ಬೆಳಗಾವಿ :
ಯಾರು ಎಷ್ಟೇ ಸುಳ್ಳು ಹೇಳಿದರೂ ಸತ್ಯವನ್ನು ಸಾಯಿಸಲು ಸಾಧ್ಯವಿಲ್ಲ. ಹಾಗೆಯೇ ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರು ಈ ಬಾರಿ ಅಭಿವೃದ್ಧಿಗೆ ಮತ ನೀಡಬೇಕೆಂದು ತೀರ್ಮಾನಿಸಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಕಂಗ್ರಾಳಿ ಕೆ ಎಚ್ ಗ್ರಾಮದಲ್ಲಿನ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಒಂದೂವರೆ ಕೋಟಿ ರೂ,ಗಳನ್ನು ಮಂಜೂರು ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಭಾನುವಾರ ಗ್ರಾಮಸ್ಥರ ಸಮ್ಮುಖದಲ್ಲಿ ಕಾಮಗಾರಿಗಳಿಗೆ ಚಾಲನೆಯನ್ನು ನೀಡಿ ಮಾತನಾಡುತ್ತಿದ್ದರು.
ನಾನು ಕ್ಷೇತ್ರದಲ್ಲಿ ಕಳೆದ 5 ವರ್ಷದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿಸಿರುವುದರಿಂದ ಮತ್ತು ನಿರಂತರವಾಗಿ ಜನರೊಂದಿಗೆ ಇರುವುದರಿಂದ ಜನರ ಪ್ರೀತಿ, ವಿಶ್ವಾಸಗಳಿಸಿದ್ದೇನೆ. ಹಾಗಾಗಿ ಜನರ ಮುಂದೆ ಬಂದು ಮತ್ತೊಮ್ಮೆ ಬೆಂಬಲ ಕೇಳಲು ಯಾವುದೇ ಹಿಂಜರಿಕೆ ಇಲ್ಲ. ಬೇರೆಯವರ ಮೇಲೆ ಯಾವುದೇ ಆರೋಪಗಳನ್ನು ಮಾಡದೆ ನನ್ನ ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟು ಮತ ಕೇಳುತ್ತೇನೆ. ಬೇರೆಯವರಂತೆ ಸುಳ್ಳು ಹೇಳುವ ಅಗತ್ಯವೂ ನನಗಿಲ್ಲ. ಹಾಗಾಗಿ ಬರುವ ಚುನಾವಣೆಯಲ್ಲಿ ಮತ್ತೊಮ್ಮೆ ನನ್ನನ್ನು ಬೆಂಬಲಿಸಿ ಎಂದು ಹೆಬ್ಬಾಳಕರ್ ಮನವಿ ಮಾಡಿದರು.
ನಾನು ಯಾರನ್ನೂ ಸೋಲಿಸುವುದಕ್ಕಾಗಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ನಾನು ಗೆಲ್ಲುವುದಕ್ಕೋಸ್ಕರ ಮತ್ತು ಕ್ಷೇತ್ರದ ಅಭಿವೃದ್ಧಿಗೋಸ್ಕರ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಅಭಿವೃದ್ಧಿಯ ರಥವನ್ನು ಇನ್ನಷ್ಟು ಮುಂದೆ ಎಳೆದುಕೊಂಡು ಹೋಗಲು ಎಂದಿನಂತೆ ನನಗೆ ಸಹಕಾರ ನೀಡಿ ಎಂದು ಅವರು ವಿನಂತಿಸಿದರು.
ಅಜಿತ ಕದಂ, ಆನಂದ ಭಜಂತ್ರಿ, ಮೋಹನ ಕಾಂಬಳೆ, ವಿಶಾಲ್ ಬೋಸ್ಲೆ, ವಿನಾಯಕ ರಾಜಗೋಳ್ಕರ್, ಕೆಂಪಣ್ಣ ಸನದಿ, ಬಾಳು ಪಾಟೀಲ, ಗಂಗಾರಾಮ ಕಂಗ್ರಾಳ್ಕರ್, ಸತೀಶ್ ಮುತಗೇಕರ, ಅನಿತಾ ಪಾಟೀಲ, ಜ್ಯೋತಿ ಪಾಟೀಲ, ಮೋಹನ ಪಾಟೀಲ, ಲತಾ ಪಾಟೀಲ, ಮೀನಾ ಮುತಗೇಕರ್, ರಾಧಾ ಕಾಂಬಳೆ ಟಿ ಡಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.