ಜನವರಿ 10 ರಂದು ತ್ಯಾಗವೀರ ಲಿಂಗರಾಜ 162 ನೆಯ ಜಯಂತಿ ಉತ್ಸವ ತನ್ನಮಿತ್ತ ಲೇಖನ
`ಸೋಹಂ’ ಸಂಸ್ಕೃತಿಯನ್ನು `ದಾಸೋಹಂ’ ಸಂಸ್ಕೃತಿಯನ್ನಾಗಿಸಿದವರು ಶರಣರು. ಹೀಗೆ ಶರಣ ಸತ್ವವನ್ನು ಜೀವನದ ಉಸಿರನ್ನಾಗಿಸಿ ಜನತೆಯ ಹಿತಕ್ಕಾಗಿ ಬದುಕಿದ ಮಹಾಚೇತನ ಪ್ರಾತಃಸ್ಮರಣೀಯರಾದ ಸಿರಸಂಗಿ ಲಿಂಗರಾಜರು. ಉತ್ತರ ಕರ್ನಾಟಕ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ರಂಗಗಳಲ್ಲಿ ತೀರಾ ಹಿಂದುಳಿದ ವಾತಾವರಣವನ್ನು ತಳಿಗೊಳಿಸಿ, ಹಗಲಿರುಳೂ ದುಡಿದು ಉಪಯುಕ್ತ ಯೋಜನೆಗಳಿಂದ ಜನಜಾಗೃತಿಯನ್ನುಂಟು ಮಾಡಿದ ಲಿಂಗರಾಜರ ಬದುಕು ಉರಿವುಂಡ ಕರ್ಪೂರ.
ಸಮಾಜದ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು, ಮುಂದೆ ಬರಬೇಕು, ಬದುಕಿನ ದಾರಿದ್ರ್ಯವನ್ನು ತೊಡೆದು ಹಾಕಬೇಕೆಂಬ ಸಂಕಲ್ಪದೊಂದಿಗೆ ಶೈಕ್ಷಣಿಕ ರಂಗಕ್ಕೆ ಆರ್ಥಿಕ ಮತ್ತು ಬೌದ್ಧಿಕ ಕಸುವನ್ನು ತುಂಬಿದರು. ವ್ಯಕ್ತಿಯೊಬ್ಬನಿಗೆ ಕೊಡುವ ದಾನಕ್ಕಿಂತಲೂ ಶಿಕ್ಷಣ ಸಂಘ ಸಂಸ್ಥೆಗಳಿಗೆ ಕೊಡುವ ದಾನ ಚಿರಂತನ ಹಾಗೂ ಭವಿಷ್ಯತ್ತಿಗೆ ಭದ್ರನೆಲೆ ರೂಪಿಸುವುದೆಂಬ ಅವರ ಪೂರ್ವನಿರ್ಧಾರಿತ ಚಿಂತನೆ ನವಸಮಾಜಕ್ಕೆ ಪ್ರೇರಕವಾಯಿತು. ಬೇಸಾಯವನ್ನು ನೆಚ್ಚಿಕೊಂಡ, ವ್ಯಾಪಾರದಲ್ಲಿ ದಿನದೂಡಿ ಶಿಕ್ಷಣದದಿಂದ ದೂರ ಸರಿದ ಸಮಾಜದ ವರ್ಗದವರಿಗೆ ಶೈಕ್ಷಣಿಕ ಜಾಗೃತಿ ಮೂಡಿಸಿದ ಲಿಂಗರಾಜರ ಸಾಧನೆ ಅದ್ವಿತೀಯವಾದುದು. ಬಡತನದಲ್ಲಿ ಬೆಂದು ಬಸವಳಿದವರಿಗೆ ಕರುಣೆಯ ಕಣ್ಣು ತೆರೆದ ಲಿಂಗರಾಜರು ಸಾಮಾಜಿಕ ನ್ಯಾಯಭದ್ರತೆ ಒದಗಿಸಿದ್ದು ಅವರ ಸಾಮಾಜಿಕ ಜವಾಬ್ದಾರಿಗೂ ಪಾತ್ರವಾದುದು.
