ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಕನಸಿನ ಯೋಜನೆ ಸಾಕಾರಕ್ಕೆ ದಿನಗಣನೆ
ಮಾರ್ಚ್ 4, 5ರಂದು ವೈವಿದ್ಯಮಯ ಕಾರ್ಯಕ್ರಮ; ರಾಜಹಂಸಗಡದಲ್ಲಿ ಹಬ್ಬ
ಕರ್ನಾಟಕ, ಮಹಾರಾಷ್ಟ್ರದ ಗಣ್ಯಾತಿ ಗಣ್ಯರ ಆಗಮನ
ಬೆಳಗಾವಿ :
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಕನಸಿನ ಯೋಜನೆ ಸಾಕಾರಗೊಳ್ಳಲು ದಿನಗಣನೆ ಆರಂಭವಾಗಿದೆ. ಬೆಳಗಾವಿ ಹೊರವಲಯದ ರಾಜಹಂಸಗಡದಲ್ಲಿ ನಿರ್ಮಾಣವಾಗಿರುವ, ರಾಷ್ಟ್ರದಲ್ಲೇ ಬೃಹತ್ ಆಗಿರುವ ಛತ್ರಪತಿ ಶಿವಾಜಿ ಮಹಾರಾಜ ಭವ್ಯ ಮೂರ್ತಿ ಅನಾವರಣಕ್ಕೆ ಮುಹೂರ್ತ ನಿಗದಿಯಾಗಿದೆ. ತನ್ನಿಮಿತ್ತ ಮಾರ್ಚ್ 4 ಮತ್ತು 5ರಂದು 2 ದಿನಗಳ ಕಾಲ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ರಾಜಹಂಸಗಡ ಕೋಟೆ ಆವರಣದಲ್ಲಿ ಹಬ್ಬದ ಸಂಭ್ರಮ ನಿರ್ಮಾಣವಾಗಲಿದೆ.
ಮಾರ್ಚ್ 5ರಂದು ಬೆಳಗ್ಗೆ 10 ಗಂಟೆಗೆ 50 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಅನಾವರಣಗೊಳ್ಳಲಿದೆ. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ನಾಯಕರೂ, ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ, ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಯುವರಾಜ ಸಂಭಾಜಿರಾಜೇ ಛತ್ರಪತಿ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ, ಹಾಲಿ ವಿಧಾನಪರಿಷತ್ ಸದಸ್ಯ ಸತೇಜ್ (ಬಂಟಿ) ಪಾಟೀಲ, ಖ್ಯಾತ ಮರಾಠಿ ನಟ ಹಾಗೂ ಲೋಕಸಭಾ ಸದಸ್ಯ ಡಾ. ಅಮೋಲ್ ಕೋಲ್ಲೆ, ಲಾತೂರು ಗ್ರಾಮೀಣ ಶಾಸಕ ಧೀರಜ್ ದೇಶಮುಖ್, ಖ್ಯಾತ ಚಿತ್ರನಟ ರಿತೇಶ ದೇಶಮುಖ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
60 ಅಡಿ ಎತ್ತರದ ಎಲೆಕ್ಟ್ರಿಕ್ ಧ್ವಜಸ್ಥಂಭ ಕೂಡ ಇದೇ ಸಂದರ್ಭದಲ್ಲಿ ಉದ್ಘಾಟನೆಗೊಳ್ಳಲಿದೆ. ರಾಜಹಂಸಗಡ ಕೋಟೆಯನ್ನು ಅಭೂತಪೂರ್ವವಾಗಿ ಶೃಂಗರಿಸಲಾಗಿದ್ದು,ಹೊಸದಾಗಿ ಮಹಾದ್ವಾರ, ಕಿಲ್ಲಾದ್ವಾರಗಳ ನಿರ್ಮಾಣ ಮಾಡಲಾಗಿದೆ. ಕೋಟೆ ಆವರಣದಲ್ಲಿರುವ ಸಿದ್ದೇಶ್ವರ ಮಂದಿರವನ್ನು ಆಕರ್ಷಕವಾಗಿ ಜೀರ್ಣೋದ್ಧಾರ ಮಾಡಲಾಗಿದೆ.
ಮಾರ್ಚ್ 4ರಂದೇ ವಿವಿಧ ಧಾರ್ಮಿಕ, ಪಾರಂಪರಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, 2 ದಿನಗಳ ಕಾಲ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಬೆಳಗಾವಿ ಇತಿಹಾಸದಲ್ಲೇ ವೈಶಿಷ್ಠ್ಯಪೂರ್ಣವಾದ ಲೇಸರ್ ಶೋ, ಕ್ರ್ಯಾಕರ್ ಶೋ ಸಹ ನಡೆಯಲಿದೆ. ಪಾಲಕಿ ಉತ್ಸವ, ಪೋವಾಡಾ (ಕೀರ್ತನೆ), ಡೋಲ್ ತಾಶಾ ನೃತ್ಯ, ಮರದಾನಿ ಖೇಳ ಮೊದಲಾದ ಪಾರಂಪರಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.
ಐತಿಹಾಸಿಕ ರಾಜಹಂಸಗಡ ಕೋಟೆಯನ್ನು ಸುಂದರ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು, ಅಲ್ಲಿ ಬೃಹತ್ ಶಿವಾಜಿ ಮಹಾರಾಜರ ಪುತ್ಥಳಿ ಪ್ರತಿಷ್ಠಾಪಿಸಬೇಕೆನ್ನುವುದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಬಹುಕಾಲದ ಕನಸಾಗಿತ್ತು. ಅದು ಈಗ ಅದ್ಧೂರಿ ಕಾರ್ಯಕ್ರಮದ ಮೂಲಕ ನನಸಾಗುತ್ತಿದೆ.