ಬೆಳಗಾವಿ:
ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಹಣ ದುರುಪಯೋಗ ಆಗದಂತೆ ಸರಿಯಾದ ಆಡಿಟ್ ನಡೆಸಿ ವರದಿ ಸಲ್ಲಿಸುವ ಸಲ್ಲಿಸುವ ನಿಟ್ಟಿನಲ್ಲಿ ಎಲ್ಲ ಸನ್ನದು ಲೆಕ್ಕ ಪರಿಶೋಧಕರು ಕಾರ್ಯ ನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಿರ್ದೇಶಕ ಸರ್ದಾರ್ ಸರ್ಫರಾಜ್ ಖಾನ್ ಅವರು ತಿಳಿಸಿದರು.
ಸುವರ್ಣ ವಿಧಾನ ಸೌಧದ ಸೆಂಟ್ರಲ್ ಹಾಲ್ ನಲ್ಲಿ ಶುಕ್ರವಾರ (ಮಾ.10) ನಡೆದ ಬೆಳಗಾವಿ ಮತ್ತು ಕಲಬುರ್ಗಿ ವಿಭಾಗದ ಸನ್ನದು ಲೆಕ್ಕಪರಿಶೋಧಕರ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಸಹಕಾರ ಸಂಸ್ಥೆಗಳು, ಸೌಹಾರ್ದ ಸಹಕಾರಿಗಳಲ್ಲಿ
ದೋಷಪೂರಿತ ಲೆಕ್ಕಪರಿಶೋಧನೆ ಆಗಿರುವ ಕುರಿತು ಸಾರ್ವಜನಿಕರಿಂದ ಅನೇಕ ದೂರುಗಳ ಹೆಚ್ಚಾಗುತ್ತಿವೆ. ಸನ್ನದು ಲೆಕ್ಕಪರಿಶೋಧಕರುಗಳು ಇಂತಹ ಸಮಸ್ಯೆಗಳನ್ನು ತಪ್ಪಿಸಿ, ಸಹಕಾರ ಸಂಘಗಳ ಲೆಕ್ಕ ಪರಿಶೋಧನೆಯನ್ನು ಸಹಕಾರ ಸಂಘಗಳ ಕಾಯ್ದೆ, ನಿಯಮಗಳ ಅನ್ವಯ ಗುಣಾತ್ಮಕವಾಗಿ ನಿರ್ವಹಿಸಲು ಲೆಕ್ಕಪರಿಶೋಧಕರಿಗೆ ಈ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ದೋಷಪೂರಿತ ವರದಿಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಬದಲಾಗುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಮಾಜದ ನಿರೀಕ್ಷೆಗೂ ಮೀರಿ, ನಾವು ಕೆಲಸ ಮಾಡಬೇಕು.
ಅವ್ಯವಹಾರ ನಡೆದಿರುವುದು ಕಂಡು ಬಂದರೆ ಸ್ಪಷ್ಟ ಮಾಹಿತಿ ಇರುವಂತೆ ಆಡಿಟ್ ವರದಿಯಲ್ಲಿ ಸಲ್ಲಿಸಬೇಕು ಎಂದು ಕಾರ್ಯಗಾರದಲ್ಲಿ ಸರ್ದಾರ್ ಸರ್ಫರಾಜ್ ಖಾನ್ ಮಾಹಿತಿ ನೀಡಿದರು.
ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಅಧಿಕಾರಿಗಳು, ಬೆಳಗಾವಿ ಮತ್ತು ಕಲಬುರ್ಗಿ ವಿಭಾಗದ ಸನ್ನದು ಲೆಕ್ಕಪರಿಶೋಧಕರಿಗೆ ಸಹಕಾರ ಸಂಘಗಳ ಲೆಕ್ಕಪರಿಶೋಧನೆಯಲ್ಲಿ ಪ್ರಾಯೋಗಿಕ ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತು ವಿವರಿಸಿದರು.
ಈ ವೇಳೆ ಲೆಕ್ಕಪರಿಶೋಧನೆ ಸಂದರ್ಭದಲ್ಲಿ ಎದುರಾಗುವುದು ಸಮಸ್ಯೆಗಳ ಕುರಿತು ಪರಸ್ಪರ ಚರ್ಚಿಸಿ, ಸಂಪನ್ಮೂಲ ವ್ಯಕ್ತಿಗಳಿಂದ ಸಲಹೆಗಳ ಪಡೆದುಕೊಳ್ಳಲಾಯಿತು.
ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರ ಕಛೇರಿಯ ಜಂಟಿ ನಿರ್ದೇಶಕ ಎಂ. ರಾಮಯ್ಯ, ಎನ್ ರಾಜು, ಎಸ್.ಐ.ಆರ್.ಸಿ ಅಧ್ಯಕ್ಷರಾದ ಸಿರಿಗೆರಿ ಪೊನ್ನರಾಜು, ಬೆಳಗಾವಿಯ ಸಿ.ಎ. ಅಸೋಶಿಯೇಷನ್
ಅಧ್ಯಕ್ಷ ಪ್ರವೀಣ ಘಾಳಿ, ಸಿ.ಎ. ಬ್ರಾಂಚ್ ಚೇರಮನ್ ಮಡಿವಾಳಪ್ಪ ತಿಗಡಿ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.