40 ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ : ಆಗ ನಿಮ್ಮ ಈ ತೀರ್ಮಾನಗಳನ್ನು ರದ್ದು ಮಾಡಿ ಎಲ್ಲ ಸಮುದಾಯಗಳಿಗೆ ನ್ಯಾಯ : ಡಿಕೆಶಿ ವಾಗ್ದಾನ
ಬೆಂಗಳೂರು : 40 ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಬರಲಿದೆ. ಆಗ ನಿಮ್ಮ ಈ ತೀರ್ಮಾನಗಳನ್ನು ರದ್ದು ಮಾಡಿ ಎಲ್ಲ ಸಮುದಾಯಗಳಿಗೆ ನ್ಯಾಯ ದೊರೆಕಿಸಿಕೊಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾನ ಮಾಡಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾತುಗಳು ಹೀಗಿವೆ.
ಚುನಾವಣೆ ಸಮಯದಲ್ಲಿ ಜನರನ್ನು ದಾರಿತಪ್ಪಿಸಲು ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ಜನದ್ರೋಹಿ ತೀರ್ಮಾನಗಳನ್ನು ಕೈಗೊಂಡಿದೆ. ಅವರ ಈ ತೀರ್ಮಾನಗಳು ಕಾರ್ಯಸಾಧುವಾಗುವುದಿಲ್ಲ. ಹೀಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಜನದ್ರೋಹಿ ತೀರ್ಮಾನಗಳನ್ನು ರದ್ದು ಮಾಡುತ್ತೇವೆ. ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ/ ಪಂಗಡ, ಅಲ್ಪಸಂಖ್ಯಾತರಿಗೆ ಸಿಗಬೇಕಾದ ನ್ಯಾಯವನ್ನು ನೀಡುತ್ತೇವೆ.
ರಾಜ್ಯದಲ್ಲಿರುವ ‘BETRAYAL JANATA PARTY’ಯಿಂದ ದೇಶವೇ ಆತಂಕಕ್ಕೆ ಒಳಗಾಗಿದೆ. ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ ಎಲ್ಲ ಸಮಾಜಗಳನ್ನು ರಕ್ಷಣೆ ಮಾಡಬೇಕಾದವರು, ಅಧಿಕಾರ ದುರುಪಯೋಗ ಮಾಡಿಕೊಂಡು ಎಲ್ಲ ವರ್ಗದ ಜನರಿಗೆ ಮೋಸ ಮಾಡಲು ಮುಂದಾಗಿದೆ.
ಬಿಜೆಪಿ ಸರ್ಕಾರದ ಈ ಧೋರಣೆಯನ್ನು ಜನ ಧಿಕ್ಕರಿಸಿ ಹೋರಾಟ ಮಾಡುತ್ತಿದ್ದಾರೆ. ಇವರ ಆಡಳಿತದಲ್ಲಿ ಪ್ರತಿನಿತ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರಾಳ ದಿನಗಳಾಗುತ್ತಿವೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳೆರಡೂ ಸೇರಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿವೆ.
75 ವರ್ಷಗಳ ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಂದಿಗೂ ರಾಜ್ಯ ಸರ್ಕಾರ 90 ದಿನಗಳ ಅವಧಿಯಲ್ಲಿ ಮಿಸಲಾತಿ ವರ್ಗೀಕರಣವನ್ನು ಮೂರು ಬಾರಿ ಬದಲಾವಣೆ ಮಾಡಿರಲಿಲ್ಲ. ಯಾವುದೇ ಆಯೋಗಗಳು ಅಂತಿಮ ವರದಿ ನೀಡುವ ಮುನ್ನವೇ ಒಂದು ಚೀಟಿಯಲ್ಲಿ ಇವರಿಗೆ ಇಂತಿಷ್ಟು ಮೀಸಲಾತಿ ಎಂದು ಬರೆದು ಹಂಚಲು ಮುಂದಾಗಿದ್ದಾರೆ. ಈ ರೀತಿ ಹಂಚಲು ಮೀಸಲಾತಿ ಏನು ಅವರ ಮನೆ ಆಸ್ತಿಯೇ?
