ಬೆಳಗಾವಿ ಮಹಾನಗರದ ನೂತನ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿರುವ ಶೇಖರ್ ಎಚ್.ಟಿ. ಅತ್ಯಂತ ಕ್ರಿಯಾಶೀಲ ಅಧಿಕಾರಿಯಾಗಿ ಗಮನ ಸೆಳೆದವರು. ತಾವು ಕರ್ತವ್ಯ ವಹಿಸಿದ ಸ್ಥಳದಲ್ಲೆಲ್ಲ ಅತ್ಯಂತ ಸೇವಾನಿಷ್ಠರಾಗಿ ಖಡಕ್ ಹಾಗೂ ಸ್ನೇಹಶೀಲ ವ್ಯಕ್ತಿತ್ವದಿಂದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಬೆಳಗಾವಿ : ಜನ ಜೀವಾಳ ಜಾಲ
ಬೆಳಗಾವಿ ನಗರಕ್ಕೆ ಕಾನೂನು ಹಾಗೂ ಸುವ್ಯವಸ್ಥೆ ಪೊಲೀಸ್ ಉಪ ಆಯುಕ್ತ (ಡಿಸಿಪಿ)ಯಾಗಿ ಶೇಖರ್ ಎಚ್.ಟಿ. ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಹಿಂದೆ ಡಿಸಿಪಿಯಾಗಿದ್ದ ರವೀಂದ್ರ ಗಡಾದಿ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿ ಶೇಖರ್ ಎಚ್.ಟಿ.ಅವರನ್ನು ಬೆಳಗಾವಿಗೆ ನಿಯೋಜಿಸಿದೆ. ಬೆಳಗಾವಿ ರಾಜ್ಯದಲ್ಲಿ ಅತ್ಯಂತ ದೊಡ್ಡ ಜಿಲ್ಲೆ. ಜೊತೆಗೆ ಬೆಳಗಾವಿ ಮಹಾನಗರ ಮೂರು ರಾಜ್ಯಗಳ ಕೇಂದ್ರಬಿಂದು. ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾಗಳಿಂದ ಕೇಂದ್ರಿತವಾಗಿದ್ದು ಕಾನೂನು- ಸುವ್ಯವಸ್ಥೆ ಕಾಯ್ದುಕೊಂಡು ಹೋಗುವ ನಿಟ್ಟಿನಲ್ಲಿ ಬೆಳಗಾವಿ ಮಹಾನಗರ ಆಯುಕ್ತರ ಕಚೇರಿಯ ಹೊಣೆಗಾರಿಕೆ ಅತ್ಯಂತ ಮಹತ್ವದಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರದ ಜನತೆ ನೂತನ ಪೊಲೀಸ್ ಉಪ ಆಯುಕ್ತರ ಮೇಲೆ ಹೆಚ್ಚಿನ ಆಶಾಭಾವ ಹೊಂದಿದೆ. ನೂತನ ಉಪಯುಕ್ತರು ಬೆಳಗಾವಿ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಹೆಚ್ಚಿನ ಪರಿಶ್ರಮ ವಹಿಸಿ ಜನತೆಯ ವಿಶ್ವಾಸ ಗಳಿಸಲಿ ಎನ್ನುವುದು ಜನತೆಯ ಒತ್ತಾಸೆಯಾಗಿದೆ.
ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಿದ್ದ ಅನುಭವಿ :ಬಾಗಲಕೋಟೆ ಜಿಲ್ಲೆ ಬೀಳಗಿ ಮೂಲದವರಾದ ಶೇಖರ್ ಎಚ್.ಟಿ. ಅವರು ಬೆಂಗಳೂರು, ಶಿವಮೊಗ್ಗ, ಹಿರಿಯೂರು, ತೀರ್ಥಹಳ್ಳಿ, ಮೈಸೂರಿನಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ನುರಿತ ಅನುಭವಿಯಾಗಿದ್ದಾರೆ. ಕಳೆದ ಚುನಾವಣೆ ವೇಳೆ ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ್ದ ಅನುಭವದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮತ್ತೆ ಅವರನ್ನು ಬೆಳಗಾವಿ ಮಹಾನಗರ ಕಮಿಷನರೇಟ್ ಗೆ ಹೊಸ ಹೊಣೆಗಾರಿಕೆ ನೀಡಿ ವರ್ಗಾವಣೆಗೊಳಿಸಿರುವುದು ಗಮನಾರ್ಹ ಸಂಗತಿ.