ಬೆಳ್ತಂಗಡಿ:
ಮೆಟ್ಟಿಲುಗಳ ಸಹಾಯ ಪಡೆಯದೆ ಚಿತ್ರದುರ್ಗದ ಕೋತಿರಾಜ್ ಖ್ಯಾತಿಯ ಜ್ಯೋತಿರಾಜ್ ಕೇವಲ ಎರಡೇ ತಾಸುಗಳಲ್ಲಿ ಜಮಾಲಾಬಾದ್ ಪರ್ವತ(ಗಡಾಯಿಕಲ್ಲು) ಏರಿ ಸಾಹಸ ಮೆರೆದಿದ್ದಾರೆ.
ಸುರಕ್ಷತೆಯ ದೃಷ್ಟಿಯಿಂದ ಸೊಂಟಕ್ಕೆ ರೋಪ್ ಅಳವಡಿಸಿಕೊಂಡಿದ್ದ ಅವರು, ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿರುವ ಪರ್ವತವನ್ನು ಕೇವಲ ಕೈಗಳ ಸಹಾಯದಿಂದ ನಿರಾತಂಕವಾಗಿ ಅವರು ಹತ್ತಿ ಬಂದಿದ್ದಾರೆ.
ಗಡಾಯಿಕಲ್ಲು ಹತ್ತಲು ಎರಡು ತಾಸು ಪಡೆದುಕೊಂಡ ಜ್ಯೋತಿರಾಜ್ ಹತ್ತುವ ನಡುವೆ ನಾಲ್ಕು ಕಡೆ ಕಲ್ಲಿನ ಪೊಟರೆ ಹಾಗೂ
ಮರಗಳಲ್ಲಿ ಅರ್ಧ ಗಂಟೆ ಅವಧಿ ವಿಶ್ರಾಂತಿ ಪಡೆದಿರುವುದಾಗಿ
ತಿಳಿಸಿದ್ದಾರೆ. ಗಡಾಯಿಕಲ್ಲು ಹತ್ತಿದ ಬಳಿಕ ಅರ್ಧ ತಾಸು ವಿಶ್ರಾಂತಿ ಪಡೆದು ಮಾಮೂಲು ಮೆಟ್ಟಿಲಿನ ಮೂಲಕ ಕೆಳಗಿಳಿದು ಬಂದರು.
ಜ್ಯೋತಿರಾಜ್ ಪರ್ವತ ಏರುತ್ತಿದ್ದಂತೆ ವೀಕ್ಷಿಸಲು ದೇವಸ್ಥಾನದ ಸುತ್ತಮುತ್ತ ನೂರಾರು ಮಂದಿ ಸೇರಿದ್ದರು. ಭಾನುವಾರ ಬೆಳಿಗ್ಗೆ 9.50ಕ್ಕೆ ಪರ್ವತ ಏರಲು ಪ್ರಾರಂಭಿಸಿದ ಅವರು 11.50ಕ್ಕೆ ಗಡಾಯಿಕಲ್ಲು ತುದಿಯನ್ನು ತಲುಪಿದ್ದಾರೆ. ಪರ್ವತದ ತುದಿಯಲ್ಲಿ ಕನ್ನಡ ಬಾವುಟ ಹಾರಿಸಿ ತಮ್ಮ ಬಹುದಿನದ ಆಸೆಯನ್ನು ಪೂರೈಸಿಕೊಂಡರು.
ಕುದುರೆಮುಖ ವನ್ಯಜೀವಿ ವಿಭಾಗದ ಆರ್ಎಫ್ಒ. ಸ್ವಾತಿ, ಅರಣ್ಯ
ರಕ್ಷಕ ಕಿರಣ್ ಪಾಟೀಲ್ ಉಪಸ್ಥಿತರಿದ್ದರು. ಚಿತ್ರದುರ್ಗದಿಂದ ಬಂದ ಬಸವರಾಜ್, ರಾಜಶೇಖರ್, ಪವನ್ ಜೋಸ್, ನಿಂಗರಾಜು, ಮದನ್, ನವೀನ್, ಅಭಿ ಹಾಗೂ ಪವನ್ ಕುಮಾರ್, ಲಾಯಿಲ ಗ್ರಾಮ ಪಂಚಾಯಿತಿ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ, ಶೌರ್ಯ ವಿಪತ್ತು ತಂಡದ ಸದಸ್ಯರು ಅವರಿಗೆ ಸಹಕಾರ ನೀಡಿದರು.