ಬೆಳಗಾವಿ :
ಜನರ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಬೇಕಾದ ಹೆಚ್ಚಿನ ಸರಕಾರಿ ಆಸ್ಪತ್ರೆಗಳೇ ಅನಾರೋಗ್ಯದಿಂದ ಬಳಲುತ್ತಿರುತ್ತವೆ. ಅಲ್ಲಿ ಹೆಚ್ಚಿನ ಸಮಯ ವೈದ್ಯರೇ ಸಿಗುವುದಿಲ್ಲ, ವೈದ್ಯರಿದ್ದರೆ ಔಷಧ ಇರುವುದಿಲ್ಲ, ಎಲ್ಲವೂ ಇದ್ದರೆ ವೈದ್ಯಕೀಯ ಉಪಕರಣ ಬಳಸಲು ವಿದ್ಯುತ್ ಇರುವುದಿಲ್ಲ. ರಾತ್ರಿಯಂತೂ ವಿದ್ಯುತ್ ಕೈಕೊಟ್ಟರೆ ಕತೆ ಮುಗಿಯಿತು. ಹಾಗಾಗಿ ಹಳ್ಳಿಗಳಲ್ಲಿ ಆಸ್ಪತ್ರೆಗೆ ಬರುವ ರೋಗಿಗಳು ಹೆಚ್ಚಿನ ಸಮಯ ನಿರಾಶರಾಗಿ ಮರಳುವುದು ಅನಿವಾರ್ಯ.
ಇಂತಹ ಸಂದರ್ಭದಲ್ಲಿ ಬೆಳಗಾವಿ ತಾಲೂಕಿನ ಬೆಳಗುಂದಿ ಸರಕಾರಿ ಆಸ್ಪತ್ರೆಗೆ ಇದೀಗ ಸೋಲಾರ್ ವಿದ್ಯುತ್ ಬಲ ನೀಡಲಾಗಿದೆ. ಸೆಲ್ಕೋ ಸೋಲಾರ್ ಸಿಸ್ಟಂ ಆಸ್ಪತ್ರೆಗೆ ಸೋಲಾರ್ ವಿದ್ಯುತ್ ಒದಗಿಸಿದ್ದು, ವಿದ್ಯುತ್ ಕೈ ಕೊಟ್ಟರೂ ಚಿಕಿತ್ಸೆಗೆ ಅಡ್ಡಿಯಾಗುವುದಿಲ್ಲ. ಯೋಜನೆಯನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ವಿಶೇಷ ಪ್ರಯತ್ನ ಮಾಡಿ ಬೆಳಗುಂದಿ ಆಸ್ಪತ್ರೆಗೆ ತಂದಿದ್ದಾರೆ. ಜೊತೆಗೆ ಅದಕ್ಕೆ ಅಗತ್ಯವಾದ ಪೂರಕ ವೆಚ್ಚವನ್ನೂ ಅವರು ಸ್ವತಃ ನೀಡಿದ್ದಾರೆ.
ಈಗಾಗಲೆ ಯೋಜನೆ ಪೂರ್ಣಗೊಂಡಿದ್ದು, ಒಂದು ತಿಂಗಳು ಪ್ರಾಯೋಗಿಕ ಬಳಕೆಯೂ ಯಶಸ್ವಿಯಾಗಿದೆ. ಈ ಯೋಜನೆಯಿಂದಾಗಿ ಬೆಳಗುಂದಿ ಮತ್ತು ಸುತ್ತಲಿನ 4 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಅನುಕೂಲವಾಗಿದೆ. ಅವರು ಯಾವುದೇ ಸಂದರ್ಭದಲ್ಲಿ ಆಸ್ಪತ್ರೆಗೆ ಬಂದರೂ ವಿದ್ಯುತ್ ಸಮಸ್ಯೆ ಕಾಡುವುದಿಲ್ಲ. ರಾತ್ರಿ ವೇಳೆ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಹಾಯವಾಗಿದೆ.
————–
“ಮುಂದಿನ ದಿನಗಳಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸೋಲಾರ್ ವ್ಯವಸ್ಥೆ ಅಳವಡಿಸಲು ಸೆಲ್ಕೋ ಸೋಲಾರ್ ಜೊತೆ ಮಾತುಕತೆ ನಡೆಸಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ”
-ಲಕ್ಷ್ಮೀ ಹೆಬ್ಬಾಳಕರ್, ಶಾಸಕರು
—–
“ಈ ಮೊದಲು ವಿದ್ಯುತ್ ಸಮಸ್ಯೆಯಿಂದಾಗಿ ಚಿಕಿತ್ಸೆ ನೀಡಲು ತೊಂದರೆಯಾಗುತ್ತಿತ್ತು. ಈಗ ಸೋಲಾರ್ ವ್ಯವಸ್ಥೆಯಿಂದಾಗಿ ಶಸ್ತ್ರ ಚಿಕಿತ್ಸೆಗಳಿಗೂ ಅನುಕೂಲವಾಗಿದೆ”
-ಡಾ.ರಾಮಕೃಷ್ಣ, ಬೆಳಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ
——–
“ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದೆ ನಗರದತ್ತ ಮುಖ ನೋಡುವ ಸ್ಥಿತಿ ಇತ್ತು. ಹಾಗಾಗಿ ಸೆಲ್ಕೋ ಸಂಸ್ಥೆ ಸೌರ ವಿದ್ಯುತ್ ಮೂಲಕ ಆಸ್ಪತ್ರೆಗಳ ನೇರವಿಗೆ ಧಾವಿಸುತ್ತಿದೆ”
-ವಿನಾಯಕ ಹೆಗಡೆ, ಸೆಲ್ಕೋ ಸೋಲಾರ್ ಏರಿಯಾ ಮ್ಯಾನೇಜರ್