ಆಧ್ಯಾತ್ಮಿಕ ತಳಹದಿ ಮೇಲೆ ರಾಮಕೃಷ್ಣ ಆಶ್ರಮ ನಿಂತಿದೆ. ಸ್ವಾಮಿ ವಿವೇಕಾನಂದರು ತೋರಿದ ಮಾರ್ಗದಲ್ಲಿ ಸಾಗಿದರೆ ಯಾರೊಬ್ಬರೂ ತಮ್ಮ ಜೀವನದಲ್ಲಿ ವೈಫಲ್ಯತೆ ಅನುಭವಿಸಲು ಸಾಧ್ಯವೇ ಇಲ್ಲ. ರಾಮಕೃಷ್ಣ ಮಿಷನ್ ಆಶ್ರಮದ ಸ್ವಾಮಿ ಪುರುಷೋತ್ತಮನಂದರ ಭಾಷಣ ಕೇಳಿದ ನಂತರ ನನ್ನ ಜೀವನವೇ ಬದಲಾಯಿತು ಎಂದು ಕುಡಚಿ ಶಾಸಕ ಪಿ. ರಾಜೀವ ಹೇಳಿದರು.
ಬೆಳಗಾವಿ :
ಜೀವನದಲ್ಲಿ ಸ್ಪಷ್ಟ ಗುರಿ- ಉದ್ದೇಶ ಇಟ್ಟುಕೊಳ್ಳಬೇಕು. ದೈಹಿಕವಾಗಿ ಯಾವುದೇ ನ್ಯೂನತೆ ಇದ್ದರೂ ಅದನ್ನು ಬದಿಗೊತ್ತಿ ಸಾಧನೆ ಮಾಡುವಂತೆ ಅಂತರಾಷ್ಟ್ರೀಯ ಪ್ಯಾರಾ ಅಥ್ಲೇಟ್ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಮಾಲತಿ ಹೊಳ್ಳ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಕೋಟೆ ಆವರಣದ ಶ್ರೀ ರಾಮಕೃಷ್ಣ ಮಿಷನ್ ಆಶ್ರಮದ ಶ್ರೀ ರಾಮಕೃಷ್ಣ ವಿಶ್ವಭಾವೈಕ್ಯ ಮಂದಿರದ ಪ್ರತಿಷ್ಠಾಪನೆಯ ಸ್ಮರಣಾರ್ಥ 19ನೇ ವಾರ್ಷಿಕೋತ್ಸವದಲ್ಲಿ ಶುಕ್ರವಾರ ಯುವ ಸಮ್ಮೇಳನದಲ್ಲಿ ಸವಾಲುಗಳು ಸಾಧನೆಯ ಮೆಟ್ಟಿಲುಗಳು ವಿಷಯವಾಗಿ ಮಾತನಾಡಿದರು.
ನಾನು ಪೋಲಿಯೋದಿಂದ ದೈಹಿಕವಾಗಿ ಸಾಕಷ್ಟು ನ್ಯೂನತೆ ಹೊಂದಿರುವೆ. ನನ್ನಿಂದಾಗಿ ಹೆತ್ತವರು ಅನುಭವಿಸಿದ ತೊಂದರೆ ಹೇಳತೀರದು. ಆದರೆ, ನನ್ನ ದೈಹಿಕ ನ್ಯೂನತೆ ಬಗ್ಗೆ ಕೊರಗದೆ ಜೀವನದಲ್ಲಿ ಸಾಧನೆ ಮಾಡಬೇಕು ಎಂಬ
ಛಲದಿಂದ ಓದಿದೆ. ಎಸ್ ಎಸ್ ಎಲ್ ಸಿಯಲ್ಲಿ ಡಿಸ್ಟಿಂಗ್ಶನ್ ನಲ್ಲಿ ಪಾಸ್ ಆದೆ. ಎಲ್ಲಾ ಮಾನವರಿಗೆ ಏನಾದರೂ ಸಮಸ್ಯೆ ಇದ್ದೆ ಇರುತ್ತದೆ. ಆದರೆ, ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಬೇಕು ಎಂದು ಹೇಳಿದರು.
ನಾನು ದೇಹದ ಒಂದು ಭಾಗ ಮಾತ್ರ ಶಕ್ತಿ ಕಳೆದುಕೊಂಡಿದ್ದೇನೆ. ದೇಹದ ಬೇರಾವ ಭಾಗಕ್ಕೆ ಅಂತಹ ತೊಂದರೆ ಇಲ್ಲ. ಮಾನಸಿಕವಾಗಿ ನಾನು ಶಕ್ತಿವಂತೆ. ಇದರಿಂದ ನಾನು ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಮೈಲುಗಲ್ಲು ಸಾಧಿಸಿದೆ. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಸಾಧನೆ ಮಾಡಲು ಸಾಧ್ಯವಾಗಿ ದೇಶಕ್ಕೆ ಕೀರ್ತಿ ತಂದೆ ಎಂದು ಅವರು ಹೇಳಿದರು.
