ಬೆಂಗಳೂರು :
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇದೀಗ ಹಳೆ ಮೈಸೂರು ಭಾಗದಲ್ಲಿ ಚುನಾವಣೆ ಕಾವೇರತೊಡಗಿದೆ.
ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸದ್ದು ಮಾಡಿರುವ ಎರಡು ಹೆಸರುಗಳೆಂದರೆ, ಉರಿಗೌಡ & ನಂಜೇಗೌಡ. ಟಿಪ್ಪು ಸುಲ್ತಾನ್ ಹತ್ಯೆ ಮಾಡಿದ ವೀರರು ಇವರಿಬ್ಬರು ಎಂದು ಬಿಜೆಪಿ ಹೇಳುತ್ತಿದ್ದರೆ, ಉರಿಗೌಡ & ನಂಜೇಗೌಡ ಎಂಬ ವ್ಯಕ್ತಿಗಳಿಲ್ಲ, ಅವು ಕಾಲ್ಪನಿಕ ಪಾತ್ರಗಳು ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಇದರ ಮೇಲೆ ಸದ್ಯ ರಾಜಕೀಯ ನಾಯಕರು ಕೆಸರೆರಚಾಟಕ್ಕೆ ಮುಂದಾಗಿದ್ದಾರೆ. ಇದೀಗ ಸಚಿವ ಮುನಿರತ್ನ ಅವರು ‘ಉರಿಗೌಡ & ನಂಜೇಗೌಡ’ ಶೀರ್ಷಿಕೆಗಳನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದಾರೆ. ಅವರ ಕುರಿತು ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ‘ಆ ದಿನಗಳು’ ಸಿನಿಮಾ ಖ್ಯಾತಿಯ ನಟ ಚೇತನ್ ಅವರು ಕಾಮೆಂಟ್ ಮಾಡಿದ್ದಾರೆ.
‘ಆ ದಿನಗಳು’ ನಟ ಚೇತನ್ ಹೇಳಿದ್ದೇನು?
ಫೇಸ್ಬುಕ್ನಲ್ಲಿ ಈ ಕುರಿತು ಬರೆದುಕೊಂಡಿರುವ ಚೇತನ್, ‘ಮುನಿರತ್ನ ‘ಉರಿಗೌಡ- ನಂಜೇಗೌಡ’ ಎಂಬ ಶೀರ್ಷಿಕೆಯನ್ನು ನೋಂದಾಯಿಸಿದ್ದಾರೆ ಮತ್ತು ಕಾಲ್ಪನಿಕ ಜೋಡಿಯ ಮೇಲೆ ಚಲನಚಿತ್ರ ಮಾಡಲು ಉದ್ದೇಶಿಸಿದ್ದಾರೆ. ಸಿನಿಮಾ ಸಾಮಾನ್ಯವಾಗಿ ‘ಮಾಯಾ ಪ್ರಪಂಚ’ ಆಗಿದ್ದು ಅದು ಪ್ರೇಕ್ಷಕರನ್ನು ಕಪೋಲಕಲ್ಪಿತ ಸನ್ನಿವೇಶಗಳು ಮತ್ತು ಜೀವನಕ್ಕಿಂತ ದೊಡ್ಡ ಹಿಂಸೆಯ ಮೂಲಕ ರಂಜಿಸುತ್ತದೆ. ಫ್ಯಾಂಟಸಿ ಟ್ಯಾಗ್ ಟೀಮ್ ಉರಿ-ನಂಜೆ ಕನ್ನಡ ಚಲನಚಿತ್ರೋದ್ಯಮಕ್ಕೆ ಹೇಳಿ ಮಾಡಿಸಿದಂತೆ ಇದೆ..’ ಎಂದು ಹೇಳಿದ್ದಾರೆ.
