ಬೆಳಗಾವಿ :ಕಾಂಗ್ರೆಸ್ ಪಕ್ಷದ ಅತ್ಯಂತ ನಿಷ್ಠಾವಂತ ಕಟ್ಟಾಳು ಹಾಗೂ ಮಾಜಿ ಶಾಸಕ ಅಶೋಕ ಪಟ್ಟಣ ಅವರಿಗೆ ರಾಮದುರ್ಗ ವಿಧಾನಸಭಾ ಮತಕ್ಷೇತ್ರದಲ್ಲಿ ಮತ್ತೆ ಟಿಕೆಟ್ ನೀಡಲು ಪಕ್ಷದ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ ಎಂಬ ಮಾಹಿತಿ ಲಭಿಸಿದೆ.
ಅಶೋಕ ಪಟ್ಟಣ ಅವರು ರಾಮದುರ್ಗ ಮತಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರ ಅವಧಿಯಲ್ಲಿ ರಾಮದುರ್ಗ ತಾಲೂಕಿನಲ್ಲಿ ಅನೇಕ ನೀರಾವರಿ ಯೋಜನೆಗಳು ಕಾರ್ಯಗತಗೊಂಡಿದ್ದವು. ಇದು ಸಾಕಷ್ಟು ಪ್ರಮಾಣದಲ್ಲಿ ರೈತರ ಅಭಿವೃದ್ಧಿಗೆ ಕಾರಣವಾಗಿತ್ತು. ಮುಳ್ಳೂರು ಘಾಟ್ ಪ್ರದೇಶವನ್ನು ಪ್ರದೇಶದಲ್ಲಿ ಭಗವಾನ್ ಶಿವನ ಅತ್ಯಂತ ದೊಡ್ಡ ಪ್ರತಿಮೆ ನಿರ್ಮಿಸಿ ಇದನ್ನು ಪ್ರವಾಸಿಗರ ಸ್ವರ್ಗವನ್ನಾಗಿ ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜೊತೆಗೆ ರಾಮದುರ್ಗ ತಾಲೂಕನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕು ಎಂಬ ಕನಸನ್ನು ಇಟ್ಟುಕೊಂಡಿರುವ ಅಭಿವೃದ್ಧಿಪರ ಚಿಂತಕರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತ್ಯಂತ ಆಪ್ತ ಶಿಷ್ಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಅಶೋಕ ಪಟ್ಟಣ ಅವರಲ್ಲಿರುವ ಕ್ರಿಯಾಶೀಲತೆ ಹಾಗೂ ಪಕ್ಷ ಕಟ್ಟುವ ನೈಪುಣ್ಯತೆ ಗಮನಿಸಿ ಹೈಕಮಾಂಡ್ ಮತ್ತೊಮ್ಮೆ ಅವರಿಗೆ ಟಿಕೆಟ್ ನೀಡಲು ಸಮ್ಮತಿಸಿದೆ.
ಕಳೆದ ಬಾರಿ ಕಡಿಮೆ ಅಂತರದಿಂದ ಅಶೋಕ ಪಟ್ಟಣ ಸೋಲು ಅನುಭವಿಸಿದ್ದರು. ಆದರೆ, ಸೋತ ನಂತರ ಕೈಕಟ್ಟಿ ಕುಳಿತುಕೊಳ್ಳದೆ ರಾಮದುರ್ಗ ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಸರಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಲು ಶ್ರಮಿಸಿದ್ದರು. ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರಕಾರ ಹಾಗೂ ನಂತರ ಆಡಳಿತಕ್ಕೆ ಬಂದ ಬಿಜೆಪಿ ಸರಕಾರದ ಅವಧಿಯಲ್ಲಿ ಅಶೋಕ ಪಟ್ಟಣ ಅವರು ಸರಕಾರದ ಮೇಲೆ ಒತ್ತಡ ಹೇರಿ ಅಭಿವೃದ್ಧಿ ಕಾರ್ಯಗಳಿಗೆ ಕಾರಣೀಕರ್ತರಾಗಿದ್ದರು.
ಒಟ್ಟಾರೆ, ರಾಮದುರ್ಗ ತಾಲೂಕನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕು ಎಂಬ ಕನಸು ಕಂಡಿರುವ ಅವರಿಗೆ ಕಾಂಗ್ರೆಸ್ ಪಕ್ಷ ಇದೀಗ ಮತ್ತೊಮ್ಮೆ ಅವಕಾಶ ನೀಡುವ ಮೂಲಕ ಪಟ್ಟಣ ಕುಟುಂಬದ ನಿಷ್ಠೆಗೆ ಮನ್ನಣೆ ನೀಡಿದೆ. ಅಶೋಕ ಪಟ್ಟಣ ತಂದೆ-ತಾಯಿ ರಾಮದುರ್ಗ ತಾಲೂಕಿನ ಶಾಸಕರಾಗಿ ಸಾಕಷ್ಟು ಕೆಲಸ ಮಾಡಿದ್ದರು. ಕಾಂಗ್ರೆಸ್ ಪಕ್ಷದ ಅತ್ಯಂತ ನಿಷ್ಠ ನಾಯಕರಾಗಿ ಗುರುತಿಸಿಕೊಂಡಿರುವ ಹಾಗೂ ರಾಮದುರ್ಗ ತಾಲೂಕಿನಲ್ಲಿ ಬಿಜೆಪಿಯನ್ನು ಸೋಲಿಸುವ ಏಕೈಕ ನಾಯಕರಾಗಿರುವ ಕಾರಣಕ್ಕೆ ಮತ್ತೆ ಅಶೋಕ ಪಟ್ಟಣ ಅವರಿಗೆ ಅವಕಾಶ ಸಿಗುತ್ತಿದೆ.
ಈ ಹಿಂದೆ ಬಿಜೆಪಿ ಸರಕಾರ ಸರಕಾರಕ್ಕೆ ಬಹುಮತದ ಕೊರತೆಯಾದಾಗ ಅಶೋಕ ಪಟ್ಟಣ ಅವರಿಗೆ ಬಿಜೆಪಿಯಿಂದ ಅಹ್ವಾನ ಬಂದಿತ್ತು. ಆದರೆ, ಅದನ್ನು ನಯವಾಗಿಯೇ ನಿರಾಕರಿಸಿದ್ದ ಅಶೋಕ ಪಟ್ಟಣ ತಮ್ಮ ಕಾಂಗ್ರೆಸ್ ಪಕ್ಷದ ನಿಷ್ಠೆಯನ್ನು ವ್ಯಕ್ತಪಡಿಸಿದ್ದರು. ಹೀಗಾಗಿ, ಇವೆಲ್ಲ ಅಂಶಗಳನ್ನು ಗಮನಿಸಿರುವ ಕಾಂಗ್ರೆಸ್ ಪಕ್ಷದ ವರಿಷ್ಠರು ಅವರಿಗೆ ಮತ್ತೊಮ್ಮೆ ಅವಕಾಶ ನೀಡಲು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಜನಜೀವಾಳಕ್ಕೆ ಲಭ್ಯವಾಗಿದೆ.