ಜನಜೀವಾಳ ಸರ್ಚ್ಲೈಟ್: ನವದಿಲ್ಲಿ/ಬೆಂಗಳೂರು/ಬೆಳಗಾವಿ : ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಪ್ರಭಾವಿ ನಾಯಕ ಲಕ್ಷ್ಮಣ ಸವದಿ ಅವರಿಗೆ ಈ ಸಲ ಜಾಕ್ ಪಾಟ್ ಒಲಿಯುವ ಸಾಧ್ಯತೆ ಇದೆ.
ಕೆಲವೇ ತಿಂಗಳುಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೀಗ ನಿರ್ಣಾಯಕವಾಗಿರುವ ಸಚಿವ ಸಂಪುಟ ವಿಸ್ತರಣೆಗೆ ಮುನ್ನುಡಿ ಬರೆಯಲು ಮುಂದಾಗಿದ್ದಾರೆ. ಮಕರ ಸಂಕ್ರಾಂತಿ ಹಬ್ಬ ಮುಗಿದ ಬೆನ್ನಿಗೆ ದೆಹಲಿಗೆ ಹಾರಲು ಸಜ್ಜುಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಕೊನೆಯ ಕ್ಷಣದಲ್ಲಿ ಸಚಿವ ಸಂಪುಟ ವಿಸ್ತರಣೆಯ ಅಗತ್ಯತೆಯನ್ನು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕ ಹಾಗೂ ವರ್ಚಸ್ವಿ ಜನನಾಯಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಕುರಿತು ಈ ಇಬ್ಬರು ಹಿರಿಯ ನಾಯಕರು ವರಿಷ್ಠರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಲಕ್ಷ್ಮಣ ಸವದಿ ಅವರು ಕಳೆದ ಐದು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ನಡೆದ ಹಲವು ಉಪಚುನಾವಣೆಗಳ ಸಾರಥ್ಯ ವಹಿಸಿಕೊಂಡು ಅಲ್ಲೆಲ್ಲ ಬಿಜೆಪಿಯ ಗೆಲುವಿಗೆ ಟೊಂಕ ಕಟ್ಟಿ ನಿಂತು ಪಕ್ಷದ ಅಭ್ಯರ್ಥಿಗಳನ್ನು ಆರಿಸಿ ತಂದಿದ್ದರು. ಮಾತ್ರವಲ್ಲ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸೇರಿದಂತೆ ಹಲವು ರಾಜ್ಯಗಳ ಚುನಾವಣೆ ವೇಳೆ ತೆರಳಿ ಬಿಜೆಪಿ ಗೆಲ್ಲುವಿಗೆ ಕಾರಣಿಕರ್ತರಾಗಿದ್ದರು. ಹೈಕಮಾಂಡ್ ಇದನ್ನೆಲ್ಲ ಗಮನಿಸಿದ್ದು ಈ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಈ ಪ್ರಭಾವಿ ನಾಯಕನಿಗೆ ಮತ್ತೊಮ್ಮೆ ಮಣೆ ಹಾಕುವ ಸಾಧ್ಯತೆ ಇದೆ. ಜೊತೆಗೆ ಈ ಹಿಂದೆ ಅಥಣಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರೂ ಸಹಾ
ಬದಲಾದ ಸನ್ನಿವೇಶದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಅವರಿಗೆ ಮತ್ತೆ ಅಥಣಿಯಲ್ಲಿ ಟಿಕೆಟ್ ನೀಡುವ ಬಗ್ಗೆಯೂ ಪಕ್ಷದ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಲಕ್ಷ್ಮಣ ಸವದಿ ಬಿಜೆಪಿ ಪ್ರಮುಖ ನಾಯಕರು. ಹೀಗಾಗಿ ಈ ಸಲ ಅವರಿಗೆ ಮಂತ್ರಿ ಪಟ್ಟ ಕೊಡಲೇ ಬೇಕು ಎಂದು ಲಿಂಗಾಯತ ಸಂಘಟನೆಗಳು ಹೈಕಮಾಂಡ್ ಮೇಲೆ ಒತ್ತಡ ಹಾಕಿವೆ ಎಂದು ತಿಳಿದು ಬಂದಿದೆ.
ಲಕ್ಷ್ಮಣ ಸವದಿ ಅವರ ಜೊತೆ ಬೆಳಗಾವಿ ಜಿಲ್ಲೆಯವರೇ ಆಗಿರುವ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ, ಶಿವಮೊಗ್ಗ ಶಾಸಕ ಕೆ.ಎಸ್. ಈಶ್ವರಪ್ಪ ಮತ್ತು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೂ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯುವ ಸಾಧ್ಯತೆ ಇದೆ.