ಹಿಂದುಳಿದವರು, ಅಲ್ಪಸಂಖ್ಯಾತರು, ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟರು ಇವರ್ಯಾರೂ ಭಿಕ್ಷುಕರಲ್ಲ. ಪ್ರತಿಯೊಬ್ಬರು ತಮ್ಮ ಹಕ್ಕು ಕೇಳುತ್ತಿದ್ದಾರೆ. ತಮ್ಮ ಜನಸಂಖ್ಯೆಗಳಿಗೆ ಅನುಗುಣವಾಗಿ ತಮ್ಮ ಹಕ್ಕನ್ನು ಈ ಸಮುದಾಯಗಳು ಕೇಳುತ್ತಿವೆ. ನಾಗಮೋಹನ್ ದಾಸ್ ಅವರ ಸಮಿತಿಯು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಶಿಫಾರಸ್ಸು ಮಾಡಿದೆ. ಈ ವರದಿಯನ್ನು ನಾಲ್ಕು ವರ್ಷಗಳ ಕಾಲ ಜಾರಿ ಮಾಡದೇ, ನಾವು ಧ್ವನಿ ಎತ್ತಿದ ನಂತರ ಹೆಚ್ಚಳ ಮಾಡುವ ಕಾನೂನು ಮಾಡಿ ಇದನ್ನು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿಲ್ಲ. ಇದರ ಬಗ್ಗೆ ನಾವು ಹೋರಾಟಕ್ಕೆ ಮುಂದಾದ ನಂತರ ಅವರು ಕೇಂದ್ರಕ್ಕೆ ಪತ್ರ ಬರೆಯುವ ನಾಟಕವಾಡಿದ್ದಾರೆ.
ಈ ಸರ್ಕಾರಕ್ಕೆ ದಲಿತರು, ಅಲ್ಪಸಂಖ್ಯಾತರನ್ನು ಕಂಡರೆ ಇಷ್ಟೊಂದು ತಿರಸ್ಕಾರ ಯಾಕೆ ? ಅವರು ಮನುಷ್ಯರಲ್ಲವೇ? ಲಿಂಗಾಯತ, ಒಕ್ಕಲಿಗರಲ್ಲಿ ಯಾರಾದರೂ ಅಲ್ಪಸಂಖ್ಯಾತ ಮೀಸಲಾತಿಯನ್ನು ಕಿತ್ತು ನಮಗೆ ಕೊಡಿ ಎಂದು ಕೇಳಿದ್ದರೇ? ಈಗಿರುವ ಶೇ.56ರಷ್ಟು ಮೀಸಲಾತಿಯ ಜತೆಗೆ ಮೀಸಲಾತಿ ಮಿತಿಯನ್ನು ವಿಸ್ತರಣೆ ಮಾಡಿ ಈ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ನೀಡಬೇಕಿತ್ತು.
ಲಿಂಗಾಯತರು ಶೇ.15ರಷ್ಟು ಒಕ್ಕಲಿಗರು ಶೇ.12ರಷ್ಟು ಮೀಸಲಾತಿ ಕೇಳಿದ್ದು, ಕೇವಲ 2% ಮೀಸಲಾತಿಯನ್ನು ಭಿಕ್ಷೆ ನೀಡುತ್ತಿದ್ದೀರಾ? ಅದರಲ್ಲೂ ಅಲ್ಪಸಂಖ್ಯಾತರ ಮೀಸಲಾತಿಯನ್ನು ಕಸಿದಿರುವುದೇಕೆ? ಆ ಮೂಲಕ ಸಮುದಾಯಗಳ ಮಧ್ಯೆ ದ್ವೇಷ ಬಿತ್ತಿ ಪರಸ್ಪರ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿರುವುದೇಕೆ? ಈ ರಾಜ್ಯ ಸರ್ವ ಜನಾಂಗಗಳ ಶಾಂತಿಯ ತೋಟ. ನಮ್ಮ ರಾಜ್ಯಕ್ಕೆ ಅದರದೇ ಆದ ಇತಿಹಾಸವಿದೆ. ಈ ರಾಜ್ಯದ ಶಾಂತಿಯನ್ನು ಕದಡಿಸಲು ಯೋಚಿಸುತ್ತಿದ್ದೀರಾ?
