ಬೆಳಗಾವಿ :
ಹದಿಮೂರನೆಯ ಅಖಿಲ ಕರ್ನಾಟಕ ಗಮಕಕಲಾ ಸಮ್ಮೇಳನ ಏ.16 ಮತ್ತು 17 ರಂದು ಬೆಳಗಾವಿಯ ಅನಗೋಳದಲ್ಲಿರುವ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆ ಸಭಾಗೃಹದಲ್ಲಿ ನಡೆಯಲಿದ್ದು ಖ್ಯಾತ ಗಮಕ ಕಲಾ ವಿದ್ವಾಂಸರಾದ ಕರ್ನಾಟಕ ಕಲಾಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್, ಕಾಸರಗೋಡು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.
ಗಮಕ ಕಲಾ ಪರಿಷತ್ತು,ಬೆಂಗಳೂರು, ಬೆಳಗಾವಿ ಜಿಲ್ಲಾ ಘಟಕ , ಮತ್ತು ಶ್ರೀ ವಾಗ್ದೇವಿ ಗಮಕ ಕಲಾ ಸಂಘ ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಈ ಸಮ್ಮೇಳನ ಏ.16 ರವಿವಾರ ಬೆಳಿಗ್ಗೆ 9.30 ಕ್ಕೆ ಸಮ್ಮೇಳನಾಧ್ಯಕ್ಷರ ಮತ್ತು ಕನ್ನಡ ಕಾವ್ಯಗ್ರಂಥಗಳ ಮೆರವಣಿಗೆಯೊಂದಿಗೆ ಆರಂಭವಾಗಲಿದ್ದು, 10.30 ಕ್ಕೆ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಅಧ್ಯಕ್ಷ ಪರಮೇಶ್ವರ ಹೆಗಡೆ ಸಮ್ಮೇಳನ ಉದ್ಘಾಟಿಸಲಿದ್ದಾರೆ. ನಿವೃತ್ತ ಜಿಲ್ಲಾ ನ್ಯಾಯಾಧೀಶರೂ, ಹಿರಿಯ ಕವಿ ಜಿನದತ್ತ ದೇಸಾಯಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿ ದಕ್ಷಿಣಾಮೂರ್ತಿಯವರಿಂದ ಪ್ರಾಸ್ತಾವಿಕ ನುಡಿಯನ್ನಾಡಲಿದ್ದಾರೆ. ಗ.ಕ. ಪ. ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಪತ್ರಕರ್ತ, ಸಾಹಿತಿ ಎಲ್. ಎಸ್. ಶಾಸ್ತ್ರಿ ಮುಖ್ಯ ಅತಿಥಿಗಳಾಗಿರುವರು. ಪಿ. ಬಿ. ಸ್ವಾಮಿ, ಆರ್. ಬಿ. ಕಟ್ಟಿ, ಸುಜಾತಾ ದಫ್ತರದಾರ ಮತ್ತು ಮಹಾಂತೇಶ ತಾಂವಶಿ ಗೋಕಾಕ ಉಪಸ್ಥಿತರಿರುವರು. ಭಾರತಿ ಭಟ್ಟ, ಟಿ. ಆರ್. ಗಣಪತಿ ಕಾರ್ಯಕ್ರಮ ನಿರ್ವಹಿಸಲಿದ್ದು ರಾಜೇಶ್ವರಿ ಹಿರೇಮಠ ನಿರೂಪಣೆಗೈಯಲಿದ್ದಾರೆ.
ಮ. 12 ರಿಂದ, ಯುವ ಕಲಾವಿದರ ದೇಶಭಕ್ತಿ ಗೀತೆ ಹಾಗೂ ಗಂಗಮ್ಮ ಕೇಶವಮೂರ್ತಿ ಮತ್ತು ಶಾಂತಾ ಗೋಪಾಲ ಇವರಿಂದ ಡಿವಿಜಿಯವರ ಶ್ರೀ ರಾಮ ಪರೀಕ್ಷಣಂ ಕಾವ್ಯದ ವಾಚನ ಮತ್ತು ವ್ಯಾಖ್ಯಾನ ನಡೆಯಲಿದೆ. 2.30 ರಿಂದ ವಾಗ್ದೇವಿ ಕಲಾಸಂಘದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಂಜುಳಾ ಭಟ್ಟ ಮಂಚಿ, ಅನಂತಕೃಷ್ಣ ಅವರಿಂದ ಕಾವ್ಯ ವಾಚನ ವ್ಯಾಖ್ಯಾನಗಳು, ಕನಕದಾಸರ ರಾಮಧಾನ್ಯ ಚರಿತ್ರೆ ಗಮಕ ರೂಪಕ, ದಕ್ಷಿಣಾಮೂರ್ತಿಯವರಿಂದ ಪರಿಚಯ ಉಪನ್ಯಾಸ , ಜಾನಪದ ಹಾಡು, ಭರತನಾಟ್ಯ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.
ಏ.17 ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ವೀಣಾವಾದನ, ಪುರಂದರದಾಸ ನೃತ್ಯರೂಪಕ, ದೇವರನಾಮ, ಕೋಲಾಟ ಅಲ್ಲದೆ ಸುಜಾತ ಗೋಪಿನಾಥ್, ಮುಕ್ತಾ ಶಂಕರ್ ಅವರಿಂದ ಕುಮಾರವ್ಯಾಸ ಭಾರತ ವಾಚನ ವ್ಯಾಖ್ಯಾನ, ಪಲ್ಲವಿ ಭಟ್ , ಸಂತೋಷ ಭಾರದ್ವಾಜರಿಂದ ಗೋಕರ್ಣ ಮಹಾತ್ಮೆ ಕಾವ್ಯ ವಾಚನ, ಕಾವ್ಯ ಪರಿಚಯ, ವ್ಯಾಖ್ಯಾನಗಳು ನಡೆಯಲಿವೆ.
ಮ. 3.30 ಕ್ಕೆ ಸಮಾರೋಪ ಸಮಾರಂಭ ಶಾಂತಾ ಗೋಪಾಲ ಅವರ ಅಧ್ಯಕ್ಷತೆಯಲ್ಲಿ ಮತ್ತು ಸರ್ವಾಧ್ಯಕ್ಷರ ಉಪಸ್ಥಿತಿಯಲ್ಲಿ ನಡೆಯಲಿದ್ದು , ಮುಖ್ಯ ಅತಿಥಿಗಳಾಗಿ ಜಿನದತ್ತ ದೇಸಾಯಿ , ದಕ್ಷಿಣಾಮೂರ್ತಿ ಆಗಮಿಸಲಿದ್ದು ಎಲ್. ಎಸ್. ಶಾಸ್ತ್ರಿ, ಡಾ. ಸಿ. ಕೆ. ಜೋರಾಪುರ, ಹೇಮಾ ಸೊನೋಳಿ, ಸುಧಾ ಪಾಟೀಲ, ಜಯಶ್ರೀ ನಿರಾಕಾರಿ, ಆನಂದ ಪುರಾಣಿಕ, ಡಾ. ಕೆ. ಡಿ. ದೇಶಪಾಂಡೆ, ಎಂ. ಎ. ಪಾಟೀಲ, ಸುಜಾತಾ ದಫ್ತರದಾರ ಉಪಸ್ಥಿತರಿರುವರು.