ಬೆಳಗಾವಿ :
7ನೇ ವೇತನ ಆಯೋಗ ಜಾರಿ ಮತ್ತು ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವಂತೆ ಆಗ್ರಹಿಸಿ ಮಾರ್ಚ್ 1 ರಿಂದ ಸರಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದಾರೆ. ಇದನ್ನು ಬೆಂಬಲಿಸುವುದಾಗಿ ಶಿಕ್ಷಕ ಸಂಘಟನೆಯ ಎಸ್ ಎಸ್ ಮಠದ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ರಾಮು ಗುಗವಾಡ, ಸಲೀಂ ಧಾರವಾಡಕರ, ಎ.ಎಂ.ಕೋರಿಶೆಟ್ಟಿ ಅವರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ, ಬೆಳಗಾವಿ ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘಟನೆಗಳು ಈ ಮುಷ್ಕರ ಬೆಂಬಲಿಸಲಿದೆ. ಶಿಕ್ಷಕರು ಹಲವು ವರ್ಷಗಳಿಂದ ಜ್ವಲಂತ ಸಮಸ್ಯೆಗಳಿಂದ ನಲುಗುತ್ತಿದ್ದಾರೆ. ಈ ಸಮಸ್ಯೆಗಳಿಗೆ ಸರಕಾರ ತಾರ್ಕಿಕ ಅಂತ್ಯ ಹಾಡಬೇಕಾಗಿದೆ. ತಕ್ಷಣ ಶಿಕ್ಷಕರು ಸೇರಿದಂತೆ ಸರಕಾರಿ ನೌಕರರ ಬಹುದಿನಗಳ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ನಮ್ಮ ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ಸ್ಪಷ್ಟ ಅರಿವು ಇದೆ. ಆದರೆ ಅವುಗಳನ್ನು ಪರಿಹರಿಸದೆ ಹಾಗೆ ಬಿಟ್ಟಿದೆ. ಇದರಿಂದ ನೌಕರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬುಧವಾರದಿಂದ ಸರಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಅನಿರ್ದಿಷ್ಟ ಅವಧಿ ಪ್ರತಿಭಟನೆ ನಡೆಸಬೇಕು. ನೌಕರರು ಈ ಮೂಲಕ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಸಂಘಟನೆ ವಿನಂತಿಸಿದ್ದಾರೆ.