ಧಾರವಾಡ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ವನಶಿಗ್ಲಿಯ ಮಡ್ಲಿಗೂಳಪ್ಪ ಎಲ್ಲವ್ವ ದಂಪತಿಗಳ ಉದರದಲ್ಲಿ 10.01.1861 ರಂದು ನಾಲ್ಕನೆಯ ಮಗನಾಗಿ ಜನಿಸಿದ ಲಿಂಗರಾಜರು ಸಿರಸಂಗಿ ದೇಸಗತಿಗೆ ದತ್ತುಪುತ್ರರಾಗಿ ಬಂದವರು. ಬದುಕಿನುದ್ದಕ್ಕೂ ಕೌಟುಂಬಿಕ ಸಮಸ್ಯೆಗಳನ್ನು ಒಂದರ ಹಿಂದೊಂದು ಉಂಡು ಉಟ್ಟು ಬೆಂದರೂ ತಮ್ಮ ತನವನ್ನು ಕಳೆದುಕೊಳ್ಳಲಿಲ್ಲ. ಸಂಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದ ಲಿಂಗರಾಜರು ಕೆರೆ, ಕಾಲುವೆಗಳನ್ನು ನಿರ್ಮಿಸಿದ್ದು ಮಾತ್ರವಲ್ಲದೆ ಸಂಸ್ಥಾನದಲ್ಲಿ ಸೇವೆ ಮಾಡುತ್ತಿದ್ದ ನೃತ್ಯ, ವಾದ್ಯ ಕಲಾವಿದರಿಗೂ ಉಂಬಳಿ ಹಾಕಿಕೊಟ್ಟರು. ಕಲಾವಿದರನ್ನು ಪುರಸ್ಕರಿಸಿದರು. ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದರು. ಸತ್ಯ, ನ್ಯಾಯ, ನಿಷ್ಪಪಕ್ಷಪಾತದಿಂದ ಸಂಸ್ಥಾನದ ನ್ಯಾಯಗಳನ್ನು ಧರ್ಮಮಾರ್ಗದಿಂದ ಬಗೆಹರಿಸಿದರು. ಲಿಂಗರಾಜರ ಈ ಕಾರ್ಯತತ್ಪರತೆ, ಸೇವಾನಿಷ್ಠ ಪ್ರಾಮಾಣಿಕತೆ ಮೆಚ್ಚಿದ ಬ್ರಿಟಿಷ್ ಸರಕಾರ ಸಬ್ಜಜ್ ಅಧಿಕಾರ ನೀಡಿ ಗೌರವಿಸಿದ್ದು ಅವರ ನ್ಯಾಯದರ್ಶಿತ್ವಕ್ಕೆ ಸಾಕ್ಷಿಯಾಗಿತ್ತು.
ಏನೆಲ್ಲವೂ ಇದ್ದರೂ ಯಾವುದಕ್ಕೂ ಅಂಟಿಕೊಳ್ಳದೆ ಸರಳ ಜೀವನಕ್ಕೆ ಹೆಸರುವಾಸಿಯಾಗಿದ್ದ ಲಿಂಗರಾಜರು ಸಮಾಜದಲ್ಲಿ ತಮ್ಮ ಪ್ರಭಾವ ಬೀರಬೇಕೆಂಬ ಕಸರತ್ತುಗಳನ್ನು ಮಾಡಿದವರಲ್ಲ. ಅದೇ ಅವರನ್ನು ಚಿರಚಿಂತನ ಖ್ಯಾತಿಯೆಡೆಗೆ ಕೊಂಡೊಯಿತು, ಅವರ ಅಭಿವೃದ್ಧಿಯ ಸಂಕಲ್ಪಗಳು ಜನಾನುರಾಗಿಯನ್ನಾಗಿಸಿದವು.
ವೀರಶೈವ ಸಮಾಜದ ಅಭಿವೃದ್ಧಿಗಾಗಿ ದುಡಿದ ಲಿಂಗರಾಜರು ಅಖಿಲ ಭಾರತ ವೀರಶೈವ ಮಹಾಸಭೆಯ ಅಸ್ತಿತ್ವದ ಕಾರಣ ಪುರುಷರಲ್ಲಿ ಒಬ್ಬರಾದರು.
