ಬೆಳಗಾವಿ :ವಿದ್ಯಾರ್ಥಿಗಳು ಭವಿಷ್ಯವನ್ನು ಉಜ್ಜಲಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಓದಿನ ಕಡೆಗೆ ಗರಿಷ್ಠ ಗಮನಹರಿಸಬೇಕು. ಈ ಮೂಲಕ ಸಾಧನೆಗೈದು ಕಲಿತ ಸಂಸ್ಥೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕು ಮಹಾನಗರ ಪಾಲಿಕೆ ಸದಸ್ಯ ಶಂಕರಗೌಡ ಪಾಟೀಲ ಹೇಳಿದರು.
ನಗರದ ಜಿಎ ಪ್ರೌಢಶಾಲೆಯಲ್ಲಿ ಶುಕ್ರವಾರ ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದು ವಿದ್ಯಾಭ್ಯಾಸಕ್ಕೆ ಎಲ್ಲಿಲ್ಲದ ಮಹತ್ವ ಇದೆ. ವಿದ್ಯೆ ಇದ್ದರೆ ಮಾತ್ರ ಆತನಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ. ಆಧುನಿಕವಾಗಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಓದಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಕ್ಷಣಾರ್ಧದಲ್ಲಿ ದೊರೆಯುತ್ತವೆ. ಆಧುನಿಕವಾಗಿ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿ ಜೀವನ ಯಾವುದೇ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಮಹತ್ವದ ಕಾಲಘಟ್ಟವಾಗಿದೆ. ಓದುವ ಸಮಯದಲ್ಲಿ ಕಾಲಹರಣ ಮಾಡದೆ ಓದಿನ ಕಡೆಗೆ ಗರಿಷ್ಠ ಗಮನ ಹರಿಸಿ ಜೀವನವನ್ನು ಸಾಕಾರ ಗೊಳಿಸಿಕೊಳ್ಳಬೇಕು. ಪರಿಶ್ರಮ, ಪ್ರಾಮಾಣಿಕತೆ ಮುಂತಾದ ಆದರ್ಶ ಗುಣಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನ ಅತ್ಯಂತ ಶ್ರೇಷ್ಠ ಹಂತವಾಗಿದ್ದು ಈ ಸಮಯದಲ್ಲಿ ಪ್ರತಿಯೊಬ್ಬರು ಓದಿನ ಕಡೆ ಹೆಚ್ಚಿನ ಗಮನಹರಿಸಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಚಾರ್ಯ ಎಸ್ .ಆರ್. ಗದಗ ಮಾತನಾಡಿ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಜೀವನದಲ್ಲಿ ಮಹತ್ವ ಪಡೆದಿದೆ. ಈ ನಿಟ್ಟಿನಲ್ಲಿ ಪರಿಶ್ರಮ ಪಟ್ಟು ಓದಬೇಕು. ಭವಿಷ್ಯದಲ್ಲಿ ಉನ್ನತ ಶಿಕ್ಷಣ ಪಡೆದು ಶ್ರೇಷ್ಠ ಹಾಗೂ ಸತ್ಪ್ರಜೆಯಾಗಿ ಸಮಾಜದಲ್ಲಿ ಗುರುತಿಸಿಕೊಂಡು ಉತ್ತಮ ನಾಗರಿಕರಾಗಿ ಜೀವನ ಸಾಗಿಸುವಂತೆ ಕರೆ ನೀಡಿದರು.
ವೇದಿಕೆ ಮೇಲೆ ಒಕ್ಕೂಟದ ಮುಖ್ಯಸ್ಥೆ ಅಲ್ಕಾ ಪಾಟೀಲ, ಚನ್ನಬಸಪ್ಪ ದೇವಋಷಿ, ವಿನಯ ಐಗಳಿ, ಸಾಕ್ಷಿ ಚವ್ಹಾಣ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಶುಭಂ ಕುರುಬರ, ಸುಪ್ರೀತ ಕಡಹಟ್ಟಿ, ಕುಸುಮಾ ಅಂಗಡಿ, ಪವಿತ್ರಾ ಕೌಜಲಗಿ, ಶಿಕ್ಷಕರಾದ ಸಿ.ಎಮ್.ಪಾಗಾದ, ರಾಮಚಂದ್ರ ಮಗದುಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಪಿ.ಎಸ್. ನಿಡೋಣಿ, ಎಚ್.ಜಿ. ವೀರಗಂಟಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಎಸ್.ಜೆ.ಏಳುಕೋಟಿ ಸಾರಥ್ಯದ 10 ಡ ತರಗತಿ ವಿದ್ಯಾರ್ಥಿಗಳು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದರು.
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಎಸ್ಎಸ್ ಹಲವಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಆರ್. ಪಟ್ಟಣ ಪರಿಚಯಿಸಿದರು. ಪಿ.ಎಸ್.ಚಿಮ್ಮಡ ಮತ್ತು ವಿ.ಐ. ಅಂಗಡಿ ನಿರೂಪಿಸಿದರು.