ಇಡೀ ವಿಶ್ವವೇ ಕರ್ನಾಟಕ ರಾಜ್ಯದಲ್ಲಿ ಸಂಪನ್ಮೂಲಗಳು ಉತ್ತಮವಾಗಿದ್ದು, ಇಲ್ಲಿ ಬಂಡವಾಳ ಹೂಡಿಕೆ ಮಾಡಲು ಆಲೋಚಿಸುತ್ತಿದ್ದರೆ, ನೀವು ರಾಜ್ಯದ ಪರಿಸ್ಥಿತಿ ನಾಶ ಮಾಡಲು ಹೊರಟಿದ್ದೀರಿ. ಈ ಸರ್ಕಾರದ ಅವೈಜ್ಞಾನಿಕ ತೀರ್ಮಾನವನ್ನು ಕಾಂಗ್ರೆಸ್ ಖಂಡಿಸುತ್ತದೆ. ಮುಂದಿನ 40 ದಿನಗಳ ನಂತರ ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ ನಿಮ್ಮ ಈ ತೀರ್ಮಾನಗಳನ್ನು ರದ್ದು ಮಾಡಿ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸುತ್ತೇವೆ.
ನಮಗೆ ಯಾರ ಮೇಲೂ ದ್ವೇಷವಿಲ್ಲ. ಪ್ರತಿಯೊಬ್ಬರಿಗೂ ಅವರ ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಸಿಗಬೇಕಾದ ಹಕ್ಕು ಸಿಗಬೇಕು. ಪರಿಶಿಷ್ಟರ ಕಲ್ಯಾಣಕ್ಕೆ ಅವರ ಜನಸಂಖ್ಯೆ ಆಧಾರದ ಮೇಲೆ ಅನುದಾನ ನೀಡಬೇಕು ಎಂದು ವಿಶೇಷ ಕಾನೂನು ತಂದು ಬಜೆಟ್ ನಲ್ಲಿ ಅವರಿಗೆ ಅನುದಾನ ನೀಡಲಿಲ್ಲವೇ? ನಾಗಮೋಹನ್ ದಾಸ್ ಅವರ ಸಮಿತಿಯನ್ನು ನೇಮಿಸಿದ್ದು ಕಾಂಗ್ರೆಸ್ ಸರ್ಕಾರವಲ್ಲವೇ? ನಿಮ್ಮ ಸರ್ಕಾರದ ಅವಧಿಯಲ್ಲಿ ಅಧ್ಯಯನ ಮಾಡಿದ ವರದಿಗಳು ಎಲ್ಲಿವೆ? ಅವುಗಳನ್ನು ಬಹಿರಂಗಪಡಿಸಿ. ಈಗ ನೀವು ಮಾಡಿರುವ ವರ್ಗೀಕರಣವನ್ನು ಯಾವ ವರದಿಯ ಆಧಾರದ ಮೇಲೆ ಮಾಡಿದ್ದೀರಿ?
