ಇಟಗಿ :
ಹುಟ್ಟು ಸಾವುಗಳ ಮಧ್ಯದ ಬದುಕನ್ನು ಸಮಾಜಮುಖಿಯಾಗಿ ಸಮರ್ಪಣಮಾಡಿದವರ ಬದುಕನ್ನು ಮುಂದಿನ ಜನಾಂಗವು ಸ್ಮರಿಸುತ್ತದೆ ಎಂದು ಗಂದಿಗವಾಡದ ಮೃತ್ಯುಂಜಯಸ್ವಾಮಿ ಹಿಿರೇಮಠ ಹೇಳಿದರು. ಅವರೊಳ್ಳಿ-ಬೀಳಕಿಯ ಶ್ರೀ ರುದ್ರಸ್ವಾಮಿ ಮಠದ ಲಿಂಗೈಕ್ಯ ಶ್ರೀ ಶಾಂಡಿಲ್ಯ ಮಹಾಸ್ವಾಮೀಜಿಯವರ ಆರನೇ ಪುಣ್ಯಾರಾಧನೆ ಅಂಗವಾಗಿ ನಡೆದ ಸಸಿ ವಿತರಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಮಾನವನ ಬದುಕು ಸಮಾಜಮುಖಿಯಾಗಬೇಕು. ಸ್ವಾರ್ಥ ಬದುಕಿನ ನಮ್ಮನ್ನು ಸಮಾಜ ದಿಕ್ಕರಿಸುತ್ತದೆ. ಇಂದಿನ ಪೂಜ್ಯರಾದ ಚನ್ನಬಸವದೇವರು ಹಿರಿಯ ಗುರುಗಳ ಸ್ಮರಣೋತ್ಸವವನ್ನು ಭಕ್ತರಿಗೆ ಸಸಿಗಳನ್ನು ಹಂಚುವ ಮೂಲಕ ಹಾಗೂ ಆರೋಗ್ಯ ಶಿಬಿರಗಳನ್ನು ಮಾಡುವ ಮೂಲಕ ಆಚರಿಸುತ್ತಿರುವುದು ಅಭಿನಂದನಾರ್ಹವಾಗಿದೆ ಎಂದರು.
ಶ್ರೀಮಠದ ಪೀಠಾಧಿಪತಿ ಶ್ರೀ ಚನ್ನಬಸವದೇವರು ಮಾತನಾಡಿ, ಆರೋಗ್ಯವೇ ಭಾಗ್ಯವೆಂದು ನಮ್ಮ ನಾಣ್ಣುಡಿ ಹೇಳುತ್ತದೆ. ಆದರೆ ಇಂದು ಎಲ್ಲರೂ ಒಂದಿಲ್ಲ ಒಂದು ರೀತಿಯಲ್ಲಿ ಆರೋಗ್ಯವನ್ನು ಕಳೆದುಕೊಂಡವರೇ ಆಗಿದ್ದೇವೆ. ಆದಕಾರಣ ಆಧ್ಯಾತ್ಮ ಹಾಗೂ ಆರೋಗ್ಯ ಒಂದು ನಾಣ್ಯದ ಎರಡು ಮುಖಗಳು ಎಂದರು.
ಹಿರೇಮುನವಳ್ಳಿಯ ಶಾಂಡಿಲ್ಯೇಶ್ವರ ಮಠದ ಶಂಭುಲಿಂಗಶಿವಾಚಾರ್ಯರು ಮಾತನಾಡಿ, ನಮ್ಮ ಪೂರ್ವದ ಮಹಾತ್ಮರು ಗಿಡಮರಗಳನ್ನು ದೇವರೆಂದು ಪೂಜಿಸಿದರು ಆ ಮೂಲಕ ಪ್ರಕೃತಿಯಲ್ಲಿನ ವಾಯು ಮಂಡಲವು ದಟ್ಟವಾಗಿತ್ತು. ಆದರೆ ಇಂದು ಮಾನವನ ಸ್ವೇಚ್ಚಾಚಾರದ ಆಸೆಗೆ ಸಸ್ಯಲೋಕವು ಅವನತಿಯನ್ನು ಮುಟ್ಟಿದ ಕಾರಣ ನಾವೆಲ್ಲ ಪ್ರಾಣವಾಯುವನ್ನು ಖರೀದಿಸಬೇಕಾಗದ ಅನಿವಾರ್ಯತೆ ಬಂದಿದೆ. ಅವುಗಳನ್ನು ರಕ್ಷಿಸಿ ಬೆಳೆಸಬೇಕಾದ ಹೊಣೆ ನಮ್ಮೆಲ್ಲರದಾಗಿದೆ. ಮಹಾತ್ಮರನ್ನು ಹಾಗೂ ನಮ್ಮ ಹಿರಿಯರನ್ನು ನೆನೆಯುವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ ಎಂದರು.
ಧಾರವಾಡದ ಮನೋವೈದ್ಯ ಡಾ.ಆದಿತ್ಯ ಪಾಂಡುರಂಗಿ, ಬೆಳಗಾವಿಯ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಬಾನು ಜಿ.ಪಿ.,ಶಿವರುದ್ರಪ್ಪ ಕಬಾಡಗಿ, ವಾಣಿಶ್ರೀ ಹೆಗಡೆ, ಸಂತೋಷ ಚವ್ಹಾನ,ಮಲ್ಲಿಕಾರ್ಜುನ ವಾಲಿ ಹಾಗೂ ಇತರರು ಉಪಸ್ಥಿತರಿದ್ದರು.