ತತ್ತ್ವಜ್ಞಾನದ ಶಿಖರ ಸೂರ್ಯ ಸ್ವಾಮಿ ವಿವೇಕಾನಂದ : ಡಾ. ದೇವರಾಜ
ಬೆಳಗಾವಿ :
ಭಾರತದ ಅಂತಃಶಕ್ತಿ, ಅಂತಃಕರಣವನ್ನು ಬಡಿದೆಬ್ಬಿಸಿ, ದೀನ-ದಲಿತರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದವರು ಸ್ವಾಮಿ ವಿವೇಕಾನಂದರು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವ್ಯವಹಾರ ನಿರ್ವಹಣಾ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ. ದೇವರಾಜ ಅಭಿಪ್ರಾಯಪಟ್ಟರು.
ನಗರದ ಗುರು ವಿವೇಕಾನಂದ ವಿವಿಧೋದ್ದೇಶ ಸಹಕಾರ ಸಂಘದ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದರ 161 ನೇ ಜಯಂತಿಯಲ್ಲಿ ಅವರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ವಿವೇಕಾನಂದರು ಪರಂಪರಾಗತವಾಗಿ ನಡೆದು ಬಂದ ಭಾರತೀಯ ಆಧ್ಯಾತ್ಮಿಕ ರಂಗದಲ್ಲಿ ಹೊಸ ಸಂಚಲನ ಮೂಡಿಸಿ ಬದಲಾವಣೆಗೆ ಮುನ್ನುಡಿ ಬರೆದರು. ಸನಾತನ ಹಿಂದೂ ಧರ್ಮದ ಸಂಸ್ಕೃತಿಯ ಶ್ರೇಷ್ಠತೆಯನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ ಮೊದಲ ವೀರ ಸಂನ್ಯಾಸಿಯಾದರು. ಪ್ರವಚನಗಿಂತಲೂ ಕಾರ್ಯರೂಪದಲ್ಲಿ ತಮ್ಮ ಹೋರಾಟವನ್ನು ತೋರಿಸಿದ ಅಪರೂಪದ ಮೇರು ವ್ಯಕ್ತಿತ್ವ. ಎಲ್ಲಾ ತತ್ತ್ವಜ್ಞಾನದ ಕುರಿತು ಆಳವಾದ ಅಧ್ಯಯನ ಮಾಡಿ ತತ್ತ್ವಜ್ಞಾನದ ಶಿಖರ ಸೂರ್ಯರಾದರು. ಇಂತಹ ಭವ್ಯ ವ್ಯಕ್ತಿತ್ವ ಹೊಂದಿದ ಸ್ವಾಮಿ ವಿವೇಕಾನಂದರು ಭರತ ಖಂಡದ ಪ್ರತಿನಿಧಿಯಾಗಿ ಪ್ರಪಂಚ ಪರ್ಯಟನೆ ಮಾಡಿ ಭಾರತೀಯ ತತ್ತ್ವವಿಚಾರಗಳನ್ನು ಪ್ರಸಾರ ಮಾಡಿದರು ಎಂದರು. ಸಂಘದ ಅಧ್ಯಕ್ಷ ಡಾ. ನಾರಾಯಣ ನಾಯ್ಕ ಅವರು ವಿವೇಕಾನಂದರು ಹುಟ್ಟಿ 160 ವರ್ಷ ಕಳೆದರೂ ಅವರ ದಿವ್ಯ ವ್ಯಕ್ತಿತ್ವ ಜನಮಾನಸದಲ್ಲಿ ಇಂದಿಗೂ ಸದಾ ಹಚ್ಚುಹಸುರಾಗಿದೆ. ಕಾರಣ ಅವರ ವ್ಯಕ್ತಿತ್ವ, ಅವರ ಮಾತಿನಲ್ಲಿ ಇರುವ ಅಮೋಘವಾದ ಮಾಂತ್ರಿಕ ಶಕ್ತಿ, ಗಟ್ಟಿಯಾದ ಅವರ ಚಿಂತನಕ್ರಮ. ವಿವೇಕಾನಂದರ ಮಾತಿನಲ್ಲಿ ದೇಶ, ಧರ್ಮ, ವ್ಯಕ್ತಿ, ಸಮಾಜ, ರಾಜಕೀಯ ವ್ಯವಸ್ಥೆ, ವ್ಯಕ್ತಿಯ ವ್ಯಕ್ತಿತ್ವ, ವಿದ್ಯಾರ್ಥಿಗಳು- ಹೀಗೆ ಅನೇಕ ವಿಷಯಗಳ ಕುರಿತು ಆಳವಾದ ಚಿಂತನೆಗಳಿವೆ. ಅವುಗಳಲ್ಲಿ ನಮಗೆ ಬೇಕಾದ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ನಮ್ಮ ವ್ಯಕ್ತಿತ್ವವು ಶ್ರೇಷ್ಠತೆಯನ್ನು ಪಡೆಯುತ್ತದೆ ಎಂದರು.
ಸಂಘದ ಉಪಾಧ್ಯಕ್ಷ ಆನಂದ ರಾವ್, ನಿರ್ದೇಶಕರಾದ ಅಂಜನಕುಮಾರ ಗಂಡಗುದರಿ, ಆನಂದ ಶೆಟ್ಟಿ, ಗಣೇಶ ಮರಕಾಲ, ಸುರೇಶ ನಾಯರ್, ದುರ್ಗಪ್ಪ ತಳವಾರ, ಭಾರತಿ ಶೆಟ್ಟಿಗಾರ, ರೂಪಾ ಮಗದುಮ್ ಹಾಗೂ ಸಿಬ್ಬಂದಿ ವರ್ಗ, ಪಿಗ್ಮಿ ಸಂಗ್ರಹಕಾರರು, ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ವಿಶಾಲ ಪಾಟೀಲ ಸ್ವಾಗತಿಸಿದರು, ರಘುನಾಥ ಗಾವಡೆ ವಂದಿಸಿದರು, ವನಿತಾ ಮೂಲ್ಯ ನಿರೂಪಿಸಿದರು.