ಬೆಳವಡಿ ಮಲ್ಲಮ್ಮ ಹಾಗೂ ರಾಣಿ ಚನ್ನಮ್ಮ ಆಳಿದ ಬೆಳಗಾವಿ ಜಿಲ್ಲೆ ಆಧುನಿಕ ಸಂದರ್ಭದಲ್ಲಿ ಮಹಿಳೆಯರ ಯಶೋಗಾಥೆಗೆ ಮುನ್ನುಡಿ ಬರೆದಿದೆ. ಸಾಕಷ್ಟು ಮಹಿಳೆಯರು ಬೆಳಗಾವಿ ಜಿಲ್ಲೆಯಲ್ಲಿ ಹೆಸರು ಮಾಡಿರುವುದು ವಿಶೇಷವಾಗಿ ಗಮನಿಸಬಹುದು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ ಸಂದರ್ಭದಲ್ಲಿ “ಜನ ಜೀವಾಳ” ಬೆಳಗಾವಿ ಜಿಲ್ಲೆಯ ಕೆಲ ಸಾಧಕಿಯರ ಕಿರುನೋಟ ಪರಿಚಯಿಸಿದೆ. – ಸಂಪಾದಕಿ
ಆಶಾತಾಯಿ ಕೋರೆ :ರಾಣಿ ಚನ್ನಮ್ಮ ಮಹಿಳಾ ಬ್ಯಾಂಕನ್ನು ಅತ್ಯಂತ ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಹೋಗುತ್ತಿರುವ ಆಶಾ ಪ್ರಭಾಕರ ಕೋರೆ ಅವರು ಮಹಿಳೆಯರಿಗೆ ಆದರ್ಶವಾಗಿದ್ದಾರೆ. ವಿವಿಧ ಸಾಮಾಜಿಕ ಸಂಘಟನೆಯಲ್ಲಿ ತೊಡಗಿಕೊಂಡಿರುವ ಆಶಾ ತಾಯಿ ಪ್ರಭಾಕರ ಕೋರೆ ಅವರು ಎಲೆಮರೆಯ ಕಾಯಿಯಂತೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪ್ರೀತಿ ಕೋರೆ : ಪ್ರೀತಿ ಕೋರೆ ಅವರು ಬೆಳಗಾವಿಯ ಜನಪ್ರಿಯ ಉದ್ಯಮಿ ಹಾಗೂ ಶಿಕ್ಷಣ ಕ್ಷೇತ್ರದ ಕಿರಣ. ಉದ್ದಿಮೆಯಾಗಿ ಗುರುತಿಸಿಕೊಂಡಿರುವ ಅವರು ಮಹಿಳಾ ಸಂಘಟನೆ ಮೂಲಕ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದು ಚುನಾವಣಾ ರಾಜಕೀಯದಲ್ಲೂ ಅವರ ಹೆಸರು ಆಗಾಗ ಹರಿದಾಡುತ್ತಿದೆ.
ಲಕ್ಷ್ಮೀ ಹೆಬ್ಬಾಳ್ಕರ್ : ರಾಜ್ಯದ ಅತ್ಯಂತ ಪ್ರಭಾವಿ ಹಾಗೂ ವರ್ಚಸ್ವಿ ಶಾಸಕಿಯಾಗಿ ಗುರುತಿಸಿಕೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಜಿಲ್ಲೆಯವರು ಎನ್ನುವುದು ಹೆಮ್ಮೆಯ ಸಂಗತಿ. ಚೊಚ್ಚಲ ಅವಧಿಯಲ್ಲಿ ಇಡೀ ರಾಜ್ಯವೇ ತಿರುಗಿ ನೋಡುವಂತೆ ತಮ್ಮ ಅದ್ಭುತ ಕಾರ್ಯ ವೈಖರಿಯಿಂದ ಅವರು ನಾಡಿನಲ್ಲೆಡೆ ಮನೆಮತಾಗಿದ್ದಾರೆ.
