ಬೆಳಗಾವಿ:ಕಾಂಗ್ರೆಸ್- ಬಿಜೆಪಿ ಕ್ರೆಡಿಟ್ ಫೈಟ್ ಮೇಲಾಟದ ನಡುವೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಅನುಪಸ್ಥಿತಿಯಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿವಾಜಿ ಮಹಾರಾಜರ ಮೂರ್ತಿ ಇಂದು ಲೋಕಾರ್ಪಣೆಗೊಳಿಸಿದರು.
ಬೆಳಗಾವಿ ತಾಲೂಕಿನ ಯಳ್ಳೂರ ಹೊರವೊಲಯದ ಬೆಟ್ಟದ ಮೇಲಿನ ರಾಜಹಂಸಗಢ ಕೋಟೆಯಲ್ಲಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿಶೇಷ ಪ್ರಯತ್ನದಿಂದ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆ ಸ್ಥಾಪಿಸಲಾಗಿತ್ತು.
ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಇಲ್ಲಿ ಭೇಟಿ ನೀಡಿ ನಮ್ಮ ಸರಕಾರ ಇದಕ್ಕೆ ಅನುದಾನ ನೀಡಿದೆ ಎಂದು ವಾದಿಸಿ ಕ್ರೆಡಿಟ್ ಪಾಲಿಟಿಕ್ಸಗೆ ಕೆಲದಿನಗಳ ಹಿಂದೆ ನಾಂದಿ ಹಾಡಿದ್ದರು.
ಇಂದು ರಾಜ್ಯ ಸರಕಾರ ಗ್ರಾಮೀಣ ಶಾಸಕಿಯ ಗೈರು ಹಾಜರಿಯಲ್ಲಿ, ಲಕ್ಷ್ಮೀ ಹೆಬ್ಬಾಳಕರ ಅವರ ಕ್ಷೇತ್ರದಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ಉದ್ಘಾಟಿಸಿ ಗಮನ ಸೆಳೆದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಲ ಅಂಗಡಿ, ಶಾಸಕರಾದ ರಮೇಶ ಜಾರಕಿಹೊಳಿ, ಅಭಯ ಪಾಟೀಲ, ಅನಿಲ ಬೆನಕೆ ಹಾಗೂ ಇತರರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಕಾಂಗ್ರೆಸ್ ಪಕ್ಷವೂ ಸಹ ಇದಕ್ಕೆ ಪರ್ಯಾಯವಾಗಿ ಮಾರ್ಚ್ 5ಕ್ಕೆ ಮರು ಉದ್ಘಾಟನಾ ಕಾರ್ಯಕ್ರಮ ಇಲ್ಲಿ ಹಮ್ಮಿಕೊಂಡಿದೆ.
ರಾಜಕೀಯ ಜಿದ್ದಾಜಿದ್ದಿ ನಡುವೆ ಕ್ಷೇತ್ರದ ಸ್ಥಳೀಯ ಶಾಸಕರಿಲ್ಲದೇ ಲೋಕಾರ್ಪಣೆಗೊಳಿಸಿರುವುದು ಬಿಜೆಪಿ ಮತ್ತು ಮುಖ್ಯಮಂತ್ರಿಗೆ ಇರುಸುಮುರುಸು ಉಂಟು ಮಾಡಿದೆ.