ತಮ್ಮ ಇಚ್ಛಾಪತ್ರದಲ್ಲಿ ಚರಸ್ಥಿರ ಆಸ್ತಿಯನ್ನು ಶೈಕ್ಷಣಿಕ ಸೇವೆಗೆ ಮಿಸಲಿಟ್ಟಿದ್ದು ಅವರ ತ್ಯಾಗಕ್ಕೆ ಔದರ್ಯಕ್ಕೆ ಸಾಕ್ಷಿ. ಇಂದು `ಸಿರಸಂಗಿ ನವಲಗುಂದ ಟ್ರಸ್ಟ್’ ಸಾವಿರಾರೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚೈತನ್ಯವನ್ನು ನೀಡುತ್ತಿದೆ. ಅವರ ಬದುಕನ್ನು ಕಟ್ಟುವುದರ ಮೂಲಕ ನಾಡಿಗೆ ದೇಶಕ್ಕೆ ಮಾದರಿಯಾಗಿ ಬೆಳೆದು ನಿಂತಿದೆ. ಅವರು ಅಂದು ನೆಟ್ಟ ಸಸಿಗಳಿಂದು ಹೆಮ್ಮರವಾಗಿ ಫಲ ನೀಡುತ್ತಿವೆ. ಇದೆಲ್ಲಕ್ಕೂ ಲಿಂಗರಾಜರ ಶ್ರಮ ಕಾರಣ.
ತನಗಿಂತಲೂ ಸಮಾಜದೊಡ್ಡದೆಂಬ ಅರಿವಿನ ಮಾರ್ಗಕ್ಕೆ ಬೆಲೆಕೊಟ್ಟ ಲಿಂಗರಾಜರ ಬದುಕು ತೆರೆದ ಪುಸ್ತಕವಾಗಿದೆ. ನಾಡು ದೇಶದುದ್ದಗಲಕ್ಕೂ ಅವರ ಕೀರ್ತಿ ಕುಡಿಚಾಚಿ ನಿಂತಿದೆ. ಸಮಾಜದ ಶ್ರೇಯೋಭಿವೃದ್ಧಿಗಾಗಿ ತಮ್ಮನ್ನು ಸಮರ್ಪಿಸಿಕೊಂಡ ಲಿಂಗರಾಜರ ತ್ಯಾಗ ನಿಸ್ವಾರ್ಥ ಸೇವೆಗಳನ್ನು ನಾಡು ಕೃತಜ್ಞತೆಯಿಂದ ಸ್ಮರಿಸಬೇಕಾಗಿದೆ. ಅಂತೆಯೇ ಅವರ ತ್ಯಾಗದಿಂದ ಪ್ರೇರೇಪಿತರಾದ ಕೆ.ಎಲ್.ಇ. ಸಂಸ್ಥೆಯ ಸಂಸ್ಥಾಪಕ ಸಪ್ತರ್ಷಿಗಳು ತಾವು ಸ್ಥಾಪಿಸಿದ ಕಾಲೇಜಿಗೆ ಲಿಂಗರಾಜರ ಹೆಸರಿಟ್ಟು ಗೌರವಿಸಿದ್ದಾರೆ. ಲಿಂಗರಾಜರಂತಹ ಇಚ್ಛಾಶಕ್ತಿ ಮನಸ್ಸು ಮಾತ್ರ ನಮ್ಮಲ್ಲಿ ಬೇರು ಬಿಟ್ಟಿರುವ ಸಮಸ್ಯೆಗಳಿಗೆ ಉತ್ತರಿಸಲುಲ ಸಾಧ್ಯ. ಈ ದಿಶೆಯಲ್ಲಿ ಮನೆ ಮನಗಳನ್ನು ಕಟ್ಟುವಲ್ಲಿ ಸಮಾಜದ ಜನತೆ ಮುಂದು ಬರಬೇಕಾಗಿದೆ. ತನು-ಮನ-ಧನಗಳನ್ನು ಅರ್ಪಿಸಿ ಸಮಾಜಹಿತವನ್ನು ಬಯಸಬೇಕಾಗಿದೆ. ದುಡಿಯಬೇಕಾಗಿದೆ.
ಡಾ. ಮಹೇಶ ಗುರನಗೌಡರ
ಲಿಂಗರಾಜ ಮಹಾವಿದ್ಯಾಲಯ, ಬೆಳಗಾವಿ