ಬೆಂಗಳೂರು :
ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಅತಂತ್ರ ವಿಧಾನಸಭೆ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಜನ್ ಕಿ ಬಾತ್ ಸುವರ್ಣನ್ಯೂಸ್ ಸಮೀಕ್ಷೆಯಲ್ಲಿ ತಿಳಿದುಬಂದಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 98 ರಿಂದ 109 ಸ್ಥಾನ ಗೆಲ್ಲಬಹುದು ಎಂದಿದ್ದರೆ, ಕಾಂಗ್ರೆಸ್ 89 ರಿಂದ 97 ಸ್ಥಾನಗಳನ್ನು ಗೆಲ್ಲಬಹುದು. ಜೆಡಿಎಸ್ 25-29 ಸ್ಥಾನಗಳನ್ನು ಗೆಲ್ಲಲಿದ್ದರೆ, ಇತರೆ 0 ಯಿಂದ 1 ಸ್ಥಾನ ಗೆಲ್ಲಬಹುದು ಎಂದು ತಿಳಿಸಲಾಗಿದೆ. 2018ರ ಚುನಾವಣೆಯಲ್ಲಿ ಜನ್ ಕಿ ಬಾತ್ ಬಿಜೆಪಿ 102 ರಿಂದ 108 ಸೀಟ್ಗಳನ್ನು ಗೆಲ್ಲಲಿದೆ ಎಂದು ಹೇಳಿದ್ದರೆ, ಕಾಂಗ್ರೆಸ್ 72-74, ಜೆಡಿಎಸ್ 42-44 ಹಾಗೂ ಇತರೆ 2-4 ಸೀಟ್ಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ಪ್ರಕಟಿಸಿತ್ತು. ಅದರಂತೆ ಅಂತಿಮ ಫಲಿತಾಂಶದಲ್ಲಿ ಬಿಜೆಪಿ 104, ಕಾಂಗ್ರೆಸ್ 81, ಜೆಡಿಎಸ್ 37 ಹಾಗೂ ಇತರೆ 2 ಸೀಟ್ಗಳನ್ನು ಜಯಿಸಿತ್ತು. ಸಮೀಕ್ಷೆಯ ವರದಿಯ ಪ್ರಕಾರ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು ಅತಂತ್ರ ವಿಧಾನಸಭೆ ನಿಶ್ಚಿತ ಎನ್ನುವ ತೀರ್ಪನ್ನು ಮತದಾರರು ನೀಡಿದ್ದಾರೆ. ಸ್ಥಾನಗಳನ್ನು ಗಳಿಸುವ ಲೆಕ್ಕಾಚಾರದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷ ಎನಿಸಿಕೊಳ್ಳಬಹುದಾದರೂ, ವೋಟ್ ಶೇರಿಂಗ್ನಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸೋದು ಖಚಿತ ಎಂದು ಜನ್ ಕಿ ಬಾತ್ ಸುವರ್ಣನ್ಯೂಸ್ ಸಮೀಕ್ಷೆ ಹೇಳಿದೆ.
ಮಾರ್ಚ್ 15 ರಿಂದ ಏಪ್ರಿಲ್ 11ರವರೆಗೆ ಎಲ್ಲಾ 224 ಕ್ಷೇತ್ರಗಳಿಂದ 20 ಸಾವಿರಕ್ಕೂ ಅಧಿಕ ಮತದಾರರಿಂದ ಅಭಿಪ್ರಾಯ ಸಂಗ್ರಹಣೆ ಮಾಡುವ ಮೂಲಕ ಈ ಸಮೀಕ್ಷೆ ಸಿದ್ಧ ಮಾಡಲಾಗಿದೆ. ಪ್ರಾದೇಶಿಕ ವಾರು ಲೆಕ್ಕಾಚಾರಕ್ಕೆ ಬರುವುದಾದರೆ, ಹಳೆ ಮೈಸೂರು ಭಾಗದ 57 ಕ್ಷೇತ್ರಗಳಲ್ಲಿ ಕಾಂಗ್ರೆಸ್ 23 ಸ್ಥಾನ ಗೆಲ್ಲುವ ಮೂಲಕ ಪ್ರಾಬಲ್ಯ ಸಾಧಿಸಲಿದ್ದರೆ, ಜೆಡಿಎಸ್ 22 ಸ್ಥಾನದೊಂದಿಗೆ 2ನೇ ಸ್ಥಾನ ಹಾಗೂ ಬಿಜೆಪಿ 12 ಸ್ಥಾನದೊಂದಿಗೆ ಮೂರನೇ ಸ್ಥಾನ ಗಳಿಸಲಿದೆ.