ಯಾವುದೇ ಕ್ಷೇತ್ರವಾಗಿರಲಿ. ನಮ್ಮಲ್ಲಿ ಗುರಿ ಇರಬೇಕು. ಯಾವುದೇ ಕನಸು ಇದ್ದರೂ ಅದರ ಗುರಿ ಮುಟ್ಟುವ ತನಕ ತಲುಪಬೇಕು. ಬಲಯುತವಾದ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಆತ್ಮಸೈರ್ಯ ಮೈಗೂಡಿಸಿಕೊಳ್ಳಬೇಕು.
ಬೇರೆಯವರ ಜತೆ ನಮ್ಮನ್ನು ಹೋಲಿಸಿಕೊಳ್ಳುವ ಬದಲಾಗಿ ನಾವೇ ಮಾದರಿಯಾಗಿ ಬದುಕಬೇಕು ಎಂದು ಹೇಳಿದರು.
ನಮ್ಮನ್ನು ನಾವು ತಿದ್ದುಕೊಳ್ಳಬೇಕು. ನಮ್ಮಲ್ಲಿರುವ ಆತ್ಮಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಬೇಕು. ಜೀವನವನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಿರಿಯರು, ಸಮಾಜವನ್ನು ಗೌರವದಿಂದ ನೋಡಿಕೊಳ್ಳಬೇಕು ಎಂದರು.
ನನ್ನ ತಂದೆ ಶಿಕ್ಷಣಪ್ರೇಮಿ. ಅವರ ಆಶಯದಂತೆ ನಾನು ನನ್ನದೇ ಆದ ಸಂಸ್ಥೆ ಆರಂಭಿಸಿದೆ. 15 ವರ್ಷಗಳ ಹಿಂದೆ ಎರಡು ಮಕ್ಕಳಿಂದ ಆರಂಭಗೊಂಡ ಸಂಸ್ಥೆಯಲ್ಲಿ 53 ಮಕ್ಕಳು ಕಲಿಯುತ್ತಿದ್ದಾರೆ. ಅವರೂ ದೈಹಿಕವಾಗಿ ಎಷ್ಟೇ ನ್ಯೂನತೆಯಿದ್ದರೂ ಅದನ್ನು ಎದುರಿಸಿ ಉನ್ನತ ಶಿಕ್ಷಣ ಪಡೆದಿದ್ದಾರೆ ಎನ್ನಲು ನನಗೆ ಹೆಮ್ಮೆಯಾಗುತ್ತದೆ ಎಂದರು.
ವಿದ್ಯಾರ್ಥಿ ಜೀವನದ ಅತ್ಯಂತ ಸುಂದರ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನೀವು ಸಹಾ ಚೆನ್ನಾಗಿ ಓದಬೇಕು. ನಿಮ್ಮ ತಂದೆ-ತಾಯಿ, ಗುರುಗಳ ಅಸೆಯಂತೆ ಉನ್ನತ ಶಿಕ್ಷಣ ಪಡೆದು ಸಾಧನೆ ಮಾಡಿ ಎಂದು ಹೇಳಿದರು.
ಯುವಕರಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಆಧ್ಯಾತ್ಮ ವಿಷಯವಾಗಿ
ಕುಡಚಿ ಶಾಸಕ ಪಿ.ರಾಜೀವ ಮಾತನಾಡಿ, ಅಧ್ಯಾತ್ಮಿಕ ತಳಹದಿಯ ಮೇಲೆ ರಾಮಕೃಷ್ಣ ಮಿಷನ್ ಆಶ್ರಮ ನಿಂತಿದೆ. ಜೀವನ ರೂಪಿಸಿಕೊಳ್ಳಲು ಪೂರಕ ಮಾರ್ಗದರ್ಶನ ಇಲ್ಲಿ ಸಿಗುತ್ತದೆ ಎಂದು ಹೇಳಿದರು.
