ಬೆಂಗಳೂರು :
ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಬುಧವಾರ ಅವರ ಮಾಧ್ಯಮ ಪ್ರತಿಕ್ರಿಯೆ ಇದು.
‘ಕಾಂಗ್ರೆಸ್ ಪಕ್ಷ ರಘುನಾಥ ನಾಯ್ಡು ಅವರಿಗೆ ಟಿಕೆಟ್ ನೀಡಿದ್ದು, ಅವರಿಗೆ ಅನೇಕ ಬಿಜೆಪಿ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ. ಪದ್ಮನಾಭನಗರದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದಾರೆ. ನಾನು ಕೂಡ ಅವರ ಪರವಾಗಿ ಪ್ರಚಾರ ಮಾಡುತ್ತೇನೆ. ಬಿಜೆಪಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗುತ್ತಿದ್ದಾರೆ’ ಎಂದು ತಿಳಿಸಿದರು.
ಬಿ.ವಿ. ನಾಯ್ಕ್ ಅವರು ನಿರಾಣಿ ಅವರನ್ನು ಭೇಟಿ ಮಾಡಿ ಬಿಜೆಪಿ ಸೇರುವ ಬಗ್ಗೆ ಚರ್ಚೆ ಇದ್ದು, ಅವರ ಸೊಸೆಗೆ ನೀಡಲಾಗಿರುವ ಟಿಕೆಟ್ ಅನ್ನು ಬೇರೆಯವರಿಗೆ ನೀಡಬೇಕು ಎಂಬ ಬೇಡಿಕೆ ಬಗ್ಗೆ ಕೇಳಿದಾಗ, ‘ಅವರ ಸೊಸೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತೆ. ಅವರ ಬದಲಿಗೆ ಬೇರೆಯವರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ನಿನ್ನವರೆಗೂ ಬಂದಿಲ್ಲ. ಅಲ್ಲಿ ನಮ್ಮ ಅಭ್ಯರ್ಥಿ ಬಲಿಷ್ಠವಾಗಿದ್ದಾರೆ’ ಎಂದರು.
ಎಸ್.ಆರ್ ಪಾಟೀಲ್ ಅವರನ್ನು ಬಿಜೆಪಿ ಸೆಳೆಯಲು ಪ್ರಯತ್ನಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಕಳೆದ ಮೂರು ತಿಂಗಳಿಂದ ಅವರು ಪ್ರಯತ್ನ ಮಾಡುತ್ತಲೇ ಇದ್ದಾರೆ. ಎಸ್.ಆರ್ ಪಾಟೀಲ್ ಅವರು ಹಿರಿಯ ನಾಯಕರು. ನಾವು ಅವರ ಜತೆ ಮಾತನಾಡಿದ್ದೇವೆ’ ಎಂದು ತಿಳಿಸಿದರು.
ಮಂಡ್ಯ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ, ‘ನಮ್ಮ ಅಭ್ಯರ್ಥಿ ತೀರ್ಮಾನವಾಗಿದೆ. ನೋಡೋಣ, ಅವರು ಚೆಸ್ ಆಡುತ್ತಿದ್ದು, ನಾವು ಕೂಡ ಆಡುತ್ತಿದ್ದೇವೆ’ ಎಂದು ತಿಳಿಸಿದರು.
ಲಿಂಗಾಯತ ನಾಯಕರು ಯಡಿಯೂರಪ್ಪನವರ ನಿವಾಸದಲ್ಲಿ ಸಭೆ ನಡೆಸುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಬಿಜೆಪಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆ ಮಾಡಿ ಅವರಿಂದ ಅಧಿಕಾರ ಕಸಿದುಕೊಂಡರು. ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಹೀಗಾಗಿ ಲಿಂಗಾಯತ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ. ಬಿಜೆಪಿಯು ಲಿಂಗಾಯತ ಸಮುದಾಯದ ಮಠಾಧೀಶರನ್ನು ದುರುಪಯೋಗ ಮಾಡಿಕೊಳ್ಳಲು ಆಗುವುದಿಲ್ಲ. ಯಡಿಯೂರಪ್ಪ ಅವರ ಕಣ್ಣೀರು ಒರೆಸಲು ಬಿಜೆಪಿಯವರಿಂದ ಸಾಧ್ಯವಾಗಿಲ್ಲ. ಯಡಿಯೂರಪ್ಪ ಅವರ ಆಪ್ತರೆಲ್ಲರೂ ಬಿಜೆಪಿ ತೊರೆದಿದ್ದಾರೆ. ಈಗ ಆ ಬಗ್ಗೆ ಚರ್ಚೆ ಮಾಡುವುದಿಲ್ಲ. ಒಟ್ಟಿನಲ್ಲಿ ಬಸವಣ್ಣನವರ ತತ್ವ ಕಾಂಗ್ರೆಸ್ ತತ್ವ ಒಂದೇ ಆಗಿದೆ’ ಎಂದರು.
ಇನ್ನು ರಾಜ್ಯದ ಕೆಲವೆಡೆ ಐಟಿ ದಾಳಿ ಕುರಿತಾಗಿ ಕೇಳಿದ ಪ್ರಶ್ನೆಗೆ, ‘ಯಾರೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿರುತ್ತಾರೆ ಅಂತಹವರ ಮೇಲೆ ದಾಳಿ ಆಗುತ್ತಿದೆ. ನಿನ್ನೆ ಕೂಡ ಕೆಲವರು ನನ್ನ ಮನೆಗೆ ಬಂದಿದ್ದರು. ಐಟಿ ಅಧಿಕಾರಿಗಳು ನೀನು ಭಾರತ ಜೋಡೋ ಯಾತ್ರೆಗೆ ಕೋಟಿಗಟ್ಟಲೆ ಹಣ ನೀಡಿದ್ದೀಯಾ ಎಂದು ಹೆದರಿಸುತ್ತಿದ್ದಾರೆ. ಅವರು ಎಷ್ಟಾದರೂ ದಾಳಿ ಮಾಡಿ ಬೆದರಿಕೆ ಹಾಕಲಿ, ಕಾಂಗ್ರೆಸ್ ಪಕ್ಷ ರಾಜ್ಯದ ಜನರಿಗೆ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿ ಉತ್ತಮ ಆಡಳಿತ ನೀಡುತ್ತೇವೆ. ರಾಜ್ಯದ ಜನ ಬಿಜೆಪಿ ಆಡಳಿತಕ್ಕೆ ಬೇಸತ್ತಿದ್ದು, ರಾಜ್ಯದಲ್ಲಿ ಬದಲಾವಣೆ ತರಲಿದ್ದಾರೆ. ಮೇ 10ರಂದು ಕೇವಲ ಮತದಾನದ ದಿನ ಮಾತ್ರವಲ್ಲ, ರಾಜ್ಯದಲ್ಲಿ ಬದಲಾವಣೆ ತರುವ ದಿನ. ಭ್ರಷ್ಟಾಚಾರ ಬಡಿದೋಡಿಸುವ ದಿನ. ಎಲ್ಲರ ಮನೆಯಲ್ಲಿ ಜ್ಯೋತಿ ಹತ್ತಿಸುವ, ಎಲ್ಲಾ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನ, ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ದಿನ. ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ 141ರಿಂದ 150 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿದೆ. ಮೊದಲ ಸಂಪುಟದಲ್ಲೇ ನಾವು ನಮ್ಮ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ’ ಎಂದು ತಿಳಿಸಿದರು.