ಬೆಂಗಳೂರು :
ಎನ್ ಐ ಎ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿಗೆ ಅನುಕೂಲವಾಗುವಂತೆ ರಾಜ್ಯದ ಕಂದಾಯ ವಿಭಾಗಗಳಾದ ಬೆಳಗಾವಿ, ಕಲಬುರ್ಗಿ ಮತ್ತು ಮೈಸೂರಿನಲ್ಲಿ ಎನ್ಐಎ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ವ್ಯಕ್ತಿಯೊಬ್ಬರು ಧರ್ಮವೊಂದಕ್ಕೆ ಅಪಮಾನ ವಾಗುವಂತೆ ಚಿತ್ರವನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿಕೊಂಡ ಹಿನ್ನಲೆಯಲ್ಲಿ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಜಮಾಯಿಸಿದ ಗಲಭೆ ಪ್ರಕರಣದಲ್ಲಿ 40 ಆರೋಪಿಗಳಿಗೆ ಜಾಮೀನು ನಿರಾಕರಿಸಿ ಹೊರಡಿಸಿದ ಆದೇಶದಲ್ಲಿ ನ್ಯಾ.ಬಿ.ವೀರಪ್ಪ ನೇತ್ರತ್ವದ ವಿಭಾಗಿಯ ಪೀಠ ಈ ಆದೇಶ ನೀಡಿದೆ. ರಾಜ್ಯದಲ್ಲಿ ಸದ್ಯ ಬೆಂಗಳೂರಿನಲ್ಲಿ ಎನ್ಐಎ ವಿಶೇಷ ನ್ಯಾಯಾಲಯ ಇದೆ. ಬೆಳಗಾವಿ, ಮೈಸೂರು, ಕಲಬುರ್ಗಿಯಲ್ಲಿ ಕೋರ್ಟ್ ಸ್ಥಾಪಿಸಲು ಇದು ಸಕಾಲ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆಯಡಿ ಇಡೀ ರಾಜ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ ಒಂದೇ ವಿಶೇಷ ಕೋರ್ಟ್ ಇದೆ. ಎಂಟರಿಂದ ಒಂಬತ್ತು ವರ್ಷ ಹಳೆಯದಾದ ಪ್ರಕರಣಗಳು ಬಾಕಿ ಉಳಿದಿವೆ. ಸದ್ಯ ನ್ಯಾಯಾಲಯಗಳಲ್ಲಿ ಮಾತ್ರ ಜನರಿಗೆ ನಂಬಿಕೆ ಇದೆ. ಎಲ್ಲಾ ಕಡೆಗಳಲ್ಲಿ ನ್ಯಾಯ ಸಿಗದಿದ್ದರೆ ಜನ ಅಂತಿಮವಾಗಿ ನ್ಯಾಯಾಲಯದ ಕದ ತಟ್ಟುತ್ತಾರೆ. ಧರ್ಮ, ಜಾತಿ, ಲಿಂಗ ಅಥವಾ ಜನ್ಮ ಸ್ಥಳ ಲೆಕ್ಕಿಸದೆ ಪ್ರತಿಯೊಬ್ಬರು ಗೌರವಿಸುವ ಸ್ಥಳ ಎಂದರೆ ಅದು ನ್ಯಾಯಾಲಯ. ಆದ್ದರಿಂದ ವಿಶೇಷ ಕೋರ್ಟ್ ಗಳ ರಚನೆ ಸೂಕ್ತ ಎಂದು ನ್ಯಾಯ ಪೀಠ ಅಭಿಪ್ರಾಯ ಪಟ್ಟಿದೆ.
ಹೊಸದಾಗಿ ಪ್ರಸ್ತಾಪಿಸಿರುವ ವಿಶೇಷ ಕೋರ್ಟ್ ಗಳಿಗೆ ಪ್ರಕರಣಗಳು ಕಡಿಮೆ ಇದ್ದರೆ ಇತರ ಪ್ರಕರಣಗಳನ್ನು ಸಹ ನಿಯೋಜಿಸಬಹುದು. ಬೆಂಗಳೂರಿನ ವಿಶೇಷ ಕೋರ್ಟಿಗೆ ಎನ್ಐಎ ಜೊತೆಗೆ ಇತರ ಪ್ರಕರಣಗಳ ವಿಚಾರಣೆ ನಡೆಸಲು ನಿಯೋಜಿಸಲಾಗಿದೆ. ಆದ್ದರಿಂದ ಎನ್ ಐ ಎ ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತಿದೆ ಎಂದು ನ್ಯಾಯಪೀಠ ತಿಳಿಸಿದೆ.