ದೇಶದ ಹಿಂದುಳಿಯುವಿಕೆಗೆ ಮೆಕಾಲೆ ಕಾಲದ ನಮ್ಮ ಶಿಕ್ಷಣ ವ್ಯವಸ್ಥೆಯೇ ಕಾರಣ. ನೂತನ ರಾಷ್ಟ್ರೀಯ ನೀತಿಯನ್ನು ಇದೀಗ ಅಳವಡಿಸಿಕೊಂಡಿದ್ದೇವೆ. ವೈಜ್ಞಾನಿಕ ದೃಷ್ಟಿಕೋನಕ್ಕೆ ತಕ್ಕಂತೆ ಶಿಕ್ಷಣ ನೀತಿ ರೂಪುಗೊಂಡಿದೆ. ಇದರಿಂದಾಗಿ ಭವಿಷ್ಯದಲ್ಲಿ ಭಾರತದ ಚಿತ್ರಣವೇ ಬದಲಾಗಲಿದೆ ಎಂದು ಹೇಳಿದರು.
ವೈಜ್ಞಾನಿಕ ಚಿಂತನೆ ಜತೆಗೆ ಅಧ್ಯಾತ್ಮಿಕ ದೃಷ್ಟಿ ಇರಬೇಕು.
ಜಗತ್ತಿಗೆ ಅಧ್ಯಾತ್ಮಿಕ ಸಾರಿ ಹೇಳಿದ್ದು ನಮ್ಮ ಭಾರತ. ಬಿಸಿರಕ್ತದ ಯುವಕರು ವೈಜ್ಞಾನಿಕ ಚಿಂತನೆ ಮೂಲಕ ಅಧ್ಯಾತ್ಮಿಕ ಹಾದಿಯಲ್ಲಿ ಸಾಗಬೇಕು. ಇಂದಿನ ಯುವಕರು ಅವುಗಳನ್ನು ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದಾರೆ ಎನ್ನುವುದೇ ಬಹು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ನಮ್ಮಲ್ಲಿರುವ ಲೋಪ ದೋಷ ಮಕ್ಕಳನ್ನು ಸರಿಪಡಿಸಿಕೊಂಡು ವಿದ್ಯಾರ್ಥಿ ಜೀವನವನ್ನು ವ್ಯರ್ಥವಾಗಿ ಕಳೆಯದೆ ಸ್ವಾಮಿ ವಿವೇಕಾನಂದರು ತೋರಿದ ಮಾರ್ಗದಲ್ಲಿ ಮುನ್ನುಗ್ಗಬೇಕು ಎಂದು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ನಾನು
ರಾಮಕೃಷ್ಣ ಮಿಷನ್ ಆಶ್ರಮದ ಸ್ವಾಮಿ ಪುರುಷೋತ್ತಮನಂದರ ಭಾಷಣ ಕೇಳಿದೆ. ಇದರಿಂದ ನನ್ನ ಜೀವನವೇ ಬದಲಾಯಿತು. ವಿವೇಕಾನಂದರು ತೋರಿದ ಮಾರ್ಗದಲ್ಲಿ ಸಾಗಿದರೆ ಯಾರೊಬ್ಬರು ತಮ್ಮ ಜೀವನದಲ್ಲಿ ವೈಫಲ್ಯತೆ ಅನುಭವಿಸಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು.
ನಿಮ್ಮ ಚಿಂತನೆ ವೈಜ್ಞಾನಿಕವಾಗಿ ಇರಲಿ. ಧ್ಯಾನ ಅಳವಡಿಸಿಕೊಳ್ಳಿ. ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿ. ಬದುಕಿನ ಯಶೋಗಾಥೆ ಕಟ್ಟಿಕೊಳ್ಳುವುದು ನಿಮ್ಮ ಮೇಲೆ ಇದೆ. ಪ್ರಕೃತಿ ತಂದೊಡ್ಡುವ ಸವಾಲು ಎದುರಿಸಿ ಮುನ್ನಡೆಯಬೇಕು ಎಂದು ಅವರು ಹೇಳಿದರು.
ಸಿಂಹದ ಹೃದಯದ ಮೇಲೆ ಧ್ಯಾನಿಸು ವಿಷಯವಾಗಿ ಬೆಂಗಳೂರು ಶಿವನಹಳ್ಳಿ ರಾಮಕೃಷ್ಣ ಮಿಷನ್ ಸ್ವಾಮಿ
ಮಂಗಳಾನಾಥ ಮಹಾರಾಜ ಮಾತನಾಡಿ,
ಪ್ರತಿ ಸವಾಲು ಎದುರಿಸಿ. ಕಷ್ಟಗಳನ್ನು ಎದುರಿಸಿ ನಿಲ್ಲಿ. ಆಗ ನಿಮ್ಮೆಲ್ಲರ ಜೀವನದ ಚಿತ್ರಣವೇ ಬದಲಾಗುತ್ತದೆ ಎಂದು ಹೇಳಿದರು.