ಜನ ಜೀವಾಳ ಜಾಲ: ಬೆಳಗಾವಿ : ಶುಕ್ರವಾರದಂದು ಬೆಂಗಳೂರಿಗೆ ತೆರಳಿ ಬಿಜೆಪಿ ಹಾಗೂ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಘೋಷಣೆ ಮಾಡಿದ್ದಾರೆ.ಬಿಜೆಪಿ ನಾಯಕರ ಜೊತೆಗೆ ನನ್ನ ರಾಜಿ ಸಂಧಾನ ಎನ್ನುವುದು ಮುಗಿದು ಹೋದ ಅಧ್ಯಾಯವಾಗಿದೆ.
ನನ್ನ ಬೆಂಬಲಿಗರ ಸಭೆ ನಡೆಯುತ್ತಿದೆ. ಆ ಸಭೆಯ ಅಭಿಪ್ರಾಯ ಹಾಗೂ ಬೆಂಗಳೂರಿನಲ್ಲಿ ನಾಳೆ ನನ್ನ ಮಿತ್ರರನ್ನು ಭೇಟಿಯಾಗಿ ಅವರ ಸಲಹೆಯನ್ನು ಪಡೆಯುವೆ. ಒಟ್ಟಾರೆ ಇವುಗಳನ್ನು ಕ್ರೋಢೀಕರಿಸುವೆ. ಜನ ಕಾಂಗ್ರೆಸ್ ಬಸ್ ಹತ್ತಬೇಕು ಎಂದು ಹೇಳುತ್ತಾರೋ ಆ ಬಸ್ ಹತ್ತುವೇ. ಇಲ್ಲವೇ ಪಕ್ಷೇತರರಾಗಿ ಅ ಬಸ್ ಹತ್ತಬೇಕು ಎಂದು ಹೇಳುತ್ತಾರೋ ಅದೇ ರೀತಿ ಮಾಡುವೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮುಂತಾದವರಿಗೆ ನನ್ನ ಸ್ಪರ್ಧೆ ಬಗ್ಗೆ ಈ ಹಿಂದೆಯೇ ತಿಳಿಸಿದ್ದೆ. ನಾನು ಯಾವುದೇ ಕಾರಣಕ್ಕೂ ಈ ಸಲದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸಾಕಷ್ಟು ಮುಂಚಿತವಾಗಿ ಎಲ್ಲರಿಗೂ ತಿಳಿಸಿದ್ದೆ ಎಂದು ಅವರು ಹೇಳಿದರು.
ಯಾವುದೇ ಕಾರಣ ಕೊಡದೇ ನನ್ನನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ತೆಗೆದರು.
ನಾನೇನು ರೇಪ್ ಮಾಡಿದ್ದೀನಾ, ಯಾರದಾದರೂ ಸೆರಗು ಎಳೆದಿದ್ದೀನಾ, ಭ್ರಷ್ಟಾಚಾರ ಮಾಡಿದ್ದೀನಾ? ಹೇಳದೇ ಕೆಳದೇ ಆ ಸ್ಥಾನ ಕಸಿದುಕೊಂಡರು ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯಲ್ಲಿ ನನಗೆ ಮಾನಸಿಕವಾಗಿ ಹಿಂಸೆ, ಅವಮಾನ ಮಾಡುತಿದ್ದರು. ಎಲ್ಲ ಸಹಿಸಿಕೊಂಡು ಮುಂದುವರಿದಿದ್ದೆ. ಉಪ ಮುಖ್ಯಮಂತ್ರಿ ಸ್ಥಾನ ಕಿತ್ತುಕೊಂಡಾಗಲೂ ನಾನು ಯಾರಿಗೂ ಏನೂ ಅಂದಿಲ್ಲ. ರಾಜೀನಾಮೆ ಕೊಡು ಎಂದರೆ ಸಂತೋಷದಿಂದ ಕೊಡುತ್ತಿದ್ದೆ. ಅವಮಾನ ಮಾಡುವ ಉದ್ದೇಶದಿಂದ ಏಕಾಏಕಿ ತೆಗೆದರು. ಆದರೆ, ಈಗ ಸಂಯಮ ಕಟ್ಟೆಯೊಡೆದಿದೆ ಎಂದರು.
ಗುರುವಾರ ಬೆಳಿಗ್ಗೆ ಬಿ.ಎಲ್. ಸಂತೋಷ ಅವರು ನಾಲ್ಕಾರು ಬಾರಿ ಮೊಬೈಲ್ ಕರೆ ಮಾಡಿದರೂ ನಾನು ಸ್ವೀಕರಿಸಲಿಲ್ಲ. ಅವರು ನನ್ನ ಗುರು. ನಾನೂ ಆವೇಶದಲ್ಲಿ ಏನೋ ಮಾತನಾಡಿ ಅವರಿಗೆ ಬೇಸರ ತರುವುದು ಬೇಡ ಎಂಬ ಕಾರಣಕ್ಕೆ ಮಾತನಾಡಿಲ್ಲ. ಸಂಸದ ಅಣ್ಣಾಸಾಹೇಬ ಜೊಲ್ಲೆ ಮಧ್ಯಾಹ್ನ ಭೇಟಿ ಮಾಡಿ ಹೋದರು. ಅವರು ಸೌಜನ್ಯದ ಭೇಟಿಗೆ ಬಂದಿದ್ದರು. ರಾಜಕೀಯ ಏನೂ ಮಾತನಾಡಿಲ್ಲ ಎಂದು ಉತ್ತರಿಸಿದರು.
ಟಿಕೆಟ್ ಸಲುವಾಗಿ ಮಾತ್ರ ನಾನು ಪಕ್ಷ ಬಿಡುತ್ತಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಮಾಡಿದ್ದರಿಂದ ಬಿಡುತ್ತಿದ್ದೇನೆ. ಶುಕ್ರವಾರ ಬೆಂಗಳೂರಿಗೆ ಹೋಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದರು.
ನನಗೆ ಟಿಕೆಟ್ ತಪ್ಪಿದ್ದು ಅಥಣಿ ಜನರಿಗೆ ಅನ್ಯಾಯ ಮಾಡಿದಂತಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಗಳಿಂದ ಅಹ್ವಾನ ಬರುತ್ತಿದೆ. ಲಕ್ಷ್ಮಣ ಸವದಿ ಅವರು ಬರಲಿ ಅಂತ ನಮ್ಮ ಹಳೆಯ ಸ್ನೇಹಿತರು ಕೂಡ ಕರೆಯುತ್ತಿದ್ದಾರೆ. ಬಿಜೆಪಿಯಲ್ಲಿ ನಾನು ಎಂದಿಗೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಚುನಾವಣೆ ಹೊರತುಪಡಿಸಿ ಪಕ್ಷಾತೀತವಾಗಿ ಉತ್ತಮ ಸಂಪರ್ಕ ಇದೆ. ಬಹಳಷ್ಟು ಜನ ಬೇರೆ ಬೇರೆ ಕಡೆಯಿಂದ ನನ್ನನ್ನು ಸಂಪರ್ಕ ಮಾಡಿದ್ದಾರೆ. ಇಂದು ಎಲ್ಲರ ಅಭಿಪ್ರಾಯ ಸಂಗ್ರಹಿಸುವೆ. ನಾಳೆ ಸಭಾಪತಿ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸುವೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದಲೂ ಪಕ್ಷ ಸೇರ್ಪಡೆಗೆ ಒತ್ತಾಯ ಕೇಳಿ ಬರುತ್ತಿದೆ. ಕಾರ್ಯಕರ್ತರ ಜೊತೆಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.