ಭಾರತೀಯ ನಾಗರಿಕ ಸಮಾಜದಲ್ಲಿ ಮಹಿಳೆಗೆ ದೇವತೆಯ ಗೌರವಾದರ ಅಪಾರವಾಗಿ ಕೊಡಲಾಗುತ್ತದೆ. ಮಹಿಳೆ ತಾಯಿ-ಅಕ್ಕ- ತಂಗಿ-ಪತ್ನಿಯಾಗಿ ಕೌಟುಂಬಿಕ ವ್ಯವಸ್ಥೆಗೆ ಬೆನ್ನೆಲುಬಾಗಿದ್ದಾಳೆ. ಮಹಿಳೆ ಇಂದು ಅಬಲೆಯಲ್ಲ ಅನಕ್ಷರಸ್ಥೆಯಲ್ಲ, ನಾಚಿ ನೀರಾಗಿ ನಾಲ್ಕುಗೋಡೆ ಮಧ್ಯೆ ಕೂಡ್ರುವವಳಲ್ಲ.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳ ಅಡಿ ಸಶಕ್ತಳಾಗಿದ್ದಾಳೆ. ಮಹಿಳೆ ಧೈರ್ಯ- ಸ್ಥೈರ್ಯ, ತಾಳ್ಮೆ ಮತ್ತು ಪ್ರೀತಿ ವಾತ್ಸಲ್ಯದ ಪ್ರತೀಕವಾಗಿದ್ದಾಳೆ. ಆಧುನಿಕ ಜಗತ್ತಿನಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಆಕೆಯನ್ನು ಸರ್ವಸ್ವತಂತ್ರ-ಸಶಕ್ತ ರೂಪದಲ್ಲಿ ಕಾಣಬಹುದಾಗಿದೆ. ರಾಷ್ಟ್ರಪತಿಯಾಗಿ, ಪ್ರಧಾನಿಯಾಗಿ, ಸಚಿವೆ, ರಾಜಕಾರಣಿ, ವಿಜ್ಞಾನಿ, ಐಎಎಸ್-ಐಪಿಎಸ್ ಅಧಿಕಾರಿಣಿಯಾಗಿ, ಉದ್ಯಮಿಯಾಗಿ, ಕಲಾವಿದಳಾಗಿ, ರೈತ ಮತ್ತು ಶ್ರಮಿಕಕ್ಷೇತ್ರ ಸೇರಿದಂತೆ ಯಾವ ಕ್ಷೇತ್ರದಲ್ಲಿ ಇಂದು ಮಹಿಳೆಯರು ಇಲ್ಲ ಹೇಳಿ. ಸನಾತನ ಸಂಸ್ಕೃತಿ, ಸಂವಿಧಾನದ ಆಶಯಗಳು, ಹಾಗೂ ದೇಶದ ಸಾಂಸ್ಕ್ರತಿಕ ಸಂಸ್ಜಾರಯುತ ಜೀವನ ಪದ್ಧತಿಗಳ ಅಡಿ ಆದ್ಯತೆ- ರಕ್ಷಣೆ ಮತ್ತು ಗೌರವ ಮಹಿಳೆ ಪಡೆದುಕೊಂಡಿದ್ದಾಳೆ.
ಏನೂ ಇಲ್ಲದ ಪರಿಸ್ಥಿತಿಯಿಂದ ಎಲ್ಲವೂ ಇರುವ ಹಾಗೆ ಅಗಾಧ ಶಕ್ತಿ ಸ್ವರೂಪಿಣಿಯಾಗಿ ಸಮಾಜ ಮುನ್ನಡೆಸುವ ಸಜ್ಜನ ರಾಜಕಾರಣಿಯಾಗಿ ಬೆಳಗಾವಿ ಜಿಲ್ಲೆ- ರಾಜ್ಯ- ದೇಶದ ಉದ್ದಗಲಕ್ಕೂ ಹೆಸರುವಾಸಿಯಾದ ನಮ್ಮ ‘ಶ್ರೀ ಲಕ್ಷ್ಮೀ’ ನಮ್ಮೆಲ್ಲರಿಗೆ ಹೆಮ್ಮೆ.
