಲ್ಲಿ 224 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಬಳಸಲಾಗಿದೆ. ಕರ್ನಾಟಕದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಈ ಮಾದರಿ ಸೂಚಿಸಿದ ಹೆಗ್ಗಳಿಕೆಗೆ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಪಾತ್ರರಾಗಿದ್ದಾರೆ. ಬಿಜೆಪಿ ಪಕ್ಷಕ್ಕಾಗಿ ದುಡಿದ ಸಾಮಾನ್ಯ ಕಾರ್ಯಕರ್ತ ತನ್ನ ನಾಯಕ ಯಾರಾಗಬೇಕು ಅನ್ನೋದು ನಿರ್ಧರಿಸಲು ಇದರಿಂದ ಅವಕಾಶ ಸಿಗುತ್ತದೆ. ಜೊತೆಗೆ ಸ್ಥಳೀಯ ಮಟ್ಟದಲ್ಲಿ ಯಾವ ನಾಯಕನಿಗೆ ಕಾರ್ಯಕರ್ತರ ಬೆಂಬಲ ಇದೆ ಅನ್ನೋದು ಸ್ಪಷ್ಟವಾಗಲಿದೆ.
ಬಿಜೆಪಿ ಈಗಾಗಲೇ ಅಭ್ಯರ್ಥಿ ಆಯ್ಕೆಗೆ ಮತದಾನವನ್ನು ಯಶಸ್ವಿಯಾಗಿ ಮುಗಿಸಿದೆ. ಪಕ್ಷದ 39 ಸಂಘಟನಾತ್ಮಕ ಜಿಲ್ಲೆಗಳಲ್ಲಿ 224 ವಿಧಾನಸಭಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಕುರಿತು ಅಭಿಪ್ರಾಯ ಸಂಗ್ರಹವು ಯಶಸ್ವಿಯಾಗಿ ನಡೆದಿದೆ. ಪ್ರತಿ ಜಿಲ್ಲೆಗೆ ಮೂವರು ಹಿರಿಯ ಮುಖಂಡರ ತಂಡವನ್ನು ರಚಿಸಲಾಗಿತ್ತು. ಅಪೇಕ್ಷಿತರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಯ ರಾಜ್ಯ, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ನಿಕಟಪೂರ್ವ ಸದಸ್ಯರು ಸೇರಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಮತ್ತು ಪಕ್ಷದ ಮುಖಂಡರು ಈ ಸಭೆಗಳಲ್ಲಿ ಭಾಗವಹಿಸಿದ್ದರು. ಅಭಿಪ್ರಾಯ ಸಂಗ್ರಹಕ್ಕೆ ನಿಗದಿತ ನಮೂನೆಯನ್ನು ಬಳಸಿದ್ದು, ಕಾರ್ಯಕರ್ತರು ತಮಗೆ ಕೊಟ್ಟ ವಿಶೇಷ ಅವಕಾಶಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಸಂಗ್ರಹಿತ ಅಭಿಪ್ರಾಯವನ್ನು ಜಿಲ್ಲಾ ಕೋರ್ ಕಮಿಟಿ ಸಭೆಯು ಕ್ರೋಡೀಕರಿಸಿ, ರಾಜ್ಯ ಕೋರ್ ಕಮಿಟಿಗೆ ಕಳುಹಿಸಲಿದೆ. ಬಳಿಕ ಕೇಂದ್ರ ಸಂಸದೀಯ ಮಂಡಳಿಗೆ ಹೆಸರುಗಳ ಶಿಫಾರಸು ಮಾಡಲಾಗುತ್ತದೆ
ಪಟ್ಟಿ ತಯಾರು ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಇನ್ನೊಂದು ವಾರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲ ಹಂತಗಳಲ್ಲಿ ಅಭ್ಯರ್ಥಿಗಳ ಸಾಮರ್ಥ್ಯ ಹಾಗೂ ಧನಾತ್ಮಕ ವಿವರಗಳನ್ನು ಕಲೆ ಹಾಕಲಾಗಿದ್ದು, ಹೈಕಮಾಂಡ್ ಸೂಕ್ಷ್ಮವಾಗಿ ಪರಿಶೀಲಿಸಿ ಸೂಕ್ತ ಮತ್ತು ಗೆಲ್ಲುವ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯ ನೀಡಲಿದೆ ಎಂದರು.