ಮಂಗಳಾ ಅಂಗಡಿ :ಬೆಳಗಾವಿಯ ಜನಪ್ರಿಯ ಸಂಸದೆಯಾಗಿ ಛಾಪು ಮೂಡಿಸಿರುವ ಮಂಗಳಾ ಅಂಗಡಿ ಅವರು ಪತಿ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸದಾ ಚಿಂತಿಸುವ ಮನೋಭಾವ ಹೊಂದಿರುವ ಅವರು ಜಿಲ್ಲೆಗೆ ದೊಡ್ಡ ದೊಡ್ಡ ಯೋಜನೆಗಳನ್ನು ತರುವ ಹೊಂಗನಸು ಕಂಡಿದ್ದಾರೆ.
ಶಶಿಕಲಾ ಜೊಲ್ಲೆ :ನಿಪ್ಪಾಣಿಯ ಬಿಜೆಪಿ ಶಾಸಕಿಯಾಗಿ ಆಯ್ಕೆಯಾಗಿರುವ ಶಶಿಕಲಾ ಜೊಲ್ಲೆ ರಾಜ್ಯದ ಬಿಜೆಪಿ ಸರಕಾರದಲ್ಲಿರುವ ಏಕೈಕ ಮಹಿಳಾ ಸಚಿವೆ. ಮುಜರಾಯಿಯಂತಹ ಸವಾಲಿನ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಶಶಿಕಲಾ ಜೊಲ್ಲೆ ಅವರು ನಿಪ್ಪಾಣಿ ಭಾಗದ ಜನತೆಯ ಮನ ಗೆದ್ದವರು. ತಮ್ಮ ಅದ್ಭುತ ಕೆಲಸ ಕಾರ್ಯಗಳಿಂದ ಅವರು ಗಮನ ಸೆಳೆದಿದ್ದಾರೆ.
ಡಾ.ಅಂಜಲಿ ನಿಂಬಾಳ್ಕರ್: ಮೂಲತಃ ವೈದ್ಯ ಆಗಿದ್ದರೂ ಡಾ. ಅಂಜಲಿ ನಿಂಬಾಳ್ಕರ್ ಇದೀಗ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅತ್ಯಂತ ಜನಪ್ರಿಯ ಶಾಸಕಿಯಾಗಿದ್ದಾರೆ. ಕನ್ನಡ ಹಾಗೂ ಮರಾಠಿ ಜನರೊಂದಿಗೆ ಬೆರೆಯುವ ಔದಾರ್ಯತೆ ಬೆಳೆಸಿಕೊಂಡಿರುವ ಅವರು ಕ್ಷೇತ್ರದ ಜನತೆಯ ಸಮಸ್ಯೆಗೆ ಸ್ಪಂದಿಸುವ ಮಹಾತಾಯಿಯಾಗಿ ಗುರುತಿಸಿಕೊಂಡಿದ್ದಾರೆ.
ಡಾ.ಸೋನಾಲಿ ಸರ್ನೋಬತ್ :ಬೆಳಗಾವಿಯ ಖ್ಯಾತನಾಮ ವೈದ್ಯ ಆಗಿರುವ ಡಾ.ಸೋನಾಲಿ ಸರ್ನೋಬತ್ ಕೇವಲ ವೈದ್ಯರು ಮಾತ್ರ ಅಲ್ಲ. ಪತ್ರಿಕೆಗಳಲ್ಲಿ ಅಂಕಣಗಳ ಮೂಲಕ ಚಿರಪರಿಚಿತರು. ಈ ಬಾರಿ ಬಿಜೆಪಿಯಿಂದ ಖಾನಾಪುರ ಮತಕ್ಷೇತ್ರದಿಂದ ಕಣಕ್ಕಿಳಿಯುವ ಅಭಿಲಾಷೆ ವ್ಯಕ್ತಪಡಿಸಿರುವ ಇವರು ಶಾಸಕಿಯಾಗುವ ಕನಸು ಕಂಡಿದ್ದಾರೆ.
ಶಾಂತಲಾ ಕೆ.ಟಿ : ಬೆಳಗಾವಿಯ ಅಪರ ಜಿಲ್ಲಾಧಿಕಾರಿಗಳಾಗಿರುವ ಶಾಂತಲಾ ಅತ್ಯಂತ ಸಮರ್ಥ ಮಹಿಳಾ ಅಧಿಕಾರಿ. ಅವರನ್ನು ಅತ್ಯಂತ ದೊಡ್ಡ ಜಿಲ್ಲೆಯ ಪ್ರಮುಖ ಹುದ್ದೆಗೆ ನೇಮಕ ಮಾಡಿರುವುದು ಅವರ ಸೇವಾ ಪರತೆಗೆ ಹಿಡಿದ ಕೈಗನಡಿಯನ್ನಬಹುದು.