ಮಾರ್ಚ್ 8ರ ಮಹಿಳಾ ದಿನಾಚರಣೆ ಅಂಗವಾಗಿ ಬೆಳಗಾವಿಯ ಅಂತಹ ರಾಜಕೀಯ ಹಾಗೂ ಔದ್ಯಮಿಕ ರಂಗದ ಸಾಧಕಿಯ ಸಾಧನೆ ಅನಾವರಣ ಹೆಮ್ಮೆ ತರಿಸುತ್ತದೆ. ಪಶ್ಚಿಮಘಟ್ಟ ತಪ್ಪಲಿನ ಖಾನಾಪುರ ತಾಲೂಕಿನ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಹೆಣ್ಣುಮಗಳು ಈಗ ನವದೆಹಲಿವರೆಗೂ ಹೆಸರುವಾಸಿ.
ತನ್ನ ಹಳ್ಳಿ- ಖಾನಾಪುರ ಪಟ್ಟಣ ಮತ್ತು ಬೆಳಗಾವಿ ಜಿಲ್ಲೆಯ ಹೆಸರು ಬರಲು ಕಾರಣ ಆ ಮಹಿಳಾ ಸಾಧಕಿ ಲಕ್ಷ್ಮೀ ಹೆಬ್ಬಾಳಕರ. ಸಣ್ಣ ಪ್ರಮಾಣದ ರಾಜಕೀಯ ಪ್ರವೇಶದ ಮೂಲಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಜಿಲ್ಲಾಧ್ಯಕ್ಷಳಾಗಿ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ, ಸಂಸತ್ ಚುನಾವಣೆಯ ಸಶಕ್ತ ಅಭ್ಯರ್ಥಿಯಾಗಿ, ತ್ರಿವಿಕ್ರಮ ಹೋರಾಟದ ನಂತರ ಇಂದು ಶಾಸಕಿಯಾಗಿ ಇಡೀ ರಾಜ್ಯದ ಗಮನದಲ್ಲಿರುವ ಸೆಲೆಬ್ರಿಟಿ ರಾಜಕಾರಣಿ ಲಕ್ಷ್ಮೀ ರವೀಂದ್ರ ಹೆಬ್ಬಾಳಕರ.
ಪಕ್ಷದಲ್ಲಿನ ಒತ್ತಡ ಗುದ್ದಾಟಗಳನ್ನು ಮೀರಿ, ಸಾಮಾಜಿಕ ಹೋರಾಟಗಳನ್ನು ನಂಬಿ ಯಶಸ್ವಿ ರಾಜಕಾರಣಿಯಾಗಿ, ಆರ್ಥಿಕ ಸಶಕ್ತಳಾಗಿ ಬೆಳೆಯಲು ಧೃಡ ಛಲ ಮತ್ತು ಮನಸ್ಸು ಕಾರಣ.