ನಿರ್ಮಾಪಕರಾಗಿಯೂ ಹೆಸರು ಮಾಡಿರುವ ಸಚಿವ ಮುನಿರತ್ನ ಅವರು ಮಾರ್ಚ್ 16ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಉರಿಗೌಡ ನಂಜೇಗೌಡ’ ಟೈಟಲ್ ನೋಂದಾಯಿಸಿದ್ದರು. ಶೀರ್ಷಿಕೆ ನೋಂದಾಯಿಸಿದ್ದ ರಶೀದಿಯ ಫೋಟೋಗಳನ್ನು ಟ್ವೀಟ್ ಮಾಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ‘ಕಲ್ಪಿತ ಕಥೆ, ಸುಳ್ಳುಗಳಿಂದಲೇ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತಿ ಕರ್ನಾಟಕವನ್ನು ಅಲ್ಲೋಲ ಕಲ್ಲೋಲ ಮಾಡುತ್ತಿರುವ BJP ವಕ್ರದೃಷ್ಟಿ ಸದ್ಯಕ್ಕೆ ಒಕ್ಕಲಿಗರ ಮೇಲೆ ಬಿದ್ದಿದೆ. ಸ್ವಾಭಿಮಾನಿ ಒಕ್ಕಲಿಗರನ್ನು ಹೇಗಾದರೂ ಹಳ್ಳ ಹಿಡಿಸಲೇ ಬೇಕೆಂಬ ಹಿಡೆನ್ ಅಜೆಂಡಾ ಬಿಜೆಪಿಗೆ ಇರುವುದಂತೂ ಸತ್ಯ..’ ಎಂದು ಕಿಡಿ ಕಾರಿದ್ದರು.
ನಿರ್ಮಾಪಕರಾಗಿ ಹೆಸರು ಮಾಡಿರುವ ಮುನಿರತ್ನ
ಸಚಿವ ಮುನಿರತ್ನ ಅವರು ರಾಜಕೀಯ ರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಸಿನಿಮಾ ನಿರ್ಮಾಪಕರಾಗಿದ್ದರು. ವೃಷಭಾದ್ರಿ ಪ್ರೊಡಕ್ಷನ್ ಬ್ಯಾನರ್ ಮೂಲಕ 2001ರಲ್ಲಿ ‘ಆಂಟಿ ಪ್ರೀತ್ಸೆ’ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. 2002ರಲ್ಲಿ ‘ಕಂಬಾಲಹಳ್ಳಿ’ ಸಿನಿಮಾವನ್ನು ಮುನಿರತ್ನ ನಿರ್ಮಿಸಿದ್ದರು. ವಿಶೇಷವೆಂದರೆ, ಈ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಮುನಿರತ್ನ ಅವರೇ ಬರೆದಿದ್ದರು. ಮತ್ತೊಂದು ವಿಶೇಷವೆಂದರೆ, ಆ ಸಾಲಿನ ಅತ್ಯುತ್ತಮ ಕಥೆ ರಾಜ್ಯ ಪ್ರಶಸ್ತಿಯು ಮುನಿರತ್ನ ಅವರಿಗೆ ಲಭಿಸಿತ್ತು!
ಆನಂತರ ಉಪೇಂದ್ರ, ರಮ್ಯಾ ಕಾಂಬಿನೇಷನ್ನಲ್ಲಿ ‘ಕಠಾರಿವೀರ ಸುರಸುಂದರಾಂಗಿ’ ಸಿನಿಮಾವನ್ನು 3ಡಿ ರೂಪದಲ್ಲಿ ಮಾಡಿದರು. ಬಹುತಾರಾಗಣದ ‘ಕುರುಕ್ಷೇತ್ರ’ ಸಿನಿಮಾವನ್ನು ದುಬಾರಿ ವೆಚ್ಚದಲ್ಲಿ ನಿರ್ಮಿಸಿದ್ದರು. ಈಗ ವೃಷಭಾದ್ರಿ ಪ್ರೊಡಕ್ಷನ್ ಬ್ಯಾನರ್ನಲ್ಲಿ ‘ಉರಿಗೌಡ ನಂಜೇಗೌಡ’ ಟೈಟಲ್ ರಿಜಿಸ್ಟರ್ ಆಗಿದೆ.