ಸ್ನೇಹಾ ಪಿ.ವಿ. :ಬೆಳಗಾವಿ ಮಹಾನಗರ ಪೊಲೀಸ್ ಡಿಸಿಪಿ ಆಗಿರುವ ಸ್ನೇಹಾ ಹೆಸರಿನಂತೆ ಜನರ ಸ್ನೇಹಿತರಾಗಿದ್ದಾರೆ. ಬೆಳಗಾವಿ ಜನತೆಯ ಯಾವುದೇ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಮನೋಭಾವ ಹೊಂದಿರುವ ಸ್ನೇಹಾ ಅವರ ಕೆಲಸ ಕಾರ್ಯಗಳು ಅತ್ಯಂತ ಅಚ್ಚುಕಟ್ಟು ಹಾಗೂ ಜನಾನುರಾಗಿಯಾಗಿವೆ.
ಪ್ರಿಯಾಂಕಾ ಜಾರಕಿಹೊಳಿ :ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ಸುಪುತ್ರಿಯಾಗಿರುವ ಪ್ರಿಯಾಂಕಾ ಜಾರಕಿಹೊಳಿ ಅವರ ಹೆಸರು ಕಳೆದ ಎರಡು ವರ್ಷಗಳಿಂದ ಬೆಳಗಾವಿಯ ರಾಜಕೀಯ ರಣರಂಗದಲ್ಲಿ ಕೇಳಿ ಬರುತ್ತಿದೆ. ಭವಿಷ್ಯದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುವ ಪ್ರಿಯಾಂಕಾ ಬೆಳಗಾವಿ ಜಿಲ್ಲೆಯ ಮತದಾರರ ಮನೆಗೆಲ್ಲುವಲ್ಲಿ ಈಗಾಗಲೇ ಯಶಸ್ವಿಯಾಗಿರುವುದು ಗಮನಿಸಬೇಕಾದ ಸಂಗತಿ.
ವಿದ್ಯಾವತಿ ಭಜಂತ್ರಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿಗಿರುವ ವಿದ್ಯಾವತಿ ಭಜಂತ್ರಿ ಅವರು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡದ ಕೋಟೆ ಕಟ್ಟುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಯಾವುದೇ ಕನ್ನಡ ಕಾರ್ಯಕ್ರಮಗಳಿಗೆ ಉದಾರವಾಗಿ ತಮ್ಮ ಇಲಾಖೆಯಿಂದ ಹಸಿರು ನಿಶಾನೆ ತೋರುವ ವಿದ್ಯಾವತಿ ಅವರು ಇಲಾಖೆಯ ಅತ್ಯಂತ ಕ್ರಿಯಾಶೀಲ ಮಹಿಳೆಯಾಗಿ ಗುರುತಿಸಲ್ಪಟ್ಟಿದ್ದಾರೆ.
ಶಾಂತಾ ಆಚಾರ್ಯ : ಪ್ರಯತ್ನ ಸಂಘಟನೆ ಮೂಲಕ ಸಾಮಾಜಿಕ ಜವಾಬ್ದಾರಿ ನಿಭಾಯಿಸುತ್ತಿರುವ ಶಾಂತಾ ಆಚಾರ್ಯ ಅವರು ಬೆಳಗಾವಿಯಲ್ಲಿ ಕಳೆದ ಮೂರು ದಶಕಗಳಿಂದ ಕನ್ನಡ ಕೆಲಸದಲ್ಲಿ ಅವಿರತವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಖ್ಯಾತ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಶಾಂತಾ ಆಚಾರ್ಯ ಅವರು ಸೇವಾ ಕಾರ್ಯದಲ್ಲೂ ಸದಾ ಮುಂದಿದ್ದಾರೆ.