‘ಮನಸ್ಸಿದ್ದಲ್ಲಿ ಮಾರ್ಗ’ ಎಂಬುವುದನ್ನು ಹಿಂದೆ ನೋಡದೇ ಮುನ್ನುಗ್ಗುವ ತಮ್ಮ ಸಕ್ಸಸ್ ಸ್ಟೋರಿಗಳ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಸ್ನಾತಕೋತ್ತರ ಪದವೀಧರೆಯಾಗಿ, ಸೌಮ್ಯ ಸರಳ ಮಾತುಗಾರ್ತಿಯಾಗಿ, ಸಜ್ಜನ ರಾಜಕಾರಣಿಯಾಗಿ ಬೆಳೆಯುವಲ್ಲಿ ಅವರಿಗೆ ರಕ್ತಗತ ಗುಣಗಳೇ ಕಾರಣ. ತಾನು ಪ್ರತಿನಿಧಿಸುವ ಇಡೀ ಸಮಾಜವನ್ನು ತನ್ನ ಸ್ವಂತ ಕುಟುಂಬದಂತೆ ಪ್ರೀತಿಸಿ, ಜನತೆಯ ಮನಸ್ಸಲ್ಲಿ ಬೇರೂರುವುದು ಸುಲಭವಲ್ಲ. ಫಿನಿಕ್ಸ್ ಪಕ್ಷಿಯಂತೆ ರಾಜಕೀಯ ಜಟಿಲತೆಗಳನ್ನು, ವಿರೋಧಿಗಳನ್ನು ಮೆಟ್ಟಿ ಅಧಿಕಾರದ ಮೆಟ್ಟು ಮೆಟ್ಟಿದ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಮಹಿಳೆಯರಿಗೆ ಅಚ್ಚಮೆಚ್ಚು.
ಮಹಿಳಾ ದಿನಾಚರಣೆಗೆ ಎರಡೇ ದಿನಗಳ ಮುಂಚೆ, ಹಿಂದೂ ಹೃದಯ ಸಾಮ್ರಾಟ ಶಿವಾಜಿ ಮಹಾರಾಜರ ಮೂರ್ತಿಯನ್ನು ಮೂಗಿನ ಮೇಲೆ ಬೆರಳಿಡುವಂತೆ ಆಕರ್ಷವಾಗಿ ಕೆತ್ತಿಸಿ ರಾಜಹಂಸಗಢದ ಮೇಲೆ ಪ್ರತಿಷ್ಠಾಪಿಸಿದ ಆಕೆಯ ಛಲ ಈಗ ಜಗಜ್ಜಾಹೀರಾಗಿದೆ.
ರಾಜಕೀಯದ ಜೊತೆಗೆ ಉದ್ಯಮಿಯಾಗಿ ಹೊರಹೊಮ್ಮಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಆರ್ಥಿಕವಾಗಿ ಭಾರಿ ಸಶಕ್ತೆ. ಸಾವಿರಾರು ಜನರಿಗೆ ಉದ್ಯೋಗ ವ್ಯಾಪಾರ ಒದಗಿಸಿಕೊಟ್ಟ ಅವರು ರಾಜಕೀಯ, ಉದ್ಯಮಕ್ಷೇತ್ರದ ಮಹಿಳೆಯರಿಗೆ ಮಾದರಿ. ಪ್ರೀತಿಯ ಪುತ್ರ ಮೃಣಾಲ ಮತ್ತು ಸಹೋದರ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಸಹಕಾರ ಅವರ ಸಾಧನೆಗೆ ಮುಕುಟವಾಗಿವೆ.
ತಾವು ಪಡೆದ ಉನ್ನತ ಶಿಕ್ಷಣ ಮತ್ತು ಸಂಸ್ಕಾರ, ಸೌಮ್ಯ ಸ್ವಭಾವ, ಶಿಕ್ಷಿತರಾದ ಹಿಂಬಾಲಕರ ಸಹಾಯ ಅವರಿಗೆ ಯಶಸ್ವಿ ಸಜ್ಜನ ರಾಜಕಾರಣಿಯಾಗಿ ಹೊರಹೊಮ್ಮಲು ಕಾರಣವಾಗಿದೆ. ಮಹಿಳಾ ದಿನಾಚರಣೆಯ ದಿನ ಅವರ ಧೀಮಂತ ವ್ಯಕ್ತಿತ್ವ ನಾಡಿನ ಮಹಿಳೆಯರಿಗೆ, ಮಹಿಳಾ ಸಾಧಕಿಯರಿಗೆ ಆದರ್ಶಪ್ರಾಯವಾಗಿದೆ ಎಂಬುವುದು ಗಮನಾರ್ಹ.