ಜನಜೀವಾಳ ಸರ್ಚ್ ಲೈಟ್ ಬೆಳಗಾವಿ :
ದಕ್ಷಿಣ ಭಾರತದ ಪ್ರಸಿದ್ಧ ದೇವಿ ಆರಾಧನಾ ಸ್ಥಳವಾಗಿರುವ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಿಯ ಆರಾಧನಾ ಕ್ಷೇತ್ರದಲ್ಲೀಗ ನಕಲಿ ವೈದ್ಯರ ಹಾವಳಿ ತಾಂಡವಾಡುತ್ತಿದೆ. ಇದಕ್ಕೆ ಲಗಾಮು ಹಾಕುವವರು ಯಾರು ಎನ್ನುವುದು ಭಕ್ತರ ಪ್ರಶ್ನೆಯಾಗಿದೆ. ಬೆಳಗಾವಿ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಭಕ್ತರ ಮೊರೆ ಆಲಿಸಬೇಕು ಎನ್ನುವುದು ಜನರ ಸದಾಶಯವಾಗಿದೆ.
ಸವದತ್ತಿ ಯಲ್ಲಮ್ಮ ದೇವಸ್ಥಾನದ ಬನದ ಹುಣ್ಣಿಮೆ ಹಾಗೂ ಭಾರತ ಹುಣ್ಣಿಮೆ ಜಾತ್ರೆಗೆ 25 ಲಕ್ಷಕ್ಕೂ ಅಧಿಕ ಭಕ್ತರು ಸೇರುತ್ತಾರೆ. ಇಷ್ಟು ಜನ ಸೇರುವ ಜಾತ್ರೆಗೆ ಸರಿಯಾದ ವೈದ್ಯಕೀಯ ಸೌಲಭ್ಯ ಇಲ್ಲದೆ ಇರುವುದು ನಕಲಿ ವೈದ್ಯರ ಹಾವಳಿಗೆ ಅವಕಾಶ ಮಾಡಿಕೊಟ್ಟಂತಾಗಿದೆ.
ಇಲ್ಲಿ ಮುಕ್ತವಾಗಿ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ. ನಕಲಿ ವೈದ್ಯರು ಹತ್ತಕ್ಕೂ ಹೆಚ್ಚು ಕ್ಲಿನಿಕ್ ಗಳನ್ನು ತೆರೆದಿದ್ದಾರೆ. ಇವು ರಾಜಾರೋಷವಾಗಿ ತಲೆಯೆತ್ತಿರುವುದು ಆಡಳಿತಕ್ಕೆ ಸವಾಲು ಹಾಕಿದಂತಿದೆ.
ಕಳೆದ ಒಂದು ವಾರದಿಂದ ಯಲ್ಲಮ್ಮ ಗುಡ್ಡದಲ್ಲಿ ಮೇಲೆದ್ದಿರುವ ಕ್ಲಿನಿಕ್ ಗಳನ್ನು ನೋಡಿಯೂ ನೋಡದಂತಿದ್ದಾರೆ ತಾಲೂಕು ಆರೋಗ್ಯ ಅಧಿಕಾರಿ ಮಹೇಶ ಚಿತ್ತರಗಿ. ಅವರು ಮಾತ್ರ ಇದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಇದ್ದಾರೆ. ನಕಲಿ ವೈದ್ಯರು ರಾಜಾರೋಷವಾಗಿ ಕ್ಲಿನಿಕ್ ನಡೆಸುತ್ತಿದ್ದರೂ ಇದನ್ನು ತಡೆಗಟ್ಟಲು ವೈದ್ಯಾಧಿಕಾರಿಗಳು ವಿಫಲವಾಗಿದ್ದಾರೆ ಎನ್ನುವುದು ತಾಲೂಕಿನ ಜನತೆಯ ಆರೋಪವಾಗಿದೆ.
ಸವದತ್ತಿ ತಾಲೂಕಿನ ಆರೋಗ್ಯ ಅಧಿಕಾರಿ ಮಹೇಶ ಚಿತ್ತರಗಿ ಅವರ ಈ ನಡೆ ಜನರಲ್ಲಿ ಅನೇಕ ರೀತಿಯಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅವರು ನಕಲಿ ವೈದ್ಯರ ಜತೆಗೆ ಸೇರಿಕೊಂಡಿದ್ದಾರೆಯೇ ಎಂಬ ಅನುಮಾನವನ್ನು ಜನರೇ ವ್ಯಕ್ತಪಡಿಸುತ್ತಿದ್ದಾರೆ.
ಪ್ರಸಿದ್ಧ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ತಲೆಯೆತ್ತಿರುವ ನಕಲಿ ವೈದ್ಯರ ಕ್ಲಿನಿಕ್ ಗಳ ಹಾವಳಿ ತಡೆಗಟ್ಟುವ ಕೆಲಸವನ್ನು ಅವರು ಮಾಡಬೇಕು ಎನ್ನುವುದು ತಾಲೂಕಿನ ಜನರ ಬೇಡಿಕೆಯಾಗಿದೆ.