ನಿರ್ಮಲಾ ಬಟ್ಟಲ್ : ಮಹಾಂತೇಶ ನಗರ ರಹವಾಸಿಗಳ ಸಂಘದ ಬಿ ಎಡ್ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾಗಿರುವ ನಿರ್ಮಲಾ ಅವರು ಬೆಳಗಾವಿಯ ಸಾಹಿತ್ಯ ಹಾಗೂ ಸಂಸ್ಕೃತಿಯ ರಾಯಭಾರಿ. ಜೊತೆಗೆ ಕವನ, ಅಂಕಣಗಳ ಮೂಲಕ ಚಿರಪರಿಚಿತರಾಗಿದ್ದಾರೆ.
ರಾಜಶ್ರೀ ಜೈನಾಪುರ : ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲ ಸಚಿವೆ ಆಗಿರುವ ರಾಜಶ್ರೀ ಜೈನಾಪುರ ಅವರು ಖಾನಾಪುರ ತಹಶೀಲ್ದಾರ್, ಬೆಳಗಾವಿಯ ಉಪವಿಭಾಗಾಧಿಕಾರಿ ಸೇರಿದಂತೆ ರಾಜ್ಯದ ವಿವಿಧ ಹುದ್ದೆಗಳನ್ನು ಅಲಂಕರಿಸಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅನುಭವಿಯಾಗಿದ್ದಾರೆ.
ಉಮಾ ಸಾಲಿಗೌಡರ : ಬೆಳಗಾವಿಯಲ್ಲಿ ಸಮಾಜಕಲ್ಯಾಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಉತ್ತಮ ಜನಸೇವೆ ನೀಡುತ್ತಿದ್ದ ಉಮಾ ಸಾಲಿಗೌಡರ ಕೂಡ ಕಳೆದ ತಿಂಗಳು ಧಾರವಾಡಕ್ಕೆ ವರ್ಗವಾಗಿದ್ದಾರೆ.
ರೇಷ್ಮಾ ತಾಳಿಕೋಟಿ : ಹಿಡಕಲ್ ಡ್ಯಾಮ್ ಭೂಸ್ವಾಧೀನ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಂಗಲಾ ಮೆಟಗುಡ್ಡ : ಮಹಾರಾಷ್ಟ್ರ ನೆಲದಿಂದ ಬೆಳಗಾವಿ ಜಿಲ್ಲೆಯ ಗಂಡು ಮೆಟ್ಟಿನ ನೆಲವಾಗಿರುವ ಬೈಲಹೊಂಗಲಕ್ಕೆ ಮದುವೆಯಾಗಿ ಬಂದಿರುವ ಮಂಗಳಾ ಮೆಟಗುಡ್ಡ ಅವರು ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥ್ಯ ವಹಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಸತತ ಎರಡನೇ ಬಾರಿಗೆ ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅವರು ಜಿಲ್ಲೆಯ ಮೂಲೆ ಮೂಲೆಯಲ್ಲೂ ಕನ್ನಡದ ಕಂಪನ್ನು ಪಸರಿಸುವ ಕೆಲಸ ಮಾಡುತ್ತಿದ್ದಾರೆ.
ಪತ್ರಿಕಾ ಕ್ಷೇತ್ರದಲ್ಲಿ ‘ಜನ ಜೀವಾಳ’ದ ಸಂಪಾದಕಿ ಶಾಂತಾ ಏಳುಕೋಟಿ, ಬಬಿತಾ ಪವಾರ, ಕ್ರಾಂತಿ ಹುದ್ದಾರ, ಕೀರ್ತಿ ಕಾಸರಗೋಡ, ಮನಿಶಾ ಸುಬೇದಾರ, ಸುನಿತಾ ದೇಸಾಯಿ ಹೀಗೆ ಅನೇಕ ಮಹಿಳಾ ಮಣಿಗಳು ಪತ್ರಿಕಾಲೋಕವನ್ನು ಬೆಳಗುತ್ತಿದ್ದಾರೆ. ಆದರೆ ಅವರಿಗೆ ಸಿಗಬೇಕಾದ ಗೌರವಗಳು ದೊರಕದಿರುವ ಬಗ್ಗೆಯೂ ಚಿಂತಿಸಬೇಕಿದೆ.