2003 ರಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದು ಬರೋಬ್ಬರಿ 20 ವರ್ಷ ಕಳೆದಿದೆ. 2011ರಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆದು 12 ವರ್ಷಗಳ ಗತಿಸಿವೆ. ಕನ್ನಡ ನಾಡಿನ ಗಡಿಯಲ್ಲಿ ಸಾಹಿತ್ಯ- ಸಂಸ್ಕೃತಿಗಳನ್ನು ಉತ್ತೇಜಿಸಿ ಬೆಳೆಸಬೇಕಾದ ಕನ್ನಡ ಸಾಹಿತ್ಯ ಪರಿಷತ್ತು ಮತ್ತೆ ಗಡಿ ಭಾಗದಲ್ಲಿ ಸಾಹಿತ್ಯ ಚಟುವಟಿಕೆ ನಡೆಸಲು ಮುಂದಾಗದೆ ಇರುವುದು ಜಿಲ್ಲೆಯ ಸಾಹಿತ್ಯ ಪ್ರೇಮಿಗಳಿಗೆ ಭಾರಿ ನಿರಾಶೆಯನ್ನುಂಟು ಮಾಡಿದೆ. ಬೆಳಗಾವಿ ಹೊರತುಪಡಿಸಿ ಬೈಲಹೊಂಗಲ, ಗೋಕಾಕ, ಚಿಕ್ಕೋಡಿ, ಅಥಣಿ, ನಿಪ್ಪಾಣಿಗಳಲ್ಲಿ ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ನಡೆಸಬಹುದಾಗಿದೆ. ಆದರೆ, ಪರಿಷತ್ತಿಗೆ ಗಜಗಾತ್ರದ ಬೆಳಗಾವಿ ಜಿಲ್ಲೆ ಮೇಲೆ ಅಷ್ಟೊಂದು ಆಸಕ್ತಿ ಇಲ್ಲ.
ಜನ ಜೀವಾಳ ಸರ್ಚ್ ಲೈಟ್ ಬೆಳಗಾವಿ :
ಬೆಳಗಾವಿ ಬಹು ವಿಸ್ತಾರದ ಕರ್ನಾಟಕದ ಅತ್ಯಂತ ದೊಡ್ಡ ಜಿಲ್ಲೆ. ಪ್ರತಿಯೊಂದು ಕ್ಷೇತ್ರದಲ್ಲೂ ಜಿಲ್ಲೆಗೆ ಅನ್ಯಾಯವಾಗುತ್ತಲೇ ಬಂದಿದೆ. ಇದೀಗ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರದಲ್ಲೂ ಈ ಬಹುದೊಡ್ಡ ಜಿಲ್ಲೆಗೆ ಮತ್ತೆ ಅನ್ಯಾಯವಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ. ಮುಂದಿನ ಸಾಹಿತ್ಯ ಸಮ್ಮೇಳನದ ಸ್ಥಳ ನಿರ್ಧರಿಸಲು ಸಾಹಿತ್ಯ ಪರಿಷತ್ತು ಇಷ್ಟರಲ್ಲೇ ಹಾವೇರಿಯಲ್ಲಿ ಸಭೆ ಸೇರಲಿದೆ. ಬಳ್ಳಾರಿ, ಯಾದಗಿರಿ, ಉತ್ತರ ಕನ್ನಡ, ಮಂಡ್ಯ, ಹಾಸನ, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳು ತಮ್ಮ ಜಿಲ್ಲೆಗಳಲ್ಲೇ ಮುಂದಿನ ಬಾರಿ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂದು ಹಕ್ಕು ಮಂಡಿಸಿವೆ. ಮಾತ್ರವಲ್ಲ, ಕನ್ನಡ ಜಾತ್ರೆ ನಡೆಸಲು ತಾ ಮುಂದು ತಾ ಮುಂದು ಎಂದು ಪರಿಷತ್ತಿನೊಂದಿಗೆ ಜಗಳ ತೆಗೆದು ನಿಂತಿವೆ.