ಮಹಾರಾಷ್ಟ್ರ, ಆಂಧ್ರ ಪ್ರದೇಶ, ದೆಹಲಿಯಲ್ಲಿ ಮಧ್ಯಂತರ ವರದಿ ಆಧಾರದ ಮೇಲೆ ನೀಡಿದ ಮೀಸಲಾತಿ ಕುರಿತು ಕೋರ್ಟ್ ಗಳಲ್ಲಿ ಏನು ತೀರ್ಪು ಬಂದಿದೆ? ಎಂದು ಈ ಸರ್ಕಾರ ಗಮನಿಸಿದೆಯಾ? ನಿಮ್ಮಲ್ಲಿ ಕಾನೂನು ವಿಭಾಗ ಇದೆಯಾ? ನಿಮಗೆ ಬೇಕಾದ ಮೂರ್ನಾಲ್ಕು ಜನ ಕೂತು ಹಂಚಿಕೆ ಮಾಡಲು ಇದೇನು ನಿಮ್ಮ ಸ್ವಂತ ಆಸ್ತಿಯೇ? ಈ ಮೀಸಲಾತಿ ಹಂಚಿಕೆಯನ್ನು ಯಾವ ವರದಿ, ಅಂಕಿ ಅಂಶಗಳ ಆಧಾರದ ಮೇಲೆ ಮಾಡಲಾಗಿದೆ? ತಮಗೆ ಬೇಕಾದಂತೆ ತೀರ್ಮಾನ ಮಾಡಿ, ಅದನ್ನು ಒಪ್ಪಿಕೊಳ್ಳುವಂತೆ ಸ್ವಾಮೀಜಿಗಳನ್ನು ಬೆದರಿಸಿ ಒತ್ತಡ ಹಾಕುತ್ತಿದ್ದಾರೆ. ನಿಮ್ಮ ಈ ಭಿಕ್ಷೆಯನ್ನು ಪಡೆಯಲು ಇಲ್ಲಿ ಯಾರೂ ಭಿಕ್ಷುಕರಿಲ್ಲ. ನಿಮ್ಮ ಈ ತೀರ್ಮಾನವನ್ನು ನಾವು ವಿರೋಧ ಮಾಡುತ್ತೇವೆ. ಈ ಸಮುದಾಯಗಳಿಗೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹಂಚಿಕೆಯಾಗಬೇಕು. ಕಾಂಗ್ರೆಸ್ ಪಕ್ಷ ಇದಕ್ಕೆ ಬದ್ಧವಾಗಿದೆ.
*ಪ್ರಶ್ನೋತ್ತರ*
ಸ್ವಾಮೀಜಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಹೇಳುತ್ತಿದ್ದೀರಿ, ಯಾರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಕೇಳಿದಾಗ, ‘ಮೃತ್ಯುಂಜಯ ಸ್ವಾಮೀಜಿಗಳು, ನಿರ್ಮಲಾನಂದ ಸ್ವಾಮೀಜಿಗಳಿಗೆ ಸರ್ಕಾರದವರು 20-25 ಬಾರಿ ಕರೆ ಮಾಡಿ ಇದನ್ನು ಒಪ್ಪಿಕೊಳ್ಳಿ ಎಂದು ಕೇಳುತ್ತಿದ್ದಾರೆ. ಆರ್. ಅಶೋಕ್ ಅವರಿಗೆ ಮೀಸಲಾತಿ ಹೆಚ್ಚಳ ವಿಚಾರವಾಗಿ ಒಕ್ಕಲಿಗರು ಕೊಟ್ಟ ಮನವಿಯಲ್ಲಿ ಎಷ್ಟು ಮೀಸಲಾತಿಗೆ ಬೇಡಿಕೆ ಇಡಲಾಗಿತ್ತು? ನಮ್ಮ ಮನವಿ ಪಡೆಯುವಾಗ ಇದನ್ನು ಜಾರಿಗೊಳಿಸುತ್ತೇವೆ ಎಂದು ಅಶೋಕ್ ಹೇಳಿದ್ದರು. ಈಗ ಅಲ್ಪಸಂಖ್ಯಾತರಿಂದ ಕಸಿದು ನಮಗೆ ಭಿಕ್ಷೆ ಹಾಕಿದರೆ, ಅದನ್ನು ಸ್ವೀಕರಿಸಲು ಲಿಂಗಾಯತು, ಒಕ್ಕಲಿಗರು ಭಿಕ್ಷುಕರೇ? ಅಲ್ಪಸಂಖ್ಯಾತ ಸಮುದಾಯದವರು ನಮ್ಮ ಜನರಲ್ಲವೇ? ಇವರು ಅಧಿಕಾರ ಸ್ವೀಕಾರ ಮಾಡುವಾಗ ಏನೆಂದು ಪ್ರಮಾಣ ವಚನ ಸ್ವೀಕರಿಸಿದ್ದರು’ ಎಂದು ಖಾರವಾಗಿ ಉತ್ತರಿಸಿದರು.