ಬೆಂಗಳೂರು:
ಶೇಷಾದ್ರಿಪುರ ಠಾಣೆ ಪೊಲೀಸರು ನಟ ಅಹಿಂಸಾ ಚೇತನ್ ಅವರನ್ನು ಇಂದು, ಮಂಗಳವಾರ ಬೆಳಗ್ಗೆ ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಿಂದುತ್ವದ ಬಗ್ಗೆ ನಟ ಚೇತನ್ ಪೋಸ್ಟ್ ಮಾಡಿದ್ದರು. ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ ಎಂದು ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಟ್ವೀಟ್ ಮಾಡಿದ್ದರು. ಜೊತೆಗೆ, ಉರಿಗೌಡ ಮತ್ತು ನಂಜೇಗೌಡ ಅವರ ಬಗ್ಗೆಯೂ ಟ್ವೀಟ್ನಲ್ಲಿ ಬರೆದಿದ್ದರು. ನಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ ಎಂದು ಅವರ ವಿರುದ್ಧ ಪೊಲೀಸ್ ದೂರು ದಾಖಲಾಗಿತ್ತು.
ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ. ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು ಎಂದು ಹೇಳಿದ್ದರು. ಇದು ಒಂದು ಸುಳ್ಳು. 1992ರಲ್ಲಿ: ಬಾಬರಿ ಮಸೀದಿ ರಾಮನ ಜನ್ಮಭೂಮಿ-ಇದು ಒಂದು ಸುಳ್ಳು ಈಗ 2023ರಲ್ಲಿ: ಉರಿಗೌಡ, ನಂಜೇಗೌಡರು ಟಿಪ್ಪುವನ್ನು ಕೊಂದರು-ಇದು ಕೂಡ ಒಂದು ಸುಳ್ಳು
ಎಂದು ಬರೆದಿದ್ದಾರೆ. ಹಾಗೂ ಸತ್ಯದಿಂದ ಹಿಂದುತ್ವವನ್ನು ಸೋಲಿಸಬಹುದು. ಸತ್ಯವೇ ಸಮಾನತೆ ಎಂದು ಪೋಸ್ ಮಾಡಿದ್ದರು. ಈ ಪೋಸ್ಟ್ ವಿರುದ್ಧ ದೂರು ದಾಖಲಾಗಿತ್ತು. ದೂರಿನ ಅನ್ವಯ ಐಪಿಸಿ ಸೆಕ್ಷನ್ 295ಎ, 505ಬಿ ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದ ಅನ್ವಯ ನಟ ಚೇತನ್ ಅಹಿಂಸಾ ಬಂಧಿಸಲಾಗಿದೆ.
ಸದ್ಯ ಚೇತನ್ ಅವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿರುವ ನಗರದ 32ನೇ ಎಸಿಎಂಎಂ ಕೋರ್ಟ್ ಚೇತನ್ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.