ಆದರೆ, ಮುಂದಿನ ಸಲವೂ ಬೆಳಗಾವಿ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುವ ಯಾವುದೇ ಲಕ್ಷ್ಮಣ ಎನ್ನುವುದು ಜಿಲ್ಲೆಯ ಸಾಹಿತ್ಯ ಪ್ರೇಮಿಗಳಿಗೆ ಸಾಕೇದಾಶ್ಚರ್ಯ ಉಂಟು ಮಾಡಿದೆ. ಯಾಕೆಂದರೆ ಇವೆಲ್ಲ ಚಿಕ್ಕ ಚಿಕ್ಕ ಜಿಲ್ಲೆಗಳು. ಹಿಂದೊಮ್ಮೆ ಜೆ.ಎಚ್.ಪಟೇಲ್ ಅವರು ಜಿಲ್ಲೆಗಳನ್ನು ಒಡೆದಾಗ ಇದರಲ್ಲಿ ಕೆಲ ಜಿಲ್ಲೆಗಳು ಹೊಸದಾಗಿ ಉದಯವಾಗಿದ್ದವು. ಆಗ ಬೆಳಗಾವಿ ಜಿಲ್ಲೆ ಒಡೆದಿದ್ದರೂ ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆಗಳು ಹುಟ್ಟಿಕೊಳ್ಳುತ್ತಿದ್ದವು. ಹೀಗಾಗಿ ಜಿಲ್ಲಾ ಕೇಂದ್ರ ಹೊರತುಪಡಿಸಿ ನಿಪ್ಪಾಣಿ, ಚಿಕ್ಕೋಡಿ, ಗೋಕಾಕ, ಅಥಣಿ, ಬೈಲಹೊಂಗಲ ಮುಂತಾದ ನಗರಗಳಲ್ಲೂ ಸಾಹಿತ್ಯ ಸಮ್ಮೇಳನ ನಡೆಸಬಹುದಾಗಿದೆ. ಆದರೆ, ಸಾಹಿತ್ಯ ಪರಿಷತ್ ಈ ನಿಟ್ಟಿನಲ್ಲಿ ಗಮನ ಹರಿಸದೆ ಇರುವುದು ಸೋಜಿಗ.
ಬೆಳಗಾವಿಯಲ್ಲಿ 1925, 1929, 1939, 1980, 2003 ರಲ್ಲಿ ಸಾಹಿತ್ಯ ಸಮ್ಮೇಳನ ನಡೆದಿತ್ತು. ಇದೀಗ ಸಮ್ಮೇಳನ ನಡೆದು 20 ವರ್ಷಗಳೇ ಆಗಿವೆ.
ಬೆಳಗಾವಿಯಲ್ಲಿ 2003 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿತ್ತು. ಪಾಟೀಲ ಪುಟ್ಟಪ್ಪ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅದಾದ ನಂತರ 2011 ರಲ್ಲಿ ಎರಡನೇ ವಿಶ್ವಕನ್ನಡ ಸಮ್ಮೇಳನಕ್ಕೆ ಬೆಳಗಾವಿ ಆತಿಥ್ಯ ಒದಗಿಸಿತ್ತು. ಇವೆರಡು ಸಮ್ಮೇಳನಗಳು ಅಚ್ಚುಕಟ್ಟಾಗಿ ನಡೆದು ಐತಿಹಾಸಿಕ ದಾಖಲೆ ಬರೆದಿದ್ದವು. ಆದರೆ, ಅನಂತರ ರಾಜ್ಯಮಟ್ಟದ ಯಾವುದೇ ಸಾಹಿತ್ಯ ಸಮ್ಮೇಳನಗಳಿಗೆ ಬೆಳಗಾವಿ ಆತಿಥ್ಯ ಒದಗಿಸಿಲ್ಲ. ಹೀಗಾಗಿ ಅತ್ಯಂತ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಗೆ ನ್ಯಾಯ ಒದಗಿಸಿ ಕೊಡಬೇಕು ಎನ್ನುವುದು ಜಿಲ್ಲೆಯ ಸಾಹಿತ್ಯ ಒತ್ತಾಯವಾಗಿದೆ.