ಬೆಳಗಾವಿ :
ಪ್ರತಿಯೊಬ್ಬ ವ್ಯಕ್ತಿಯು ದೇಶಕ್ಕೆ ಮೊದಲ ಆದ್ಯತೆ ನೀಡಬೇಕು. ನಂತರ ಪಕ್ಷ, ಮತ, ಪಂತ, ಸಿದ್ಧಾಂತಗಳು. ಹೀಗಾದಾಗ ನಾವೆಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲೂ ಮೂಡಿ ದೇಶದ ಪ್ರಗತಿಯು ಸಾಧ್ಯವೆಂದು ಗುರು ವಿವೇಕಾನಂದ ವಿವಿಧ ಉದ್ದೇಶಗಳ ಸಹಕಾರ ಸಂಘದ ನಿರ್ದೇಶಕ ಸುರೇಶ್ ನಾಯರಿ ಅಭಿಪ್ರಾಯ ಪಟ್ಟರು.
ನಗರದ ಗುರು ವಿವೇಕಾನಂದ ವಿವಿಧೋದ್ದೇಶಗಳ ಸಹಕಾರ ಸಂಘದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಮ್ಮ ಮನೆಯಲ್ಲಿ ನಮ್ಮ ಆಚಾರ-ವಿಚಾರ, ಸಂಪ್ರದಾಯ, ರೀತಿ -ನೀತಿಗಳು, ನಮಗಿಷ್ಟವಾದ ಗ್ರಂಥಗಳು ಪ್ರಧಾನವಾಗಿರಲಿ. ಅದರಾಚೆಗೆ ನಮಗೆ ನಮ್ಮ ದೇಶದ ಸಂವಿಧಾನವವೇ ಅತ್ಯಂತ ಶ್ರೇಷ್ಠವಾದುದು. ಇದರ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನ ಭವ್ಯವಾದ ಬದುಕು ಅಡಗಿದೆ. ಅವನ ಪ್ರಗತಿಯ ಚಕ್ರವಿದೆ. ನಮ್ಮ ಸಂವಿಧಾನ ಶಿಲ್ಪಿಗಳು ವ್ಯಕ್ತಿ ಮತ್ತು ದೇಶದ ಅಭಿವೃದ್ಧಿಯನ್ನು ಈ ಸಂವಿಧಾನದ ಮೂಲಕ ನೀಡಿದ್ದಾರೆ ಎಂದರು.
ಸಂಘದ ಅಧ್ಯಕ್ಷ ಡಾ. ನಾರಾಯಣ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,
ರಾಜಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದಲ್ಲಿ ತನ್ನ ನಿಜ ಅಸ್ತಿತ್ವವನ್ನು ಸ್ಥಾಪಿಸಿದ ದಿನ ಇದಾಗಿದೆ. ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಏಕತೆ, ಭ್ರಾತೃತ್ವ ಇವು ನಮ್ಮ ಸಂವಿಧಾನವು ನಮಗೆ ನೀಡಿದಂತಹ ಬಹು ಅಮೂಲ್ಯವಾದ ಮೌಲ್ಯಗಳಾಗಿವೆ. ಇವುಗಳ ಆಧಾರದ ಮೇಲೆ ಭಾರತವನ್ನು ವಿಶ್ವಗುರುವಾಗಿಸೋಣ ಎಂದರು.
ಸಂಘದ ಉಪಾಧ್ಯಕ್ಷ ಆನಂದ ಪಿ. ರಾವ್, ನಿರ್ದೇಶಕರಾದ ಅಂಜನಕುಮಾರ ಗಂಡಗುದರಿ, ರಾಜೇಶ ಗೌಡ, ಆನಂದ ಶೆಟ್ಟಿ, ಭಾರತಿ ಶೆಟ್ಟಿಗಾರ, ರೂಪಾ ಮಗದುಮ್ ಹಾಗೂ ಪಿಗ್ಮಿ ಸಂಗ್ರಹಕಾರರು, ಕಟ್ಟಡದಲ್ಲಿರುವ ನಿವಾಸಿಗಳು ಮತ್ತು ವಿವಿಧ ಕಚೇರಿಯ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ರಘುನಾಥ ನಿರೂಪಿಸಿದರು, ಸಂಘದ ಕಾರ್ಯದರ್ಶಿ ವಿಶಾಲ್ ಪಾಟೀಲ್ ಸ್ವಾಗತಿಸಿದರು. ಅಶ್ವಿನಿ ಮೂಲ್ಯ ವಂದಿಸಿದರು. ವನಿತಾ ಮೂಲ್ಯ ಪರಿಚಯಿಸಿದರು. ನಿಧಿ ಪ್ರಾರ್ಥಿಸಿದರು.