ಬೆಂಗಳೂರು :
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಕಟ್ಟಡ “ಇಂದಿರಾ ಗಾಂಧಿ ಭವನ” ವನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ “ಭಾರತ ಜೋಡೋ ಸಭಾಂಗಣ”ವನ್ನು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಸಂಜೆ ಉದ್ಘಾಟಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಬಿ.ಎನ್. ಚಂದ್ರಪ್ಪ, ಹಿರಿಯ ನಾಯಕ ಕೆ.ಎಚ್ ಮುನಿಯಪ್ಪ, ಮಾಜಿ ಸಚಿವ ಹೆಚ್.ಕೆ ಪಾಟೀಲ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಕಾಂಗ್ರೆಸ್ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು :
ಭಾರತ ಜೋಡೋ ಯಾತ್ರೆ ನಂತರ ರಾಹುಲ್ ಗಾಂಧಿ ಅವರು ಇಂದು ರಾಜ್ಯಕ್ಕೆ ಆಗಮಿಸಿ ಕೋಲಾರದಲ್ಲಿ ಜೈ ಭಾರತ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಮ್ಮ ಪಕ್ಷದ ನೂತನ ಕಟ್ಟಡ ಉದ್ಘಾಟನೆಗೆ ಮಾಡುವಂತೆ ಮನವಿ ಮಾಡಿಕೊಂಡೆ. ಅದಕ್ಕೆ ರಾಹುಲ್ ಗಾಂಧಿ ಅವರು ಒಪ್ಪಿದ್ದಾರೆ. ನಮ್ಮ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಕಾರ್ಯಕ್ರಮದ ಭಾಗವಾಗಿ, ಇಂದಿರಾ ಗಾಂಧಿ ಭವನ ಉದ್ಘಾಟನೆ ಮಾಡಿರುವುದು ಬಹಳ ಸಂತೋಷ ತಂದಿದೆ. ಖರ್ಗೆ ಅವರು ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ನಂತರ ಪಕ್ಷ ಹೊಸ ದಿಕ್ಕಿನತ್ತ ಸಾಗುತ್ತಿದ್ದು, ಬ್ಲಾಕ್ ಅಧ್ಯಕ್ಷರಾಗಿದ್ದ ಅವರು ಇಂದು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಾಕ್ಷಿ.
ಈ ಕಟ್ಟಡಕ್ಕೆ ಯಾವ ಹೆಸರು ಇಡಬೇಕು ಎಂದು ಖರ್ಗೆ ಅವರನ್ನು ಕೇಳಿದಾಗ, ಈ ಭವನಕ್ಕೆ ಇಂದಿರಾ ಗಾಂಧಿ ಭವನ ಎಂದು ಹೆಸರಿಡಿ ಎಂದು ಅವರು ಸಲಹೆ ನೀಡಿದರು. ಕಾಂಗ್ರೆಸ್ ಪಕ್ಷ ಇಂದು ದೇಶದಲ್ಲಿ ಗಟ್ಟಿಯಾಗಿ ಉಳಿಯಬೇಕಾದರೆ ಅದು ಗಾಂಧಿ ಕುಟುಂಬದಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಪಕ್ಷದ ತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಪಕ್ಷ ಎಲ್ಲ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶವನ್ನು ಒಗ್ಗೂಡಿಸಿ ಆ ಸಂಕಷ್ಟದಿಂದ ಪಾರು ಮಾಡಿದೆ. ರಾಹುಲ್ ಗಾಂಧಿ ಅವರು ದೇಶಕ್ಕಾಗಿ ತಮಗೆ ಬಂದ ಎಲ್ಲ ರೀತಿಯ ಅಧಿಕಾರವನ್ನು ತ್ಯಾಗ ಮಾಡಿದ್ದಾರೆ.
