ಬೆಳಗಾವಿ :
ಭರತೇಶ ಶಿಕ್ಷಣ ಸಂಸ್ಥೆ ಕನ್ನಡ ನಾಡು, ನುಡಿ, ಏಳ್ಗಗೆಗಾಗಿ ಹತ್ತಾರು ಕಾರ್ಯಕ್ರಮಗಳನ್ನೂ ಕಳೆದ 50 ವರ್ಷದುದ್ದಕ್ಕೂ ಆಯೋಜಿಸುತ್ತ ಬಂದಿದೆ. ಜೈನಧರ್ಮದ ಪ್ರಸಾರ, ಪ್ರಚಾರಕ್ಕಾಗಿ ಮೂಂಚೂಣಿಯಲ್ಲಿದೆ. ಭಟ್ಟಾರಕ ಪರಂಪರೆಯನ್ನು ಮುಂದುವರೆಸಲು ಸಾಕಷ್ಟು ಪ್ರಯತ್ನಪಟ್ಟಿದೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯ ಹಿರಿತನದಲ್ಲಿ ಯಕ್ಷ-ಯಕ್ಷಣಿಯರ ಪರಿಕಲ್ಪನೆ, ಜೈನ ಶಾಸನಗಳು, ಚಂಪು ಕಾವ್ಯ ಕುರಿತು ಹಾಗೂ ಇನ್ನೂ ಹಲವಾರು ವಿಷಯಗಳನ್ನು ಒಳಗೊಂಡ, ರಾಜ್ಯ, ರಾಷ್ಟಮಟ್ಟದ ಸಂಕೀರ್ಣ, ಚರ್ಚಾಸತ್ರ, ಕವಿಗೊಷ್ಟಿಗಳನ್ನು ಆಯೋಜಿಸಿ ಉತ್ತರ ಕರ್ನಾಟಕ ತುಂಬೆಲ್ಲ ಜೈನ ಪ್ರಭಾವನೆ ಕೈಗೊಂಡಿದೆ.
ಇದೀಗ ಸಂಸ್ಥೆಯ ವಜ್ರಮಹೋತ್ಸವ ನಿಮಿತ್ತ ಈ ವರ್ಷದುದ್ದಕ್ಕೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಂತೆ ಅಖಿಲ ಕರ್ನಾಟಕ ಜೈನ ಸಾಹಿತ್ಯ ಸಮ್ಮೇಳನವನ್ನು ಜ.28 ಮತ್ತು 29 ರಂದು ಹಮ್ಮಿಕೊಂಡಿದೆ.
ಭರತೇಶ ಶಿಕ್ಷಣ ಸಂಸ್ಥೆಯ ವತಿಯಿಂದ ಅಖಿಲ ಕರ್ನಾಟಕ ಜೈನ ಸಾಹಿತ್ಯ ಸಮ್ಮೇಳನವು ಬೆಳಗಾವಿಯಲ್ಲಿ ನಡೆಯಲಿದೆ. ಜ.28 (ಶನಿವಾರ) ಜ.29 (ಭಾನುವಾರ) ನಡೆಯಲಿರುವ ಎರಡು ದಿನಗಳ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಿಶ್ರಾಂತ ಕುಲಪತಿ ಡಾ. ಶಾಂತಿನಾಥ ದಿಬ್ಬದ ವಹಿಸಲಿದ್ದಾರೆ. ಭರತೇಶ ಶಿಕ್ಷಣ ಸಂಸ್ಥೆಯ ನರ್ಸಿಂಗ್ ಕಾಲೇಜು ಸಭಾಂಗಣ (ಹಲಗಾ) ದಲ್ಲಿ ಸಮ್ಮೇಳನ ನಡೆಯಲಿದೆ.
ಜ. 28 ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಭರತೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಜಿನದತ್ತ ದೇಸಾಯಿ ವಹಿಸಲಿದ್ದು ನಾಡೋಜ ಡಾ. ಹಂ.ಪ.ನಾಗರಾಜಯ್ಯ ಸಮ್ಮೇಳನ ಉದ್ಘಾಟಿಸಲಿದ್ದಾರೆ. ತುಮಕೂರಿನ ಪ್ರೊ. ಪದ್ಮಪ್ರಸಾದ್ ಆಶಯ ಭಾಷಣ ಮಾಡಲಿದ್ದಾರೆ. ಸಮಾರಂಭದ ಸಾನಿಧ್ಯವನ್ನು ಕೊಲ್ಲಾಪುರ ಜೈನ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ವಹಿಸಲಿದ್ದಾರೆ.
ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಬಸವರಾಜ ಜಗಜಂಪಿ ವಹಿಸಲಿದ್ದಾರೆ. ಕನ್ನಡ ಕಾವ್ಯಕ್ಕೆ ರನ್ನನ ಕೊಡುಗೆ ಕುರಿತು ಡಾ. ವೈ.ಎಂ.ಯಾಕೊಳ್ಳಿ, ಜನ್ನನ ಯಶೋಧರ ಚರಿತೆ ಕುರಿತು ಡಾ. ಎಸ್.ಪಿ.ಪದ್ಮಿನಿ ನಾಗರಾಜು ಉಪನ್ಯಾಸ ಮಾಡಲಿದ್ದಾರೆ.
2 ನೇ ಗೋಷ್ಠಿ ಡಾ. ರಾಮಕೃಷ್ಣ ಮರಾಠೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಜೈನದಾನ ಶಾಸನಗಳ ವೈಶಿಷ್ಟ (ಡಾ. ಅಪ್ಪಣ್ಣ ಹಂಜೆ), ನಿಷಿಧಿ ಶಾಸನಗಳು (ಡಾ. ರವಿ ಕುಮಾರ್), ಬೆಳಗಾವಿ ಜಿಲ್ಲೆಯ ಜೈನ ಶಾಸನಗಳು (ಡಾ. ಬಾಹುಬಲಿ ಹಂದೂರ) ಕುರಿತು ವಿಷಯ ಮಂಡನೆಯಾಗಲಿದೆ.
ಮೂರನೇ ಗೋಷ್ಠಿ ಪ್ರೊ. ಎಸ್.ಎಂ. ಗಂಗಾಧರಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನಯಸೇನನ ಧರ್ಮಾಮೃತ (ಡಾ. ಗುರುಪಾದ ಮರಿಗುದ್ದಿ), ರತ್ನಾಕರವರ್ಣಿಯ ಭರತೇಶ ವೈಭವ (ಡಾ. ಅಜಿತ್ ಪ್ರಸಾದ್) ಕುರಿತು ಉಪನ್ಯಾಸ ನಡೆಯಲಿದೆ.
ಕನ್ನಡ ಜೈನ ಸಾಹಿತ್ಯ ಕ್ಷೇತ್ರದ ವಿದ್ವತ್ತು-ಡಾ. ಆ.ನೇ.ಉಪಾಧ್ಯೆ ಕುರಿತು ವಿಶೇಷ ಉಪನ್ಯಾಸ ನಡೆಯಲಿದ್ದು ಡಾ. ಸ.ಚಿ.ರಮೇಶ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಎಸ್.ಎಸ್.ಅಂಗಡಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ಎಂ.ಎ.ಶುಭಚಂದ್ರ ಉಪನ್ಯಾಸ ಮಾಡಲಿದ್ದಾರೆ.
ಜ.29 ರ ಎರಡನೇ ದಿನದಂದು 5 ನೇ ಗೋಷ್ಠಿ ನಡೆಯಲಿದೆ. ಡಾ. ಶಿವಾನಂದ ಅಧ್ಯಕ್ಷತೆ ವಹಿಸಲಿದ್ದಾರೆ. ಪಂಪನ ವಿಕ್ರಮಾರ್ಜುನ ವಿಜಯ (ಡಾ. ವಿ.ಎಸ್.ಮಾಳಿ), ಆದಿಪುರಾಣ (ಡಾ. ಎಸ್ ಶಿವಾನಂದ), ಜೈನ ಹಸ್ತಪ್ರತಿಗಳು (ಡಾ. ಕೆ. ರವೀಂದ್ರನಾಥ) ಕುರಿತು ವಿಷಯ ಮಂಡನೆ ಆಗಲಿದೆ.
ಆರನೇ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಬಾಳಸಾಹೇಬ ಲೋಕಾಪುರ ವಹಿಸಲಿದ್ದಾರೆ. ಮಿರ್ಜಿ ಅಣ್ಣಾರಾಯರ ಬದುಕು-ಬರಹ (ಡಾ. ಜಿನದತ್ತ ಹಡಗಲಿ), ಪ್ರೊ. ಭುಜೇಂದ್ರ ಮಹಿಷವಾಡಿಯವರ ಸಾಹಿತ್ಯ (ಡಾ. ಪಿ.ಜಿ.ಕೆಂಪಣ್ಣವರ) ಕುರಿತು ಉಪನ್ಯಾಸ ಮಾಡಲಿದ್ದಾರೆ.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಹೆಚ್.ಎನ್.ಆರತಿ ವಹಿಸಲಿದ್ದಾರೆ. 15 ಕವಿಗಳು ಸ್ವರಚಿತ ಕವನ ವಾಚನ ಮಾಡಲಿದ್ದಾರೆ.ಸಮಾರೋಪ ಸಮಾರಂಭ ಡಾ. ಬಾಳಣ್ಣ ಶೀಗಿಹಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಡಾ. ಬಾಳಾಸಾಹೇಬ ಲೋಕಾಪುರ ಸಮಾರೋಪ ಭಾಷಣ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ನಡೆಯಲಿದೆ.