ಕಲ್ಯಾಣ ಕರ್ನಾಟಕದ 40 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಲಿದೆ. ಇಲ್ಲಿ 23 ಸ್ಥಾನಗಳನ್ನು ಪಕ್ಷ ಗೆಲ್ಲ ಬಹುದು ಎಂದು ಸಮೀಕ್ಷೆ ತಿಳಿಸಿದೆ. ಬಿಜೆಪಿಗೆ 16 ಹಾಗೂ ಜೆಡಿಎಸ್ ಒಂದು ಸ್ಥಾನ ಗೆಲ್ಲಬಹುದು ಎಂದು ತೀರ್ಪು ಬಂದಿದೆ. ಬೆಂಗಳೂರು ಮಹಾನಗರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮೇಲುಗೈಗಾಗಿ ಫೈಟ್ ನಡೆಯಲಿದೆ. 32 ಕ್ಷೇತ್ರಗಳ ಪೈಕಿ ಬಿಜೆಪಿ 15 ಹಾಗೂ ಕಾಂಗ್ರೆಸ್ 14 ಸ್ಥಾನಗಳಲ್ಲಿ ಗೆಲ್ಲಬಹುದು ಎನ್ನಲಾಗಿದ್ದು, ಜೆಡಿಎಸ್ ಮೂರು ಸ್ಥಾನ ವಶಪಡಿಸಿಕೊಳ್ಳಬಹುದು.ಇನ್ನು ಮಧ್ಯ ಕರ್ನಾಟಕದ 26 ಕ್ಷೇತ್ರಗಳಲ್ಲಿ ಬಿಜೆಪಿ 13 ಸ್ಥಾನ, ಕಾಂಗ್ರೆಸ್ 12 ಹಾಗೂ ಜೆಡಿಎಸ್ 1 ಸ್ಥಾನ ಗೆಲ್ಲಬಹುದು ಎಂದಿದೆ.
ಕಿತ್ತೂರು, ಕರಾವಳಿ ಕರ್ನಾಟಕವೇ ಬಿಜೆಪಿಗೆ ಬಲ: ಕಿತ್ತೂರು ಕರ್ನಾಟಕ ಬಿಜೆಪಿ ಪಾಲಿಗೆ ಅತಿದೊಡ್ಡ ಬಲ ಎನ್ನಲಾಗಿದೆ. ಇಲ್ಲಿ 50 ಕ್ಷೇತ್ರಗಳಲ್ಲಿ ಬಿಜೆಪಿ 31, ಕಾಂಗ್ರೆಸ್ 19 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದೆ. ಇನ್ನು ಕರಾವಳಿ ಕರ್ನಾಟಕದ 19 ಕ್ಷೇತ್ರಗಳಲ್ಲಿ ಬಿಜೆಪಿ 16ರಲ್ಲಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ 3 ಸ್ಥಾನಗಳಲ್ಲಿ ವಿಜಯ ಸಾಧಿಸಲಿದೆ ಎನ್ನಲಾಗಿದೆ.
ಜನ್ ಕಿ ಬಾತ್ ಸುವರ್ಣ ನ್ಯೂಸ್ ಸಮೀಕ್ಷೆ
ವಿಧಾನಸಭಾ ಕ್ಷೇತ್ರ: 224
ಬಿಜೆಪಿ: 98-109
ಕಾಂಗ್ರೆಸ್: 89-97
ಜೆಡಿಎಸ್: 25-29
ಇತರೆ: 0-1
ವಿಧಾನಸಭೆ ಪರಿಸ್ಥಿತಿ: ಅತಂತ್ರ