ಭಾರತ ಜೋಡೋ ಯಾತ್ರೆ ಸಮಯದಲ್ಲಿ ಪತ್ರಕರ್ತರೊಬ್ಬರು ನೀವು ಇಷ್ಟೋಂದು ಪರಿಶ್ರಮ ಹಾಕುತ್ತಿರುವುದೇಕೆ ಎಂದು ಕೇಳಿದಾಗ. ಅದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ ಅವರು ಈ ದೇಶದ ಜನ ನನ್ನ ಮುತ್ತಾತ, ಅಜ್ಜಿ, ಅಪ್ಪ ಹಾಗೂ ಅಮ್ಮನಿಗೆ ಇಡೀ ನಮ್ಮ ಕುಟುಂಬಕ್ಕೆ ಅಪಾರ ಪ್ರೀತಿ ತೋರಿದ್ದು, ಈ ದೇಶದ ಜನ ಒಗ್ಗಟ್ಟಾಗಿರಬೇಕು ಎಂದು ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದರು. ಇದೇ ಕಾರಣಕ್ಕೆ ಈ ಸಂಭಾಂಗಣವನ್ನು ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯ ನೆನಪಿಗಾಗಿ ಭಾರತ ಜೋಡೋ ಸಭಾಂಗಣ ಎಂದು ನಾಮಕರಣ ಮಾಡಿದ್ದೇವೆ.
ನಾವು ಯಾತ್ರೆ ಸಾಗಿದ ಮಾರ್ಗದಲ್ಲಿ 5 ಎಕರೆ ಜಾಗಗಳನ್ನು ಖರೀದಿ ಮಾಡಲು ನಿರ್ಧರಿಸಿ 3 ಎಕರೆ ಖರೀದಿ ಮಾಡಿದ್ದೇವೆ. ಉಳಿದ 2 ಎಕರೆ ಖರೀದಿ ಹಂತದಲ್ಲಿದೆ. ಈ ಜಾಗದಲ್ಲಿ ಕಾಂಗ್ರೆಸಿಗರಿಗೆ ಭಾರತ ಜೋಡೋ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಬೆಂಬಲದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ.
ಪಕ್ಷದ ನಾಯಕರು ಚುನಾವಣೆ ಕೆಲಸದಲ್ಲಿ ನಿರತರಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ನಾಯಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ. ಕೋಲಾರ ಕಾರ್ಯಕ್ರಮವನ್ನು ಅಡ್ಡಿ ಪಡಿಸಬಾರದು ಎಂದು ಕೇವಲ ಬೆಂಗಳೂರಿನ ಬ್ಲಾಕ್ ಅಧ್ಯಕ್ಷರುಗಳು ಹಾಗೂ ಬೆಂಗಳೂರು ಶಾಸಕರಿಗೆ ಮಾತ್ರ ಆಹ್ವಾನ ನೀಡಿ ಚಿಕ್ಕದಾಗಿ ಕಾರ್ಯಕ್ರಮ ಮಾಡಲಾಗಿದೆ.
ಈ ಸಂದರ್ಭದಲ್ಲಿ ನಾನು ಸಿದ್ದರಾಮಯ್ಯ ಹಾಗೂ ಡಾ.ಜಿ.ಪರಮೇಶ್ವರ್ ಅವರಿಗೆ ನಾನು ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಇವರು ಈ ಕಟ್ಟಡದ ಶಂಕುಸ್ಥಾಪನೆ ಮಾಡಿದ್ದು, ಇದನ್ನು ಪೂರ್ಣಗೊಳಿಸಿ, ಅತ್ಯಾಧುನಿಕ ವ್ಯವಸ್ಥೆ ಕಲ್ಪಿಸುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಅದೃಷ್ಟ. ಈ ಕಟ್ಟಡವನ್ನು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗುವಂತೆ ಬಳಸಿಕೊಳ್ಳಲಾಗುವುದು.
ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂಬ ಭರವಸೆಯನ್ನು ರಾಹುಲ್ ಗಾಂಧಿ ಅವರಿಗೆ ಈ ಸಂದರ್ಭದಲ್ಲಿ ನೀಡುತ್ತೇನೆ.